Hajabba: ಹಾಜಬ್ಬರ ಪತ್ರಗಳಿಗೆ ಸ್ಪಂದಿಸುತ್ತಿಲ್ಲ ಶಿಕ್ಷಣ ಸಚಿವರು?! ದಣಿವರಿಯದ ಅಕ್ಷರ ಸಂತನಿಂದ ಕಾಲೇಜಿಗಾಗಿ ಶತ ಪ್ರಯತ್ನ! | Harekala Hajabba PU College lacks building government neglect exposed | ದಕ್ಷಿಣ ಕನ್ನಡ

Hajabba: ಹಾಜಬ್ಬರ ಪತ್ರಗಳಿಗೆ ಸ್ಪಂದಿಸುತ್ತಿಲ್ಲ ಶಿಕ್ಷಣ ಸಚಿವರು?! ದಣಿವರಿಯದ ಅಕ್ಷರ ಸಂತನಿಂದ ಕಾಲೇಜಿಗಾಗಿ ಶತ ಪ್ರಯತ್ನ! | Harekala Hajabba PU College lacks building government neglect exposed | ದಕ್ಷಿಣ ಕನ್ನಡ

Last Updated:

ಹರೇಕಳ ಹಾಜಬ್ಬ ತಮ್ಮೂರಿನಲ್ಲಿ ಶಾಲೆ ಮತ್ತು ಪಿಯುಸಿ ಕಾಲೇಜು ಆರಂಭಿಸಿ, ಕಟ್ಟಡ ನಿರ್ಮಾಣಕ್ಕೆ ದಾನಿಗಳ ಸಹಾಯ ಹುಡುಕುತ್ತಿದ್ದಾರೆ. ಸರ್ಕಾರದಿಂದ ಅನುದಾನ ಇನ್ನೂ ಬಂದಿಲ್ಲ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ‘ಅಕ್ಷರ ಸಂತ’ ಹರೇಕಳ ಹಾಜಬ್ಬ ಕಿತ್ತಳೆ ಮಾರಿ ತನ್ನೂರಿನಲ್ಲಿ ಶಾಲೆ (School) ಕಟ್ಟಿಸಿದವರು. ಇದೀಗ ಅವರು ತನ್ನೂರಿಗೊಂದು ಪಿಯುಸಿ ಕಾಲೇಜು (Collage) ತರುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದ ಹಿಂದೆ ಕಾಲೇಜೇನೋ ಬಂತು. ಆದರೆ ತರಗತಿ ನಡೆಸಲು ಕಟ್ಟಡವೇ (Building) ಇಲ್ಲ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದೊಳಗೆ ಹೊಸ ಕಟ್ಟಡ ನಿರ್ಮಾಣಕ್ಕೆ (Construction)  ಹಾಜಬ್ಬರು ಓಡಾಟ ನಡೆಸುತ್ತಿದ್ದಾರೆ.

ಈಗಲೂ ದಣಿವರಿಯದೇ ದಾನಿಗಳ ಹುಡುಕುತ್ತಿದ್ದಾರೆ ಹಾಜಬ್ಬ

ಕಾಲೇಜು ನಡೆಸಲು ಕಟ್ಟಡವಿಲ್ಲದಿದ್ದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುವ ಆತಂಕವಿದೆ. ಈ ನಿಟ್ಟಿನಲ್ಲಿ ಹಾಜಬ್ಬರು ಶಾಸಕರು, ಅಧಿಕಾರಿಗಳ ಬಳಿಗೆ ಎಡತಾಕುವುದಲ್ಲದೆ, ಖಾಸಗಿ ಸಂಸ್ಥೆ, ಕಂಪೆನಿಗಳ, ದಾನಿಗಳನ್ನೂ ಸಂಪರ್ಕಿಸಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ಕೇಳುತ್ತಿದ್ದಾರೆ.

ಹರೇಕಳದಲ್ಲಿ ಕಾಲೇಜ್‌ ಮಾಡಿಯೇ ವಿಶ್ರಾಂತಿ ಎಂಬ ಪಟ್ಟು

ಹರೇಕಳ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಕಾಲೇಜಿಲ್ಲ. ಆದ್ದರಿಂದ ಅಲ್ಲೊಂದು ಸರಕಾರಿ ಪಿಯು ಕಾಲೇಜು ಆರಂಭಿಸಬೇಕೆಂದು 2009ರಿಂದ ಮುಖ್ಯಮಂತ್ರಿ, ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹರೇಕಳ ಹಾಜಬ್ಬ ಮನವಿ ಮಾಡುತ್ತಲೇ ಬಂದಿದ್ದರು. ಸತತ 15 ವರ್ಷಗಳ ಪ್ರಯತ್ನದ ಬಳಿಕ 2022ರ ನವೆಂಬರ್ 21ರಂದು ಹರೇಕಳ ಗ್ರಾಮದ ನ್ಯೂಪಡ್ಪು ಗ್ರಾಮ ಚಾವಡಿಯ ಮಧ್ಯೆ ಮುಖ್ಯರಸ್ತೆಯ ಬಳಿಯೇ 1.30 ಎಕರೆ ಜಮೀನನ್ನು ಸರಕಾರ ಮಂಜೂರುಗೊಳಿಸಿತ್ತು.

ಸರ್ಕಾರದಿಂದ ಆದೇಶವಾಗಿದೆ, ಹಣ ಬಂದಿಲ್ಲ

ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್. ಅವರು ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿ ಹೊಸದಾಗಿ ಸರಕಾರಿ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲು ಅನುಮತಿ ನೀಡಿದ್ದರು. ಅದರಂತೆ 2024-25ರ ಶೈಕ್ಷಣಿಕ ವರ್ಷದಿಂದ ಹಾಜಬ್ಬರು ಸರಕಾರಿ ಪ್ರೌಢಶಾಲೆಯ ಕಟ್ಟಡದಲ್ಲೇ ಪಿಯು ತರಗತಿ ಆರಂಭಿಸಿದ್ದರು.

ಬೆರಳೆಣಿಕೆಯ ಸಂಖ್ಯೆಯಲ್ಲಿದ್ದಾರೆ ಮಕ್ಕಳು

20 ವಿದ್ಯಾರ್ಥಿಗಳೊಂದಿಗೆ ಪ್ರಥಮ ಪಿಯು ತರಗತಿ (ಕಲೆ-ವಾಣಿಜ್ಯ) ಆರಂಭಗೊಂಡಿತ್ತು. ಇದೀಗ ದ್ವಿತೀಯ ಪಿಯುಸಿ ತರಗತಿ ಕೂಡ ನಡೆಸಲಾಗುತ್ತಿದೆ. ಈ ವರ್ಷ ಪ್ರಥಮ ಪಿಯುಸಿಯಲ್ಲಿ ಇಬ್ಬರು ಬಾಲಕರು ಮತ್ತು 9 ಬಾಲಕಿಯರ ಸಹಿತ 11 ವಿದ್ಯಾರ್ಥಿಗಳಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 8 ಬಾಲಕರು ಮತ್ತು 5 ಮಂದಿ ಬಾಲಕಿಯರ ಸಹಿತ 13 ವಿದ್ಯಾರ್ಥಿಗಳಿದ್ದಾರೆ. ಸದ್ಯ 24 ವಿದ್ಯಾರ್ಥಿಗಳಿದ್ದಾರೆ. ಅತಿಥಿ ಉಪನ್ಯಾಸಕರ ಸಹಿತ ಪ್ರಭಾರ ಪ್ರಾಂಶುಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ.

ಇದೆಂತಾ ಸ್ಥಿತಿ? ಹಾಜಬ್ಬರ ಪ್ರಯತ್ನಕ್ಕೆ ಕವಡೆ ಕಿಮ್ಮತ್ತಿಡದ ಸರ್ಕಾರ?!

ಇದನ್ನೂ ಓದಿ: Kambala: ಕಂಬುಲ ನನ ದುಂಬುಲ, ಕುದಿ ಕಂಬಳ ಅಂದ್ರೇನು ಗೊತ್ತಾ? ನಾಳೆಯಿಂದ ಶುರುವಾಗಲಿದೆ ಕೋಣಗಳ ಭರ್ಜರಿ ಓಟ!

2025ರ ಜೂನ್ 17ರಂದು ಲೋಕೋಪಯೋಗಿ ಇಲಾಖೆಯು ಹೊಸ ಕಟ್ಟಡದ ನೀಲನಕ್ಷೆಯೊಂದಿಗೆ 5.30 ಕೋ.ರೂ. ಅಂದಾಜು ಪಟ್ಟಿ ತಯಾರಿಸಿದೆ. 2025ರ ಜುಲೈ 5ರಂದು ಸ್ಪೀಕ‌ರ್ ಯು.ಟಿ.ಖಾದರ್ ಕೂಡ ಶಿಕ್ಷಣ ಸಚಿವರಿಗೆ ಈ ಅನುದಾನ ಬಿಡುಗಡೆಗೊಳಿಸಲು ಪತ್ರ ಬರೆದಿದ್ದಾರೆ. ಹರೇಕಳ ಹಾಜಬ್ಬ ಕೂಡಾ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಈವರೆಗೆ ಯಾವ ಪ್ರಯತ್ನವೂ ಕೈಗೂಡಿಲ್ಲ. ಸರಕಾರ ಇತ್ತಕಡೆ ದೃಷ್ಟಿ ಹಾಯಿಸಿ ಅಕ್ಷರ ಸಂತನ ಪ್ರಯತ್ನಕ್ಕೆ ಕೈಜೋಡಿಸಬೇಕಿದೆ.