Last Updated:
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಸೇವೆ ಆರಂಭವಾಗಿದೆ. ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮೊದಲ ದಿನವೇ 30 ಸಾವಿರ ರೂಪಾಯಿ ಸಮರ್ಪಣೆಯಾಗಿದೆ.
ದಕ್ಷಿಣ ಕನ್ನಡ: ಕೇರಳ ಭಾಗದ ದೇವಸ್ಥಾನಗಳಲ್ಲಿ (Temples) ಇರುವಂತಹ ತುಪ್ಪದ ದೀಪ (Ghee Deepa) ಸೇವೆಯನ್ನು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ (Puttur) ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಆರಂಭಿಸಲಾಗಿದೆ. ಭಕ್ತಾಧಿಗಳಿಂದ ಈ ಸೇವೆಗೆ ಉತ್ತಮ ಸ್ಪಂದನೆಯೂ ದೊರೆಕಿದೆ. ಕ್ಷೇತ್ರದ ಆದಾಯದ ದೃಷ್ಟಿಯಿಂದಲೂ ಈ ಸೇವೆ ಪ್ರಯೋಜನಕಾರಿಯಾಗಿದೆ. ಸೇವೆ ಆರಂಭಿಸಿದ ಮೊದಲ ದಿನವೇ ಈ ಸೇವೆಯಿಂದ 30 ಸಾವಿರ ರೂಪಾಯಿ ದೇವಸ್ಥಾನಕ್ಕೆ ಸಮರ್ಪಣೆಯಾಗಿದೆ. ಒಂದು ತುಪ್ಪದ ದೀಪ ಸೇವೆಗೆ 100 ರೂಪಾಯಿ ನಿಗದಿಪಡಿಸಲಾಗಿದ್ದು, ಹಬ್ಬದ ದಿನಗಳಲ್ಲಿ ಅಧಿಕ ಸಂಖ್ಯೆಯ ಭಕ್ತಾಧಿಗಳು ಈ ಸೇವೆಯನ್ನು ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಹಬ್ಬಹರಿದಿನಗಳಲ್ಲಿ ತುಪ್ಪದ ದೀಪ ಸೇವೆಯು 100 ರ ಗಡಿದಾಟುತ್ತಿದ್ದು, ಈ ಸೇವೆಯ ಆರಂಭದಿಂದಾಗಿ ದೇವಸ್ಥಾನದ ಆದಾಯವೂ ಕೊಂಡ ಏರಿಕೆ ಕಾಣುವ ನಿರೀಕ್ಷೆಯಿದೆ. ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಪುತ್ತೂರಿಗೆ ವಿವಿಧ ಕಾರಣಗಳಿಗಾಗಿ ಭೇಟಿ ನೀಡುವ ಜನಪ್ರತಿನಿಧಿಗಳು, ಸೆಲೆಬ್ರಿಟಿಗಳೂ ಈ ಸೇವೆಯನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ಪುತ್ತೂರಿಗೆ ಆಗಮಿಸಿದ್ದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ವಿಜಯೇಂದ್ರರಿಗೆ ತುಪ್ಪದ ದೀಪ ಸೇವೆಯ ಬಗ್ಗೆ ಮಾಹಿತಿ ನೀಡಿದ್ದರು. ಸ್ವತಹ ವಿಜಯೇಂದ್ರ ತುಪ್ಪದ ದೀಪ ಸೇವೆಯನ್ನು ಸಲ್ಲಿಸಿ ಸ್ವಾಮಿಯ ದರ್ಶನ ಪಡೆದು ತೆರಳಿದ್ದರು. ಪ್ರತಿದಿನವೂ ಕ್ಷೇತ್ರದಲ್ಲಿ ಈ ಸೇವೆಯು ಲಭ್ಯವಿದ್ದು, 10 ರಿಂದ 20 ಸೇವೆಗಳು ನಿರಂತರವಾಗಿ ನಡೆಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಮಧ್ಯಾಹ್ನ ಅನ್ನಪ್ರಸಾದ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿದಿನ 3 ಸಾವಿರಕ್ಕೂ ಮಿಕ್ಕಿದ ಭಕ್ತರು ಮತ್ತು ಆಸುಪಾಸಿನ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅನ್ನಪ್ರಸಾದ ಸೇವಿಸುತ್ತಿದ್ದಾರೆ.
Dakshina Kannada,Karnataka
November 22, 2025 10:37 AM IST