Last Updated:
ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ವೈಭವ ನವೆಂಬರ್ 16 ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 350 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ 15 ಕ್ಕೂ ಮಿಕ್ಕಿದ ಕಲಾಪ್ರಕಾರಗಳ ಪ್ರದರ್ಶನ.
ದಕ್ಷಿಣಕನ್ನಡ: ಕೇವಲ ಆಳ್ವಾಸ್ ಕ್ಯಾಂಪಸ್ಗೆ (Campus) ಸೀಮಿತವಾಗಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು (Program) ಜಿಲ್ಲೆಯ ವಿವಿಧ ವೇದಿಕೆಗಳಲ್ಲಿ (Stage) ಪರಿಚಯಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ನಿರ್ಧರಿಸಿದ್ದು, ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ದೇಶದ ವಿವಿಧ ಕಲೆಗಳ ಸಮಾಗಮ ನವೆಂಬರ್ 16 ರಂದು ನಡೆಯಲಿದೆ. ಪುತ್ತೂರಿನ (Puttur) ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಈ ಸಾಂಸ್ಕೃತಿಕ ವೈಭವ ನಡೆಯಲಿದೆ.
ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾಗಿರುವ ರಾಜ್ಯ ಮತ್ತು ದೇಶದಲ್ಲಿ ಹೆಸರುವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತೀ ವರ್ಷ ಆಳ್ವಾಸ್ ವಿರಾಸತ್ ಮತ್ತು ಆಳ್ವಾಸ್ ನುಡಿಸಿರಿ ಎನ್ನುವ ಹೆಸರಿನಲ್ಲಿ ಕಲೆ, ಸಂಸ್ಕೃತಿಗಳ ವಿಶ್ವರೂಪ ದರ್ಶನ ನಡೆಯುತ್ತದೆ. ಎರಡೂ ಕಾರ್ಯಕ್ರಮಗಳಲ್ಲಿ ದೇಶ-ವಿದೇಶಗಳಲ್ಲಿ ಖ್ಯಾತಿವೆತ್ತ ಕಲಾದಿಗ್ಗಜರು ಭಾಗಿಯಾಗಿ ಕಲಾರಸಿಕರನ್ನ ರಂಜಿಸುತ್ತಾರೆ.
ಜಿಲ್ಲೆಯ ಎಲ್ಲಾ ಜನ ದೇಶದ ಎಲ್ಲಾ ರಾಜ್ಯಗಳ ಕಲೆ-ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಆಳ್ವಾಸ್ ವಿರಾಸತ್ ಕಾರ್ಯಕ್ರಮವನ್ನು ಆಳ್ವಾಸ್ ಕ್ಯಾಂಪಸ್ನಿಂದ ಹೊರಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ದೇಶದೆಲ್ಲೆಡೆಯಿಂದ ಬಂದ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ವಿವಿಧ ಕಲಾತಂಡಗಳನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳ ಈ ಕಲಾತಂಡ ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಕಲಾರಸಿಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ನವೆಂಬರ್ 16 ರಂದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಈ ಬಾರಿ ವಿರಾಸತ್ ಸಾಂಸ್ಕೃತಿಕ ವೈಭವ ನಡೆಯಲಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಸುಮಾರು 350 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಬಹುತೇಕ ಎಲ್ಲಾ ರಾಜ್ಯಗಳ ಕಲೆಯನ್ನು ಪ್ರದರ್ಶಿಸಲಿದ್ದಾರೆ.
ಮಣಿಪುರದ ಸ್ಟಿಕ್ ಡ್ಯಾನ್ಸ್, ಗುಜರಾತಿನ ದಾಂಡಿಯಾ, ಪುರುಲಿಯಾ, ಕಥಕ್ ಸೇರಿದಂತೆ 15 ಕ್ಕೂ ಮಿಕ್ಕಿದ ಕಲಾಪ್ರಕಾರಗಳು ಕಲಾರಸಿಕರ ಗಮನಸೆಳೆಯಲಿದೆ. ಒಟ್ಟು 3 ಗಂಟೆಗಳ ಕಾಲ ನಡೆಯಲಿರುವ ಈ ವಿರಾಸತ್ ಕಾರ್ಯಕ್ರಮದಲ್ಲಿ 350 ಕ್ಕೂ ಮಿಕ್ಕಿದ ವಿದ್ಯಾರ್ಥಿ ಕಲಾವಿದರು ತಮ್ಮ ಅದ್ಭುತ ಕಲಾ ಪ್ರದರ್ಶನವನ್ನು ನೀಡಲಿದ್ದಾರೆ.
15 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಯಲಿದ್ದು, 15 ಸಾವಿರಕ್ಕಿಂತಲೂ ಮಿಕ್ಕಿದ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ಜನ ಈ ಕಾರ್ಯಕ್ರಮಗಳನ್ನು ಜನ ಒಪ್ಪಿಕೊಂಡಿದ್ದು, ಪುತ್ತೂರಿನಲ್ಲೂ ಭರ್ಜರಿ ಯಶಸ್ವಿ ಕಾಣುವ ಲಕ್ಷಣ ತೋರಲಾರಂಭಿಸಿದೆ.
Dakshina Kannada,Karnataka
November 12, 2025 5:16 PM IST