Ashok Kumar Rai: ಬೆಂಗಳೂರಿನ ಕೈಗಾರಿಕೆಗಳಿಗೆ ಎತ್ತಿನಹೊಳೆ ಯೋಜನೆ ನೀರು; ಸರ್ಕಾರದ ಪ್ರಸ್ತಾಪಕ್ಕೆ ಕೈ ಶಾಸಕರ ವಿರೋಧ | Puttur MLA Ashok kumar rai opposes Yettinahole Project water to Bengaluru Industries | ದಕ್ಷಿಣ ಕನ್ನಡ

Ashok Kumar Rai: ಬೆಂಗಳೂರಿನ ಕೈಗಾರಿಕೆಗಳಿಗೆ ಎತ್ತಿನಹೊಳೆ ಯೋಜನೆ ನೀರು; ಸರ್ಕಾರದ ಪ್ರಸ್ತಾಪಕ್ಕೆ ಕೈ ಶಾಸಕರ ವಿರೋಧ | Puttur MLA Ashok kumar rai opposes Yettinahole Project water to Bengaluru Industries | ದಕ್ಷಿಣ ಕನ್ನಡ

Last Updated:

ಸರ್ಕಾರ ಎತ್ತಿನಹೊಳೆ ಯೋಜನೆಗೆ ಎಷ್ಟು ಅನುದಾನ ಕೊಡುತ್ತಿದೆಯೋ ಅಷ್ಟೇ ಅನುದಾನವನ್ನು ಪಶ್ಚಿಮವಾಹಿನಿ ಯೋಜನೆಗೂ ಕೊಡಿ. ಅನುದಾನವನ್ನು ಬಿಡುಗಡೆ ಮಾಡಿ, ಯೋಜನೆ ಪೂರ್ಣಗೊಳಿಸಿ. ಆ ಬಳಿಕ ಎತ್ತಿನಹೊಳೆ ಯೋಜನೆಯ ನೀರನ್ನು ಕೈಗಾರಿಕೆಗೆ ನೀಡುವ ಯೋಜನೆ ಮಾಡಿ ಶಾಸಕ ಅಶೋಕ್ ಕುಮಾರ್ ರೈ ಒತ್ತಾಯ ಮಾಡಿದ್ದಾರೆ.

ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ (ಸಾಂದರ್ಭಿಕ ಚಿತ್ರ)
ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ (ಸಾಂದರ್ಭಿಕ ಚಿತ್ರ)

ಪುತ್ತೂರು: ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ‘ಎತ್ತಿನಹೊಳೆ ಯೋಜನೆ’ಗೆ (Yettinahole Project) ‘ಕೇಂದ್ರ ಅರಣ್ಯ ಸಚಿವಾಲಯದ ತಜ್ಞರ ಸಮಿತಿ’ ಬ್ರೇಕ್ ಹಾಕಿದೆ. ಹಾಸನ-ತುಮಕೂರು (Tumakuru) ಜಿಲ್ಲೆಗಳ ವ್ಯಾಪ್ತಿಯಲ್ಲಿನ 430ಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ತಜ್ಞರ ಸಮಿತಿ ತಾತ್ವಿಕ ಅನುಮೋದನೆ ನೀಡಲು ಒಪ್ಪಿಕೊಂಡಿಲ್ಲ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಕೇಂದ್ರ ಬಿಗ್ ಶಾಕ್ ನೀಡಿದೆ. ಇದರ ನಡುವೆಯೇ ಎತ್ತಿನಹೊಳೆ ಯೋಜನೆಯ ನೀರು ಬೆಂಗಳೂರಿನ ಕೈಗಾರಿಕೆಗಳಿಗೆ (Bengaluru Industrial Area) ಬಳಕೆ ಮಾಡುವ ಸರ್ಕಾರದ ಪ್ರಸ್ತಾಪಕ್ಕೆ ಕಾಂಗ್ರೆಸ್ ಶಾಸಕರೇ (Congress MLA Ashok Kumar Rai) ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಎತ್ತಿನಹೊಳೆ ಯೋಜನೆಯ ನೀರು ಬೆಂಗಳೂರಿನ ಕೈಗಾರಿಕೆಗಳಿಗೆ ಬಳಕೆ ಮಾಡುವ ಬಗ್ಗೆ ಮಾಧ್ಯಮಗಳು ವರದಿಗಳನ್ನು ಪ್ರಕಟ ಮಾಡಿವೆ. ವರದಿಯಲ್ಲಿ ಬೆಂಳೂರಿನ ಕೈಗಾರಿಕೆಗಳಿಗೆ ಎತ್ತಿನಹೊಳೆ ನೀರು ಎಂಬುವುದನ್ನು ಪ್ರಸ್ತಾಪ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ಕೆಲವು ಅಂಶಗಳನ್ನು ತರಲು ಇಚ್ಛಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಅಂದರೆ ಫೆಬ್ರವರಿ, ಮಾರ್ಚ್​, ಏಪ್ರಿಲ್ ತಿಂಗಳಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗ್ತಿದೆ. ಅಂತರ್ಜಲ ಕಡಿಮೆ ಆಗ್ತಿದೆ. ಕೃಷಿಗೆ ಬೋರ್ ವೆಲ್ ಗಳಲ್ಲಿ ನೀರು ಸಿಗುತ್ತಿಲ್ಲ. ಕುಡಿಯುವ ನೀರು ಸಿಗೋದು ಕಷ್ಟ ಆಗಿದೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಕೈಗಾರಿಕೆಗಳಿಗೆ ಎತ್ತಿನಹೊಳೆ ನೀರನ್ನು ತೆಗೆದುಕೊಂಡು ಹೋಗುವ ಯೋಚನೆಗಳು ಇದ್ದರೆ, ಅದನ್ನು ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ. ಅಂತಹ ಯೋಜನೆಗಳು ಇದ್ದರೆ, ಪಶ್ಚಿಮವಾಹಿನಿಗೆ ಡ್ಯಾಂ ಆಗಬೇಕಿದೆ, ಕುಮಾರದಾರಕ್ಕೆ ಡ್ಯಾಂ ನಿರ್ಮಾಣ ಮಾಡಬೇಕಿದೆ. ಅಣೆಕಟ್ಟು ನಿರ್ಮಾಣ ಮಾಡಲು ಪಶ್ಚಿಮವಾಹಿನಿಗೆ ಅನುದಾನ ಕೊಟ್ಟು ಡ್ಯಾಂ ನಿರ್ಮಾಣ ಮಾಡಿ. ಆ ಬಳಿಕ ಬೆಂಗಳೂರಿನ ಕೈಗಾರಿಕೆಗಳಿಗೆ ನೀರು ತೆಗೆದುಕೊಂಡು ಹೋಗುವ ಕೆಲಸ ಮಾಡಿ ಎಂದು ತಿಳಿಸಿದರು.

ಇದನ್ನೂ ಓದಿ: Rain Alert: ಮುಂದಿನ ಎರಡು ಮೂರು ದಿನ ಭಾರೀ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ!

ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡೋದು ಎಷ್ಡು ಸರಿ? ಈ ಯೋಜನೆಗೆ ನನ್ನ ಪೂರ್ಣ ವಿರೋಧವಿದೆ. ಎತ್ತಿನಹೊಳೆ ಯೋಜನೆಯ ನೀರನ್ನು ಕೈಗಾರಿಕೆಗಳಿಗೆ ಪೂರೈಸುವ ಮೊದಲು ಪಶ್ಚಿಮವಾಹಿನಿ ಯೋಜನೆಗೆ ಬೇಕಾದ ಅನುದಾನ ಬಿಡುಗಡೆ ಮಾಡಿ. ಜಿಲ್ಲೆಯಲ್ಲಿ ಹರಿಯುವ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ನೀರು ಸಂಗ್ರಹಿಸುವ ಪಶ್ಚಿಮವಾಹಿನಿ ಯೋಜನೆಗೆ ಅನುದಾನ ಕೊಡಿ. ಸರ್ಕಾರ ಎತ್ತಿನಹೊಳೆ ಯೋಜನೆಗೆ ಎಷ್ಟು ಅನುದಾನ ಕೊಡುತ್ತಿದೆಯೋ ಅಷ್ಟೇ ಅನುದಾನವನ್ನು ಪಶ್ಚಿಮವಾಹಿನಿ ಯೋಜನೆಗೂ ಕೊಡಿ. ಅನುದಾನವನ್ನು ಬಿಡುಗಡೆ ಮಾಡಿ, ಯೋಜನೆ ಪೂರ್ಣಗೊಳಿಸಿ. ಆ ಬಳಿಕ ಎತ್ತಿನಹೊಳೆ ಯೋಜನೆಯ ನೀರನ್ನು ಕೈಗಾರಿಕೆಗೆ ನೀಡುವ ಯೋಜನೆ ಮಾಡಿ ಶಾಸಕ ಅಶೋಕ್ ಕುಮಾರ್ ರೈ ಒತ್ತಾಯ ಮಾಡಿದ್ದಾರೆ. (ವರದಿ: ಕಿಶನ್ ಶೆಟ್ಟಿ, ನ್ಯೂಸ್18 ಕನ್ನಡ, ಮಂಗಳೂರು)