Last Updated:
ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 73 ಮತ್ತು 8 ರನ್ಗಳಿಸಿದ್ದ ಕರುಣ್ ನಾಯರ್, ಇದೀಗ 2ನೇ ಸುತ್ತಿನ ಪಂದ್ಯದಲ್ಲು ಗೋವಾ ವಿರುದ್ದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ತಂಡದ ಎಲ್ಲಾ ಬ್ಯಾಟರ್ಗಳು ವಿಫಲರಾದರೂ, ಕರುಣ್ ನಾಯರ್ ಕೊನೆಯವರೆಗೂ ಅಜೇಯರಾಗಿ ಉಳಿದುಕೊಂಡು ತಂಡದ ಅರ್ಧಮೊತ್ತವನ್ನ 300 ಗಡಿ ದಾಟಿಸಿದರು.
ಒಂದೇ ಸರಣಿಯಲ್ಲಿ ವೈಫಲ್ಯವಾಗಿ ಭಾರತ ತಂಡದಿಂದ (Team India) ಹೊರಬಿದ್ದಿರುವ ಕರುಣ್ ನಾಯರ್ (Karun Nair) ಮತ್ತೆ ರಣಜಿ ಟ್ರೋಫಿಯಲ್ಲಿ (Ranji Trophy) ತಮ್ಮ ರನ್ ಮಳೆ ಸುರಿಸುವುದನ್ನ ಮುಂದುವರಿಸಿದ್ದಾರೆ. ಕಳೆದ ವರ್ಷ ದೇಶಿ ಕ್ರಿಕೆಟ್ನಲ್ಲಿ 1800ಕ್ಕೂ ಹೆಚ್ಚು ರನ್ ಸಿಡಿಸಿ ಭಾರತ ತಂಡಕ್ಕೆ 9 ವರ್ಷಗಳ ನಂತರ ಕಮ್ಬ್ಯಾಕ್ ಮಾಡಿದ್ದ ಕರುಣ್, ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಮತ್ತೆ ದೇಶಿ ಕ್ರಿಕೆಟ್ನಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 73 ಮತ್ತು 8 ರನ್ಗಳಿಸಿದ್ದ ಕರುಣ್ ನಾಯರ್, ಇದೀಗ 2ನೇ ಸುತ್ತಿನ ಪಂದ್ಯದಲ್ಲು ಗೋವಾ ವಿರುದ್ದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ತಂಡದ ಎಲ್ಲಾ ಬ್ಯಾಟರ್ಗಳು ವಿಫಲರಾದರೂ, ಕರುಣ್ ನಾಯರ್ ಕೊನೆಯವರೆಗೂ ಅಜೇಯರಾಗಿ ಉಳಿದುಕೊಂಡು ತಂಡದ ಅರ್ಧಮೊತ್ತವನ್ನ 300 ಗಡಿ ದಾಟಿಸಿದರು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 371 ರನ್ಗಳಿಗೆ ಆಲೌಟ್ ಆಗಿದೆ. ಕರುಣ್ 267 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 174 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು. ಕರ್ನಾಟಕ ಪರ ಕರುಣ್ ಹೊರೆತುಪಡಿಸಿ ಶ್ರೇಯಸ್ ಗೋಪಾಲ್ 57 ರನ್ಗಳಿಸಿ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ವೈಶಾಕ್ ವಿಜಯ್ ಕುಮಾರ್ 31, ನಾಯಕ ಮಯಾಂಕ್ ಅಗರ್ವಾಲ್ 28, ಅಭಿನವ್ ಮನೋಹರ್ 37, ಯಶೋವರ್ಧನ್ ಪ್ರತಾಪ್ 14, ಸ್ಮರಣ್ ಆರ್ 3, ನಿಕಿನ್ ಜೋಸ್ 3, ಕೆಎಲ್ ಶ್ರೀಜಿತ್ 0, ಅಭಿಲಾಷ್ ಶೆಟ್ಟಿ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಗೋವಾ ಪರ ಅರ್ಜುನ್ ತೆಂಡೂಲ್ಕರ್ 3 ವಿಕೆಟ್, ವಿ ಕೌಶಿಕ್ 3 ವಿಕೆಟ್, ವಿಶೇಷ್ ಪ್ರಭುದೇಸಾಯಿ 1, ದರ್ಶನ್ ಮಿಸಾಲ್ 2 ವಿಕೆಟ್ ಪಡೆದು ಮಿಂಚಿದರು.
ಕರುಣ್ ನಾಯರ್ 2024-25ರ ಸೀಸನ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ವಿದರ್ಭ ಪರ ಆಡಿದ್ದ ಕರುಣ್ ರಣಜಿ ಟ್ರೋಫಿಯಲ್ಲಿ 9 ಪಂದ್ಯಗಳಿಂದ 863 ರನ್ಗಳಿಸಿದ್ದರು. ಇದರಲ್ಲಿ 4 ಶತಕ, 2 ಅರ್ಧಶತಕಗಳ ಸೇರಿದ್ದವು. ವಿದರ್ಭ ತಂಡ ಚಾಂಪಿಯನ್ ಆಗಿತ್ತು. ವಿಜಯ್ ಹಜಾರೆ ಟ್ರೋಫಿಯಲ್ಲಿ 8 ಇನ್ನಿಂಗ್ಸ್ಗಳಲ್ಲಿ 5 ಶತಕ, 1 ಅರ್ಧಶತಕ ಸಹಿತ 779 ರನ್ಗಳಿಸಿದ್ದರು. ಆದರೆ ವಿದರ್ಭ ತಂಡ ರನ್ನ ಆಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಸೈಯ್ಯದ್ ಮುಷ್ತಾಕ್ ಅಲಿ ಟಿ20ಯಲ್ಲಿ 255 ರನ್ಗಳಿಸಿದ್ದರು.
ಸತತ 2 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕರುಣ್ ನಾಯರ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಯ್ಕೆ ಸಮಿತಿಗೆ ತಮ್ಮ ಸಾಮರ್ಥ್ಯವೇನು ಎಂಬುದನ್ನ ಸಾಬೀತುಪಡಿಸಿದ್ದಾರೆ. ತಂಡದ ಮೊತ್ತ 128ಕ್ಕೆ 5ರಿಂದ 371 ರನ್ಗಳಾಗುವವರೆಗೆ ಏಕಾಂಗಿಯಾಗಿ ಹೋರಾಡಿದ ಆಟ ಅವರು ಮಧ್ಯಮ ಕ್ರಮಾಂಕದಲ್ಲಿ ಶ್ರೇಷ್ಠ ಬ್ಯಾಟರ್ ಎಂಬುದನ್ನ ಸಾಬೀತುಪಡಿಸಿದೆ. ಅಗರ್ಕರ್ ತಂಡ ಮತ್ತೊಮ್ಮೆ ತಮ್ಮತ್ತ ತಿರುಗಿ ನೋಡಬೇಕೆಂದು ಕರುಣ್ ಶತಕದ ಮೂಲಕ ತಿಳಿಸಿದ್ದಾರೆ.
ಕರುಣ್ ನಾಯರ್ 122 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 49ರ ಸರಾಸರಿಯಲ್ಲಿ 8850 ರನ್ಗಳಿಸಿದ್ದಾರೆ. 25 ಶತಕ,38 ಅರ್ಧಶತಕಗಳಿವೆ. ಇನ್ನು 72 ರಣಜಿ ಪಂದ್ಯಗಳಿಂದ 18 ಶತಕ, 19 ಅರ್ಧಶತಕಗಳ ಸಹಿತ 5270 ರನ್ಗಳಿಸಿದ್ದಾರೆ.
October 26, 2025 2:41 PM IST
Karun Nair: ಬೃಹತ್ ಶತಕ ಸಿಡಿಸಿ ಕರ್ನಾಟಕಕ್ಕೆ ನೆರವಾದ ಕರುಣ್ ನಾಯರ್! ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಆಯ್ಕೆ ಸಮಿತಿಗೆ ಬಲವಾದ ಸಂದೇಶ