Last Updated:
ಬೋಪಣ್ಣ ಕೊನೆಯದಾಗಿ ಪ್ಯಾರಿಸ್ ಮಾಸ್ಟರ್ಸ್ 1000 ಪಂದ್ಯಾವಳಿಯಲ್ಲಿ ಕಝಾಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ಆಡಿದ್ದರು. ಆದರೆ, ಈ ಜೋಡಿ 32ನೇ ಸುತ್ತಿನ ಪಂದ್ಯದಲ್ಲಿ ಜಾನ್ ಪೀರ್ಸ್-ಜೇಮ್ಸ್ ಟ್ರೇಸಿ ವಿರುದ್ಧ 5-7, 6-2, 10-8 ಅಂಕಗಳಿಂದ ಸೋತರು.
ಭಾರತೀಯ ಟೆನಿಸ್ ದಂತಕಥೆ ಮತ್ತು ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ರೋಹನ್ ಬೋಪಣ್ಣ (Rohan Bopanna) ವೃತ್ತಿಪರ ಟೆನಿಸ್‌ಗೆ ವಿದಾಯ ಹೇಳಿದ್ದಾರೆ. 45 ವರ್ಷದ ಬೋಪಣ್ಣ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ” ಇದು ಕೇವಲ ವಿದಾಯವಷ್ಟೇ, ಆದರೆ ಅಂತ್ಯವಲ್ಲ. ನನ್ನ ಜೀವನಕ್ಕೆ ಅರ್ಥವನ್ನು ನೀಡಿದ ಈ ಆಟವನ್ನು ನಾನು ಹೇಗೆ ಬಿಡಬಹುದು? ನನ್ನ 20 ವರ್ಷಗಳ ಪ್ರಯಾಣದಲ್ಲಿ ನನಗೆ ಅನೇಕ ಅದ್ಭುತ ನೆನಪುಗಳಿವೆ. ಆದಾಗ್ಯೂ, ನನ್ನ ರಾಕೆಟ್ ಅನ್ನು ಪಕ್ಕಕ್ಕೆ ಇಡುವ ಸಮಯ ಬಂದಿದೆ. ನಾನು ವೃತ್ತಿಪರ ಟೆನಿಸ್‌ನಿಂದ ದೂರವಿರಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಾನು ಭಾರವಾದ ಹೃದಯದಿಂದ ಈ ನೋಟ್ ಬರೆಯುತ್ತಿದ್ದೇನೆ. ಕರ್ನಾಟಕದ ಕೂರ್ಗ್ ಎಂಬ ಸಣ್ಣ ಪಟ್ಟಣದಿಂದ ನನ್ನ ಪ್ರಯಾಣವನ್ನು ಪ್ರಾರಂಭಿಸಿದ್ದೆ, ವಿಶ್ವದ ದೊಡ್ಡ ವೇದಿಕೆಗಳಲ್ಲಿ ಆಡುವುದು ಅಪರೂಪದ ಗೌರವವೆಂದು ನಾನು ಪರಿಗಣಿಸುತ್ತೇನೆ. ಈ ದೀರ್ಘ ಪ್ರಯಾಣದಲ್ಲಿ ಬೆಂಬಲ ನೀಡಿದ್ದಕ್ಕಾಗಿ ನನ್ನ ಪೋಷಕರು, ತರಬೇತುದಾರರು, ಅಭಿಮಾನಿಗಳು ಮತ್ತು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್‌ಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಅವರು ತಮ್ಮ ನಿವೃತ್ತಿ ನೋಟ್ನಲ್ಲಿ ತಿಳಿಸಿದ್ದಾರೆ.
ಬೋಪಣ್ಣ ಕೊನೆಯದಾಗಿ ಪ್ಯಾರಿಸ್ ಮಾಸ್ಟರ್ಸ್ 1000 ಪಂದ್ಯಾವಳಿಯಲ್ಲಿ ಕಝಾಕಿಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ಆಡಿದ್ದರು. ಆದರೆ, ಈ ಜೋಡಿ 32ನೇ ಸುತ್ತಿನ ಪಂದ್ಯದಲ್ಲಿ ಜಾನ್ ಪೀರ್ಸ್-ಜೇಮ್ಸ್ ಟ್ರೇಸಿ ವಿರುದ್ಧ 5-7, 6-2, 10-8 ಅಂಕಗಳಿಂದ ಸೋತರು.
ರೋಹನ್ ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. 43 ನೇ ವಯಸ್ಸಿನಲ್ಲಿ, ಅವರು ಆಸ್ಟ್ರೇಲಿಯನ್ ಓಪನ್ 2024 ರ ಡಬಲ್ಸ್ ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದರು. ಇದು ರೋಹನ್ ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿತ್ತು. ಇದರೊಂದಿಗೆ, ಬೋಪಣ್ಣ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎನಿಸಿಕೊಂಡಿದ್ದರು.
ಬೋಪಣ್ಣ 2017 ರ ಫ್ರೆಂಚ್ ಓಪನ್‌ನಲ್ಲಿ ಗೇಬ್ರಿಯಲ್ ಡಬ್ರೋವ್ಸ್ಕಿ (ಕೆನಡಾ) ಅವರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ಅವರು 26 ಟೂರ್-ಲೆವೆಲ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಆರು ATP ಮಾಸ್ಟರ್ಸ್ 1000 ಪ್ರಶಸ್ತಿಯನ್ನ ಗೆದ್ದಿದ್ದಾರೆ. ತಮ್ಮ 43ನೇ ವಯಸ್ಸಲ್ಲಿ ಎಟಿಪಿ ಮಾಸ್ಟರ್ಸ್ 1000 ಗೆಲ್ಲುವ ಮೂಲಕ, ಈ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಬ್ಯಾಟರ್ ಎನಿಸಿಕೊಂಡಿದ್ದರು.
ಬೋಪಣ್ಣ 3 ಒಲಿಂಪಿಕ್ಸ್ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದಾರೆ. ಮಹಿಳಾ ಟೆನಿಸ್ ಸ್ಟಾರ್ ಸಾನಿಯ ಮಿರ್ಜಾ ಜೊತೆ 2016ರ ರಿಯೋ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದಿರುವುದು ಅತ್ಯುತ್ತಮ ಸಾಧನೆಯಾಗಿದೆ.
2024ರ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ. 1 ಶ್ರೇಯಾಂಕಕ್ಕೇರಿದ್ದರು. 1999 ರಲ್ಲಿ ಲಿಯಾಂಡರ್ ಪೇಸ್ ನಂತರ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೆ ಮಾಡುವುದರ ಮೂಲಕ, ಅವರು ಸಿಂಗಲ್ಸ್ ಮತ್ತು ಡಬಲ್ಸ್, ಪುರುಷರು ಅಥವಾ ಮಹಿಳೆಯರು ಎರಡರಲ್ಲೂ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದರು.
November 01, 2025 7:20 PM IST