ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ಜೈತ್ರಯಾತ್ರೆ ಆರಂಭವಾಗಿದೆ. ಮೇ ತಿಂಗಳ ಪತ್ತನಾಜೆಯವರೆಗೆ ಯಕ್ಷಗಾನ ಮೇಳಗಳು ತಿರುಗಾಟ ನಡೆಸಲಿವೆ. ಈ ಬಾರಿ ತೆಂಕುತಿಟ್ಟಿನಲ್ಲಿ ಎರಡು ಮೇಳಗಳು ಹೊಸದಾಗಿ ಸೇರ್ಪಡೆಯಾಗಿವೆ.
ಯಕ್ಷಗಾನದ ಗಜಮೇಳ ಕಟೀಲು ಯಕ್ಷಗಾನ ಮಂಡಳಿ ತನ್ನ ಏಳನೇ ಹೊಸ ಮೇಳವನ್ನು ಆರಂಭಿಸಲಿದೆ. ನವೆಂಬರ್ 16 ರಂದು ಕಟೀಲು ಮೇಳಗಳು ತಿರುಗಾಟ ಆರಂಭ ನಡೆಸಲಿವೆ. ನೂತನ ಮೇಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯೂ ಡಿಸೆಂಬರ್ 5 ರಂದು ತನ್ನ ತಿರುಗಾಟ ಆರಂಭಿಸಲಿದೆ. ಮೇಳಕ್ಕೆ ಯಾವೆಲ್ಲಾ ಕಲಾವಿದರು ಸೇರ್ಪಡೆಯಾಗಬಹುದು ಎಂಬುದು ಕುತೂಹಲ ಕೆರಳಿಸಿದೆ.
ಈಗಾಗಲೇ ಹಲವು ಮೇಳಗಳು ತನ್ನ ತಿರುಗಾಟ ಆರಂಭಿಸಿವೆ. ಪಾವಂಜೆ, ಕಮಲಶಿಲೆ, ಧರ್ಮಸ್ಥಳ ಮೇಳಗಳು ತಿರುಗಾಟ ಆರಂಭಿಸಿವೆ. ನವೆಂಬರ್ 16 ರಂದು ಕಟೀಲಿನ ಏಳು ಮೇಳಗಳು, ಮಂದಾರ್ತಿಯ ಐದು ಮೇಳಗಳು ತಿರುಗಾಟ ಆರಂಭಿಸಲಿವೆ. ನವೆಂಬರ್ ಏಳರಂದು ಮಾರಣಕಟ್ಟೆಯ ಮೂರು ಮೇಳಗಳು ತಿರುಗಾಟ ಆರಂಭಿಸಲಿವೆ.
ಮಾರಣಕಟ್ಟೆ, ಪೆರ್ಡೂರು, ಸಸಿಹಿತ್ಲು, ಚೋನೆಮನೆ ಶನೀಶ್ವರ ಮೇಳ, ಹನುಮಗಿರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು, ಸುಬ್ರಹ್ಮಣ್ಯ, ನೀಲಾವರ, ಕಳವಾಡಿ, ಸೂರಾಲು, ಬಪ್ಪನಾಡು, ಮಡಾಮಕ್ಕಿ, ಗೋಳಿಗರಡಿ, ಸಿಗಂದೂರು, ಕಳವಾರು, ಮೆಕ್ಕೆಕಟ್ಟು ಸುಂಕದಕಟ್ಟೆ ಅಮೃತೇಶ್ವರಿ, ಗುತ್ಯಮ್ಮ, ಗಜ್ಜೆಗಿರಿ, ಬಾಚಕೆರೆ, ನಾಳ, ತಲಕಳ, ಹಟ್ಟಿಯಂಗಡಿ, ಸೂಡ, ಮೊದಲಾದ ಮೇಳಗಳು ಶೀಘ್ರ ತಿರುಗಾಟ ನಡೆಸಲಿವೆ.
ಈ ಸಲದ ಮೇಳಗಳ ಸ್ಪೆಷಲ್ ಏನು?
ಡಾ| ಪವನ್ ಕಿರಣ್ ಕೆರೆ ಅವರ ಚದುರಂಗ ಪೆರ್ಡೂರು ಮೇಳದಲ್ಲಿ, ಪಂಜರ ಪಕ್ಷಿ ಹಾಲಾಡಿ ಮೇಳದಲ್ಲಿ, ಬಸವರಾಜ ಶೆಟ್ಟಿಗಾರರ ರಚನೆಯ ತುಳುನಾಡ ದೈವೋದ್ಭವ ಪಾವಂಜೆ ಮೇಳದಲ್ಲಿ, ಕಳವಾಡಿ ಮೇಳದಲ್ಲಿ ಉಪ್ಪುಂದ ಕ್ಷೇತ್ರ ಮಹಾತ್ಮೆ, ನೀಲಾವರ ಮೇಳದವರಿಂದ ನೀಲಾವರ ಕಲ್ಲುರಾಶಿ ಕಲ್ಕುಡ ಮಹಾತ್ಮೆ, ಸುಬ್ರಹ್ಮಣ್ಯ ಮೇಳದಿಂದ ಕಾರ್ಣಿಕದ ಕಾಲಭೈರವ, ಹನುಮಗಿರಿ ಮೇಳದಲ್ಲಿ ವಾಸುದೇವ ರಂಗಾಭಟ್ ಕಥಾ ಸಂಯೋಜನೆ, ಮೊಗೆಬೆಟ್ಟು ಪ್ರಸಾದ್ ಕುಮಾರ್ ಪದ್ಯರಚನೆಯ ವರ್ಣಪಲ್ಲಟ ಸಾಲಿಗ್ರಾಮ ಮೇಳದಲ್ಲಿ, ದೇವದಾಸ ಈಶ್ವರಮಂಗಲ ಅವರ ಷಣ್ಮುಖಪ್ರಿಯ, ನಂದೀಶ್ ಶೆಟ್ಟಿ ಜಿಲ್ಲಾಡಿಯವರ ಸ್ವಪ್ನ ಮಂಟಪ, ಸೂರಾಲು ಮೇಳದಲ್ಲಿ ಪಿ.ವಿ.ಆನಂದ ರಚನೆಯ ಕಾಜ್ರಳ್ಳಿ ವನದುರ್ಗಾ ಮಹಾತ್ಮೆ, ಯಕ್ಷಾನಂದ ಕುತ್ಪಾಡಿ ಅವರ ಮಾತೃಮಂದಿರ, ಮನೋಜ್ ಕೆ.ಜೆ. ಅವರ ಶ್ರೀ ಕಲ್ಯಾಣಿ, ಸಸಿಹಿತ್ತು ಮೇಳದಲ್ಲಿ ದೇವದಾಸ ಈಶ್ವರಮಂಗಲ ಅವರ ಬಂಟಮಲೆ ಭಾರ್ಗವಿ, ವಸಂತ ಬಂಟ್ವಾಳ ಕಥೆ, ಮಾಧವ ಭಂಡಾರಿ ಪದ್ಯ ರಚನೆಯ ಸೋಣ ಸಂಕ್ರಾಂತಿ ಪ್ರಸಂಗಗಳು ಪ್ರದರ್ಶನಕ್ಕೆ ಸಜ್ಜಾಗಿವೆ. ಇನ್ನೂ ಅನೇಕ ಹೊಸ ಕಥಾನಕಗಳು ರಂಗದಲ್ಲಿ ಸಾಕಾರಗೊಳ್ಳಲಿವೆ. ತೆಂಕು ಮತ್ತು ಬಡಗುತಿಟ್ಟಿನಲ್ಲಿ 45 ಕ್ಕೂ ಅಧಿಕ ಮೇಳಗಳಿದ್ದು, ಪ್ರತೀ ವರ್ಷ 7,200 ಕ್ಕೂ ಅಧಿಕ ಪ್ರದರ್ಶನ ನಡೆಸುತ್ತದೆ.
Dakshina Kannada,Karnataka
November 09, 2025 10:24 AM IST