Lottery: ಇದು ಅದೃಷ್ಟದ ಆಟ, ಕೇರಳದ ಲಕ್ಷ್ಮಿ ಒಲಿಯೋದು ಯಾರಿಗೆ? ಗಡಿ ಭಾಗದಲ್ಲಿ ಕಾವೇರಿಸೋ ಹಣೆಬರಹದ ಟೋಕನ್ನು! | Dakshinakannada Kerala border lottery shops exposed | ದಕ್ಷಿಣ ಕನ್ನಡ

Lottery: ಇದು ಅದೃಷ್ಟದ ಆಟ, ಕೇರಳದ ಲಕ್ಷ್ಮಿ ಒಲಿಯೋದು ಯಾರಿಗೆ? ಗಡಿ ಭಾಗದಲ್ಲಿ ಕಾವೇರಿಸೋ ಹಣೆಬರಹದ ಟೋಕನ್ನು! | Dakshinakannada Kerala border lottery shops exposed | ದಕ್ಷಿಣ ಕನ್ನಡ

Last Updated:

ಕರ್ನಾಟಕದಲ್ಲಿ ಲಾಟರಿ ನಿಷಿದ್ಧವಾದರೂ, ಪುತ್ತೂರು ಸುಳ್ಯ ತಲಪಾಡಿ ಭಾಗಗಳಲ್ಲಿ ಕೇರಳ ಗಡಿಯಲ್ಲಿ ಲಾಟರಿ ಅಂಗಡಿಗಳು ಹೆಚ್ಚಿದ್ದು, ಜನ ಅದೃಷ್ಟಕ್ಕಾಗಿ ಲಾಟರಿ ಖರೀದಿಸುತ್ತಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣಕನ್ನಡ: ಇತ್ತೀಚಿಗೆ ನೀವು ಸುದ್ದಿಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ (Social Media) ನೋಡಿರ್ತೀರಿ ಅಥವಾ ಕೇಳಿರ್ತೀರಿ. ಅವರ್ಯಾರಿಗೋ ಅದೆಷ್ಟೋ ಲಕ್ಷ ಲಾಟರಿ (Lottery) ಹತ್ತಿತಂತೆ, ಆತ ಆಟೋ ಡ್ರೈವರ್ ಆಗಿದ್ನಂತೆ, ಕೂಲಿ ಮಾಡೋ ಹುಡುಗನಿಗೆ 50 ಲಕ್ಷ ಲಾಟರಿ ಹೊಡೀತಂತೆ ಅನ್ನೋ ಸುದ್ದಿಗಳು ಬರ್ತಾನೆ ಇರ್ತಾವೆ. ಆದ್ರೆ ಲಾಟರಿ ಕರ್ನಾಟಕದಲ್ಲಿ (Karnataka) ನಿಷಿದ್ಧ. ಆದರೂ ಒಂದು ಜಮಾನಾದಲ್ಲಿ (Era) ಲಾಟರಿ ಸಾರ್ವತ್ರಿಕವಾಗಿತ್ತು.

ಕೇರಳ ಗಡಿಯಲ್ಲಿ ಲಾಟರಿ ಭರಾಟೆ

ಅದೃಷ್ಟದ ಬೆನ್ನು ಹತ್ತುವವರು ವಿವಿಧ ಸ್ಕೀಂ, ಲಾಟರಿ, ಲಕ್ಕೀ ಡ್ರಾ ಹೀಗೆ ಹಲವರು ಅದೃಷ್ಟ ಆಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳೋದು ಸಾಮಾನ್ಯ. ಇಂತಹ ಅದೃಷ್ಟದ ಆಟದಲ್ಲಿ ಲಾಟರಿ ಕೂಡಾ ಒಂದಾಗಿದೆ. ಕರ್ನಾಟಕದಲ್ಲಿ ಲಾಟರಿ ನಿಷೇಧವಾಗಿದ್ದರೂ, ಕೇರಳ ಗಡಿಭಾಗವನ್ನು ಹಂಚಿಕೊಂಡಿರುವ ಕರ್ನಾಟಕದ ಭಾಗಗಳೆಲ್ಲಾ ಈ ಲಾಟರಿ ಅಂಗಡಿಗಳು ಯಥೇಚ್ಛವಾಗಿ ತೆರೆದು ನಿಂತಿವೆ. ದಕ್ಷಿಣಕನ್ನಡ ಜಿಲ್ಲೆಯ ಗಡಿಭಾಗವಾದ ಪುತ್ತೂರು, ಸುಳ್ಯ ಮತ್ತು ತಲಪಾಡಿ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಲಾಟರಿ ಅಂಗಡಿಗಳಿವೆ.

ಲಾಟರಿ ಕೊಳ್ಳೋರಿಗೂ ಲಾಭ, ಕೊಟ್ಟೋರಿಗೂ ಲಾಭ

ಈ ಲಾಟರಿ ಅಂಗಡಿಗಳನ್ನು ನಡೆಸುತ್ತಿರುವ ಎಲ್ಲರೂ ಬಡವರೇ ಆಗಿದ್ದು, ಜೀವನ ನಿರ್ವಹಣೆಗಾಗಿ ಲಾಟರಿ ಮಾರುವ ಕಾಯಕದಲ್ಲಿ ತೊಡಗಿಕೊಂಡವರಾಗಿದ್ದಾರೆ. ಒಂದು ಲಾಟರಿ ಮಾರಾಟವಾದರೆ, ಆ ಲಾಟರಿ ಟಿಕೆಟ್‌ನ ಮುಖಬೆಲೆಯ 10 ಶೇಕಡಾ ಹಣ ಮಾರಾಟಗಾರರಿಗೆ ಸಿಗುತ್ತೆ. ಅಂದರೆ ಒಂದು ಲಾಟರಿ ಮುಖಬೆಲೆ 50 ರೂಪಾಯಿಗಳಾಗಿದ್ದಲ್ಲಿ, ಅದು ಮಾರಾಟವಾದಲ್ಲಿ ಮಾರಾಟಗಾರನಿಗೆ 5 ರೂಪಾಯಿಗಳ ಕಮಿಷನ್ ಸಿಗುತ್ತೆ.

ಬೆಳಿಗ್ಗೆಯಿಂದ ಸಂಜೆವರೆಗೆ ಲಾಟರಿ ಮಾರ್ಕೆಟ್‌ ಖುಲ್ಲಂಖುಲ್ಲಾ!

ಈ ಕಮಿಷನ್ ಜೊತೆಗೆ ಮಾರಾಟವಾದ ಲಾಟರಿಗೆ ಬಹುಮಾನ ಬಂದಲ್ಲಿ, ಆ ಬಹುಮಾನದಲ್ಲೂ 10 ಶೇಕಡಾ ಹಣ ಮಾರಾಟಗಾರನಿಗೆ ಕಮಿಷನ್ ರೂಪದಲ್ಲಿ ಸಿಗುತ್ತೆ. ಈ ಕಾರಣಕ್ಕಾಗಿ ತಮ್ಮ ಬಳಿ ಬರುವ ಗ್ರಾಹಕನಿಗೆ ಒಳ್ಳೆಯ ಅದೃಷ್ಟ ಸಿಗಲಿ ಎಂದು ಹಾರೈಸುವ ಏಕೈಕ ಮಾರಾಟಗಾರರೆಂದರೆ ಅದು ಲಾಟರಿ ಟಿಕೆಟ್ ಮಾರಾಟಗಾರರಾಗಿದ್ದಾರೆ. ತನ್ನ ಬಳಿ ಬರುವ ಎಲ್ಲಾ ಗ್ರಾಹಕನಿಗೂ ಅದೃಷ್ಟ ಒಲಿಯಲಿ ಎಂದು ಆಶಿಸುವ ಈ ಲಾಟರಿ ಮಾರಾಟಗಾರರು, ಗ್ರಾಹಕನ ಅದೃಷ್ಟಕ್ಕಾಗಿ ಹಾತೊರೆಯುವವರಾಗಿದ್ದಾರೆ. ಗ್ರಾಹಕನ ಮನೆ ಬೆಳಗಿದರೆ, ತನ್ನ ಮನೆಯೂ ಬೆಳಗುತ್ತದೆ ಎಂದು ಬೆಳಗ್ಗಿನಿಂದ ಸಂಜೆಯ ತನಕ ಮಳೆ, ಬಿಸಿಲೆನ್ನದೆ ಈ ಲಾಟರಿ ಮಾರಾಟಗಾರರು ದುಡಿಯುತ್ತಾರೆ.

ಗೀಳಾಗದಿರಲಿ ಅದೃಷ್ಟದ ಆಟ!

ಇದನ್ನೂ ಓದಿ: Porcupine Rescue: ನಾಯಿಯಿಂದ ಜಸ್ಟ್ ಪಾರಾದ ಚಿಪ್ಪುಹಂದಿ, ರಕ್ಷಣೆ ಮಾಡಿದವರಿಗೆ ಧನ್ಯವಾದ!

ಕೇರಳ ರಾಜ್ಯದಲ್ಲಿ ಲಾಟರಿ ಮಾರಾಟಕ್ಕೆ ಮುಕ್ತ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯ ಜನ ಒಂದಲ್ಲ ಒಂದು ಲಾಟರಿಯನ್ನು ಖರೀದಿಸುವವರೇ ಆಗಿದ್ದಾರೆ. ಅದರ ಜೊತೆಗೆ‌ ಕೇರಳದ ಗಡಿಭಾಗವನ್ನು ಹಂಚಿಕೊಂಡಿರುವ ಕರ್ನಾಟಕದ ಭಾಗದಲ್ಲೂ ಲಾಟರಿ ಖರೀದಿಯ ಭರಾಟೆ ಹೆಚ್ಚಾಗಿದೆ. ತನಗೆ ಅದೃಷ್ಟ ಒಲಿದು, ಜೀವನಕ್ಕೆ ಆಧಾರವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಜನ ಲಾಟರಿ ಖರೀದಿಸಲು ಮುಂದಾಗುತ್ತಿದ್ದು, ಲಾಟರಿ‌ ಖರೀದಿಸುವ ಹುಚ್ಚನ್ನು ಹತ್ತಿಸಿಕೊಂಡಲ್ಲಿ ಮಾತ್ರ ಇದ್ದದ್ದನ್ನೂ ಕಳೆದುಕೊಳ್ಳೋದೂ ಕೂಡಾ ಗ್ಯಾರಂಟಿ‌.