Last Updated:
ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿಗೆ ಪುತ್ತೂರಿನಲ್ಲಿ ಕಾರ್ಯಕ್ರಮ, ಮಾಜಿ ಚಾಲಕ ಬಲ್ಯಾಣ ಕುಶಾಲಪ್ಪ ಗೌಡರಿಗೆ ಸನ್ಮಾನ, ವಾಜಪೇಯಿಯವರ ನೆನಪು ಹಂಚಿಕೊಂಡರು.
ದಕ್ಷಿಣ ಕನ್ನಡ: ಅಟಲ್ ಈ ಹೆಸರೇ ಸಾಕು, ಅಸೇತುಹಿಮಾಚಲದವರೆಗೆ ರೋಮಾಂಚನ ಮಾಡೋ ವ್ಯಕ್ತಿತ್ವ, ಕವಿ ಹೃದಯದ, ರಾಜ ನಿಲುವಿನ, ಧರ್ಮ ಪ್ರಜ್ಞೆಯ ವ್ಯಕ್ತಿರೂಪವೇ ವಾಜಪೇಯಿ. ಎಮರ್ಜನ್ಸಿ, ಕಾರ್ಗಿಲ್, ಪೋಖ್ರಾನ್ ಒಂದೇ ಎರಡೇ ಶ್ರೀ ಕೃಷ್ಣನನ್ನು ಬಿಟ್ಟರೆ ಯಾರಾದರೂ ದೇಶಕ್ಕೆ (Nation) ಈ ರೀತಿ ಮಾರ್ಗದರ್ಶನ ನೀಡಿ ಗೆಲ್ಲಿಸಿದ್ದಾರೆಂದರೆ ಅದು ಅಟಲ್ ಮಾತ್ರ ಎಂಬುದು ಸ್ಫಟಿಕದ ಹೊಳಪಿನಷ್ಟೇ ಸತ್ಯ! ಅಜಾತಶತ್ರು, ಮಾಜಿ ಪ್ರಧಾನಿ (Prime Minister) ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ವರ್ಷದ ಜನ್ಮಶತಾಬ್ದಿಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದೆ. ವಾಜಪೇಯಿ ಜೊತೆಗೆ ಗುರುತಿಸಿಕೊಂಡವರನ್ನು ಸನ್ಮಾನಿಸುವ (Honor) ಕಾರ್ಯವೂ ಎಲ್ಲೆಡೆ ನಡೆದಿದೆ.
ವಾಜಪೇಯಿ ದೇಶದ ಪ್ರಧಾನಿ ಆಗುವ ಮೊದಲೇ ಇಡೀ ದೇಶ ಸುತ್ತಿ ಬಿಜೆಪಿಯನ್ನು ಸಂಘಟಿಸಿದ್ದರು. ಅದೇ ರೀತಿ ಸಂಸತ್ತಿನಲ್ಲಿ ವಿರೋಧ ಪಕ್ಷ ನಾಯಕನಾಗಿ ದೇಶದ ಜನರ ಪರವಾಗಿ ಧ್ವನಿಯನ್ನು ಎತ್ತಿದ್ದರು. ವಾಜಪೇಯಿ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅವರು ಬೆಂಗಳೂರು ಹಾಗೂ ಇತರ ಭಾಗಗಳಿಗೆ ಬಂದ ಸಂದರ್ಭದಲ್ಲಿ ಅವರ ಕಾರಿನ ಸಾರಥಿಯಾಗಿದ್ದವರು ಕೊಡಗು ಜಿಲ್ಲೆಯ ಮದೆನಾಡು ನಿವಾಸಿ ಬಲ್ಯಾಣ ಕುಶಾಲಪ್ಪ ಗೌಡರು. ಸುಮಾರು 15 ವರ್ಷಗಳ ಕಾಲ ಅವರು ವಾಜಪೇಯಿಯವರ ಕಾರು ಚಾಲಕರಾಗಿ ದುಡಿದವರು.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನವೆಂಬರ್ 19 ರಂದು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ದಿ ಆಚರಣೆ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದ ವಿಚಾರವನ್ನು ತಿಳಿದು ಕುಶಾಲಪ್ಪ ಗೌಡರು ಪುತ್ತೂರಿಗೆ ಆಗಮಿಸಿದ್ದರು. ಹೀಗೆ ಬಂದ ಕುಶಾಲಪ್ಪ ಗೌಡ ದಂಪತಿಗಳನ್ನು ಬಿಜೆಪಿ ಪಕ್ಷದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸುವ ಕಾರ್ಯಕ್ರಮ ಮಾಡಲಾಗಿದೆ. ವಾಜಪೇಯಿಯವರು 1989 ರ ವೇಳೆಗೆ ಬೆಂಗಳೂರಿಗೆ ಬಂದಾಗ ಕುಶಾಲಪ್ಪನವರಿಗೆ ಸ್ಥಳೀಯ ಮುಖಂಡರೊಬ್ಬರ ಮೂಲಕ ವಾಜಪೇಯಿಯವರ ಪರಿಚಯವಾಗಿತ್ತು.
ಬೆಂಗಳೂರಿನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯುತ್ತಿದ್ದ ಕುಶಾಲಪ್ಪರು ವಾಜಪೇಯಿ ಪುಟ್ಟಪರ್ತಿಗೆ ಹೋಗುವ ಸಂದರ್ಭದಲ್ಲಿ ಅವರ ಕಾರಿನ ಚಾಲಕನಾಗಿ ಮೊದಲು ಕಾರ್ಯ ನಿರ್ವಹಿಸಿದ್ದರು. ಪುಟ್ಟಪರ್ತಿ, ನಂದಿಬೆಟ್ಟ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮೊದಲಾದ ಕಡೆಗಳಲ್ಲಿ ವಾಜಪೇಯಿ ಮೀಟಿಂಗ್ ಮಾಡಲು ಹೋದ ಸಂದರ್ಭದಲ್ಲೆಲ್ಲಾ ಕುಶಾಲಪ್ಪರು ವಾಜಪೇಯಿಯವರಿಗೆ ಸಾರಥಿಯಾಗಿದ್ದರು.
ವಾಜಪೇಯಿ ನೆನಪಿನಲ್ಲಿ ಕುಶಾಲಪ್ಪನವರ ಭಾವುಕತೆ
ವಾಜಪೇಯಿ ಕುಶಾಲಪ್ಪರ ಜೊತೆಗೆ ಫೋಟೋ ತೆಗೆಸಿಕೊಂಡು ಗುಡ್ ಡ್ರೈವಿಂಗ್ ಎನ್ನುವ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಅತ್ಯಂತ ಸರಳ ಸ್ವಭಾವದ ಸಾಕಾರಮೂರ್ತಿಯಂತಿದ್ದ ವಾಜಪೇಯಿಯವರನ್ನ ನೆನಪಿಸುವ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಕುಶಾಲಪ್ಪರು ನೇರವಾಗಿ ಪುತ್ತೂರಿಗೆ ಆಗಮಿಸಿ ವಾಜಪೇಯಿ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕುಶಾಲಪ್ಪ ಗೌಡ ಈಗ ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ. 68 ರ ಪ್ರಾಯದಲ್ಲಿರುವ ಅವರು ತಮ್ಮ ಹರೆಯದಲ್ಲಿ ವಾಜಪೇಯರ ಒಡನಾಟ ನೆನಪಿಸಿಕೊಂಡಿದ್ದಾರೆ.
Dakshina Kannada,Karnataka
November 15, 2025 3:53 PM IST