Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂರು ದಿನಗಳ ಚಂಪಾಷಷ್ಠಿ ಮಹೋತ್ಸವ ನಡೆಯುತ್ತಿದ್ದು, ಭಕ್ತರು ಎಡೆಮಡೆಸ್ನಾನ ಹಾಗೂ ಉರುಳುಸೇವೆ ಮಾಡುತ್ತಾರೆ.
ದಕ್ಷಿಣ ಕನ್ನಡ: ನಾಡಿನ ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ (Kukke Subrahmanya) ಮೂರು ದಿನಗಳ ಕಾಲ ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ. ಚೌತಿ, ಪಂಚಮಿ ಮತ್ತು ಷಷ್ಢಿ ಈ ಮೂರು ನಕ್ಷತ್ರಗಳ ದಿನದಂದು ಈ ಉತ್ಸವಗಳು ನಡೆಯುತ್ತವೆ. ಚೌತಿ (Chouthi), ಪಂಚಮಿ ಮತ್ತು ಷಷ್ಠಿಯಂದು (Shasti) ಸುಬ್ರಹ್ಮಣ್ಯನಿಗೆ ಪ್ರಿಯವಾದ ಎಡೆಮಡೆಸ್ನಾನವನ್ನು ಭಕ್ತಾಧಿಗಳು (Devotees) ನೆರವೇರಿಸೋದು ಈ ದಿನಗಳ ವಿಶೇಷವಾಗಿದೆ.
ವರ್ಷದಲ್ಲಿ ಈ ಮೂರು ದಿನಗಳು ಮಾತ್ರವೇ ಎಡೆಮಡೆಸ್ನಾನವನ್ನು ಮಾಡಲು ಭಕ್ತರಿಗೆ ಅವಕಾಶವಿದ್ದು, ಈ ಸೇವೆಯನ್ನು ಮಾಡಿದಲ್ಲಿ ಆರೋಗ್ಯ ಸಂಬಂಧಿ ಮತ್ತು ಚರ್ಮ ಸಂಬಂಧಿ ರೋಗಗಳು ಗುಣಮುಖವಾಗುತ್ತೆ ಅನ್ನೋ ಬಲವಾದ ನಂಬಿಕೆ ಭಕ್ತರದ್ದಾಗಿದೆ. ಅನಾದಿ ಕಾಲದಿಂದಲೂ ಕ್ಷೇತ್ರದಲ್ಲಿ ಈ ಸೇವೆಯನ್ನು ನೆರವೇರಿಸಿಕೊಂಡು ಬರಲಾಗುತ್ತಿದ್ದು, ಕಾಲಕ್ರಮೇಣ ಸೇವೆಯ ಪದ್ಧತಿಯಲ್ಲಿ ಕೊಂಚ ವ್ಯತ್ಯಾಸಗಳನ್ನೂ ಮಾಡಲಾಗಿದೆ.
ಈ ಹಿಂದೆ ಈ ಸೇವೆಗೆ ಮಡೆಸ್ನಾನ ಎಂದು ಕರೆಯಲಾಗುತ್ತಿತ್ತು. ಬ್ರಾಹ್ಮಣರು ತಿಂದು ಉಳಿಸಿದ ಎಂಜಲು ಎಲೆಯ ಮೇಲೆ ಭಕ್ತಾಧಿಗಳು ದರ್ಪಣ ತೀರ್ಥದಲ್ಲಿ ಸ್ನಾನ ನೆರವೇರಿಸಿ ಉರುಳು ಸೇವೆ ಮಾಡುತ್ತಿದ್ದರು. ಆದರೆ ಕ್ರಮೇಣ ಈ ಪದ್ಧತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ರಾಹ್ಮಣರ ಬದಲು, ದೇವರ ನೈವೇದ್ಯವನ್ನು ಕ್ಷೇತ್ರದ ಗೋವುಗಳಿಗೆ ದೇವಸ್ಥಾನದ ಒಳಾಂಗಣದ ಸುತ್ತ ಬಡಿಸಲಾಗುತ್ತದೆ. ಆ ನೈವೇದ್ಯವನ್ನು ಗೋವುಗಳು ತಿಂದ ಬಳಿಕ ನೈವೇದ್ಯ ಹಾಕಿದ ಬಾಳೆಎಲೆಗಳ ಮೇಲೆ ಭಕ್ತರು ಉರುಳುಸೇವೆ ಮಾಡುವ ಪದ್ಧತಿ ಇತ್ತೀಚೆಗೆ ಜಾರಿಗೆ ಬಂದಿದೆ.
ಚೌತಿಯಂದು ಮೊದಲುಗೊಂಡು ಪಂಚಮಿ, ಷಷ್ಠಿಯಂದು ಈ ಸೇವೆಯನ್ನು ಮಾಡಲಾಗಿತ್ತದೆ. ಪಂಚಮಿಯಂದು ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಈ ಸೇವೆ ನೆರವೇರಿಸುತ್ತಾರೆ. ಭಕ್ತರು ಸ್ವ ಇಚ್ಛೆಯಿಂದ ಕ್ಷೇತ್ರದಲ್ಲಿ ಈ ಸೇವೆ ನೆರವೇರಿಸಲು ಅವಕಾಶವಿದ್ದು, ಈ ಸೇವೆಗೆ ಕ್ಷೇತ್ರದಿಂದ ಅಧಿಕೃತವಾದ ಯಾವುದೇ ರಶೀದಿಗಳನ್ನು ಮಾಡಿಸಲಾಗುತ್ತಿಲ್ಲ. ಎಡೆಮಡೆಸ್ನಾನ ನೆರವೇರಿಸಿದ ಬಳಿಕ ಭಕ್ತರು ಮತ್ತೆ ದರ್ಪಣ ತೀರ್ಥದಲ್ಲಿ ಮುಳುಗಿ ದೇವರ ಮುಂದೆ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಸೇವೆ ಮಾಡಿಸೋದರಿಂದ ತಮ್ಮ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ ಎನ್ನುವ ಸಾಕಷ್ಟು ಭಕ್ತರು ಕುಕ್ಕೆ ಸುಬ್ರಹ್ಮಣ್ಯದಲ್ಲಿದ್ದು, ಈ ಕಾರಣಕ್ಕೇ ಈ ಸೇವೆಗೆ ಕ್ಷೇತ್ರದಲ್ಲಿ ವಿಶೇಷ ಮಹತ್ವವನ್ನೂ ನೀಡಲಾಗಿದೆ.
Dakshina Kannada,Karnataka
November 26, 2025 8:30 AM IST