ನನ್ನ ಜೊತೆಗಿದ್ದ ಗೆಳೆಯ ಗೈಡ್ ಪರ್ವೀಜ್ ಜೊತೆಗೆ ಮಾತಿಗಿಳಿದು, ಅವನಲ್ಲಿದ್ದ ಪ್ರಶ್ನೆಗಳನ್ನು ಕೇಳ ತೊಡಗಿದ. ಮಂಜು ಸೇರಿ ಹಾಲು ಗಟ್ಟಿಯಾಗಿ ಮೂಟೆಯಂತಿದ್ದ ಹಿಮಗಳ ಮೇಲೆ ಕೂತು ನಾನೂ ಇವರಿಬ್ಬರ ಸಂಭಾಷಣೆಗೆ ಕಿವಿಯಾದೆ. ಒಂದೇ ಮಾತಿಗೆ, ನಮ್ಮಲ್ಲಿ ಸಿಕಂದರ್ ಬಟ್ಷಿಖಾನ್ ಕೂಡ ಇದ್ದಾರೆ. ಝೈನುಲ್ ಆಬಿದ್ ನಂತವರೂ ಇದ್ದಾರೆ ಎನ್ನುತ್ತಾನೆ ಗೈಡ್ ಪರ್ವೀಜ್. ಕಾಶ್ಮೀರ ಕಂಡಂಥಾ ಅತ್ಯಂತ ಸಹಿಷ್ಣು ಆಡಳಿಗಾರನಂತೆ ಝೈನುಲ್ ಆಬಿದ್.
1400ರ ಸಮಯದಲ್ಲಿ ಕಾಶ್ಮೀರವನ್ನು ಆಳಿದ್ದು ಝೈನುಲ್ ಆಬಿದ್. ಈತ ರಾಜನಲ್ಲ. ಆಗಿದ್ದ ರಾಜನೊಬ್ಬನ ಆಡಳಿತಗಾರ. ಈತನ ಕಾಲದಲ್ಲಿ ಕಾಶ್ಮೀರದಲ್ಲಿ ಸರ್ವಧರ್ಮ ಸೌಹಾರ್ದತೆ ನೆಲೆಸಿತ್ತು. ಮಸೀದಿಗಳಿಗೆ ಸಿಕ್ಕಷ್ಟೇ ಗೌರವ ಬೌದ್ಧ ವಿಹಾರಗಳಿಗೆ, ದೇವಸ್ಥಾನಗಳಿಗೂ ಸಿಕ್ಕಿತ್ತು. ಶ್ರೀನಗರದ ದಾಲ್ ಕೆರೆಯ ದಾರಿ ಹಿಡಿದು ಹೊರಟರೆ ಬಲಕ್ಕೆ ತಿರುವೊಂದು ಎದುರಾಗಲಿದೆ. ಆ ತಿರುವು ಸಾಗುವುದು ಗೋಪಾದ್ರಿ ಬೆಟ್ಟಕ್ಕೆ. ಅಲ್ಲೇ ಇರುವುದು ಈ ಆದಿ ಗುರು ಶಂಕರಾಚಾರ್ಯರ ಪೀಠ. ಕ್ರಿಸ್ತನ ಸಾವಿನ ಬಳಿಕದ 364ರಲ್ಲಿ ನಿರ್ಮಾಣ ಆಗಿರುವ ಈ ಪೀಠಕ್ಕೆ ಝೈನುಲ್ ಆಬಿದ್ ಪೂರಕ ವಾತಾವರಣ ಸೃಷ್ಟಿ ಮಾಡಿದ್ದ ಎನ್ನುವ ಜನಜನಿತ ಇತಿಹಾಸವಿದೆ. ಹೀಗೆ ಝೈನುಲ್ ಆಬಿದ್ ದಾರಿಯಲ್ಲಿ ನಡೆಯವವರ ಜೊತೆಗೆ ಸಿಕಂದರ್ ಬಟ್ಷಿಖಾನ್ ನಂಥಾ ನೀಚರೂ ಇರುವುದನ್ನು ಗೈಡ್ ಪರ್ವೀಜ್ ತಳ್ಳಿ ಹಾಕುತ್ತಿಲ್ಲ. ಸಿಕಂದರ್ ಬಟ್ಷಿಖಾನ್ ಕಾಶ್ಮೀರ ಕಂಡ ಅತ್ಯಂತ ಕ್ರೂರಿ, ಭೀಕರ ಮನಸ್ಸಿನ ಆಡಳಿತಗಾರ. ಹಿಂದೂಗಳನ್ನು, ಬೌದ್ಧರನ್ನು ತೊಡೆದು ಹಾಕುವ ಕನಸ್ಸಿಲ್ಲಿದ್ದ. ಆದರೆ ಅದು ಅವನಿಂದ ಸಾಧ್ಯವಾಗಿಲ್ಲ ಎನ್ನುವುದು ಗೈಡ್ ಮಾತು ನಿಲ್ಲಿಸಿದ ಮೇಲೆ ನನಗಾದ ಖುಷಿಯ ಸಂಗತಿ.
ಫೆರನ್ ಧರಿಸಿಕೊಂಡು ಜನರು ಬೀದಿಯಲ್ಲಿ ಓಡಾಡಿಕೊಂಡಿದ್ದರು. ಫೆರನ್ ಚಳಿಯಿಂದ ದೇಹವನ್ನು ಬೆಚ್ಚಗಿಡಬಲ್ಲ ಕಾಶ್ಮೀರಿಗಳ ಸಾಂಪ್ರದಾಯಿಕ ಉಡುಗೆ. ಖಾವ್ವ ಲೋಟಾ ಹಿಡಿದು, ಬೆಂಕಿ ಕಣಗಳನ್ನು ಹೊತ್ತು ಬಿಸಿ ಕಾಯುತ್ತಿದ್ದರು. ಲೋವರ್ ಪಹಲ್ಗಾಮ್ ಭಾಗದ ರೊಟ್ಟಿ ಮಾರಾಟ ಮಾಡುವ ಸಣ್ಣದೊಂದು ಅಂಗಡಿಗೆ ಹೋದೆನು. ಅಲ್ಲಿ ಈಗಲೂ ಕಾಶ್ಮೀರಿ ಸಾಂಪ್ರದಾಯಿಕ ಶೈಲಿಯಲ್ಲಿ ರೊಟ್ಟಿ ಬಡಿದು ಮಾರಾಟ ಮಾಡಲಾಗುತ್ತಿತ್ತು. ರೊಟ್ಟಿ ಅಂಗಡಿಯ ಮುಂದೆ ಜನ ಸೇರಿದ್ದರು. ಐದು ರೂಪಾಯಿಗೆ ಒಂದು ರೊಟ್ಟಿ. ರೊಟ್ಟಿ ಪಡೆಯುತ್ತಾ ಫೆರನ್ ಒಳಗೆ ಅಮುಕುತ್ತಾ ಜನರು ಮನೆಯ ದಾರಿ ಹಿಡಿಯುವುದು ನೋಡುತ್ತಾ ನಿಂತಿದ್ದೆ. ಆಗ “ಆಪ್ ಕಿದರ್ ಸೇಹೋ ಭಯ್ಯಾ” ಎಂದವನು ಗುಲ್ಶಾನ್. ಎದೆ ತಣ್ಣಗಾಯಿತು. ಯಾರೋ ಒಬ್ಬರು ಮಾತಾಡಿಸಿದರಲ್ಲಾ!!. ಅಲ್ಲಿದ್ದವರ ಎಲ್ಲರ ಮುಖದಲ್ಲೂ ನಗು ಅರಳಿತು. ನನ್ನದೂ, ನನ್ನ ಜೊತೆಗಿದ್ದವರದ್ದೂ.
ಎಲ್ಲರೂ ಪ್ರವಾಸೋದ್ಯಮಕ್ಕೆ ಹೊಂದಿಕೊಂಡಿರುವ ಕೆಲಸವನ್ನೇ ಮಾಡುತ್ತಾರೆ. ದಿನಕ್ಕೆ ಅಂದಾಜು 800 ರೂ. ಕೂಲಿ ಪಡೆಯುತ್ತಾರೆ. ಆದರೆ ಹೆಣ್ಣುಮಕ್ಕಳನ್ನು ಮನೆಯಿಂದ ಆಚೆಗೆ ಬಿಡುವುದಿಲ್ಲ. ಕೆಲಸಕ್ಕಾಗಲಿ, ಗಂಡಸರಿಲ್ಲದೆ ಹೆಣ್ಣುಮಕ್ಕಳು ಆಚೆಗೆ ಓಡಾಡುವುದು ಬಹಳ ವಿರಳ ಇಲ್ಲಿ. ಕಾರಣ ಕೇಳಿದರೆ ಗುಲ್ಶಾನ್ ನಗುತ್ತಾರೆ. ಥಟ್ಟನೆ ಗುಲ್ಶಾನ್ ತಾನು ಖರೀದಿಸಿದ ರೊಟ್ಟಿಯಿಂದ ಒಂದು ರೊಟ್ಟಿ ಕೊಟ್ಟು ಹೊರಟು ಹೋದನು. ದಕ್ಷಿಣ ಭಾರತದ ಜನರನ್ನು ಕಂಡರೆ ಇಲ್ಲಿನವರಿಗೆ ಅತೀವ ಗೌರವ ಪ್ರೀತಿ ಎಂದು ಅಲ್ಲಿ ಓಡಾಡುತ್ತಾ, ಮಾತಾಡುತ್ತಾ ತಿಳಿಯಿತು. ಇದಕ್ಕೆ ಕಾರಣ ಬೆಂಗಳೂರು. ದಕ್ಷಿಣ ಭಾರತದ ರಾಜಧಾನಿ ಬೆಂಗಳೂರು ಅಂತಾರೆ ಕಾಶ್ಮೀರಿ ಮಂದಿ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರು ಬೇಕು. ಕಾಶ್ಮೀರಿ ಜನರ ಮಕ್ಕಳು ಇಂಜಿನಿಯರ್, ವೈದ್ಯರು ಆಗುವುದು ಬೆಂಗಳೂರಿನಲ್ಲಿ. ಕೆಲ ಕಾಲೇಜುಗಳ ಹೆಸರನ್ನೂ ಹೇಳುತ್ತಾರೆ ಅವರು. ಜೆಪಿನಗರ, ಜಯನಗರ, ಬನಶಂಕರಿ ಭಾಗದ ಹೆಸರನ್ನೂ ನಮ್ಮಂಥೆ ಸಲೀಸಾಗಿ ಉಚ್ಚರಿಸುತ್ತಾರೆ. ಆ ನಂಟಿಗೆ ರೊಟ್ಟಿಯ ಆತಿಥ್ಯ, ನಗು ಮುಖದ ಮಾತುಗಳು. ಹಸ್ತಲಾಘವ. ನನ್ನೊಟ್ಟಿಗಿದ್ದ ಗೆಳೆಯರ ಅಚ್ಚರಿಗೆ ಪಾರವಿರಲಿಲ್ಲ. ನನಗೂ.
ಜಗತ್ತಿನ ಯಾವ ಮೂಲೆಗೋದರೂ ಅಲ್ಲೊಂದು ರಾಜಕೀಯ ಬುನಾದಿ ಇರಲಿದೆ. ಇದರಿಂದ ಕಾಶ್ಮೀರವೂ ಹೊರತಲ್ಲ. ಪುಲ್ವಾಮ ದಾಳಿಯಾದಾಗ ಪುಲ್ವಾಮ ಇರುವುದು ಯಾವುದೋ ಗಡಿ ಸೀಮೆಯಾ ಜಾಗ ಎಂದು ಕೊಂಡವರೇ ಹೆಚ್ಚು. ಆದರೆ ಈ ಪ್ರವಾಸದಲ್ಲಿ ಪುಲ್ವಾಮ ಸ್ಫೋಟ ಆಗಿರುವ ಜಾಗ ಕಣ್ಣಾರೆ ಕಂಡು ಅಚ್ಚರಿಯಾಯಿತು. ಶ್ರೀನಗರದಿಂದ ಅನಂತ್ ನಾಗ್ ಪಟ್ಟಣಕ್ಕೆ ಸಾಗುವ ದಾರಿ ಮಧ್ಯೆ ಪುಲ್ವಾಮ ಹಾದು ಹೋಗಬೇಕು. ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕಿರುವ ರಾಷ್ಟ್ರೀಯ ಹೆದ್ದಾರಿಯ ಭಾಗವೇ ಅದು. NH 44. ಇದರ ಪುಲ್ವಾಮ ವ್ಯಾಪ್ತಿಯ ಲೆಥ್ಪೋರಾ ಬಳಿಯ ಹೆದ್ದಾರಿಯಲ್ಲಿ ಉಗ್ರರು ಆರ್ಡಿಎಕ್ಸ್ ಸ್ಫೋಟಕ ತಂದು ಸೇನೆಯ ಟ್ರಕ್ ಗುದ್ದಿ ಸ್ಫೋಟಿಸಿದ್ದಾರೆ. ಅಚ್ಚರಿ ಎಂದರೆ ಈ ರಸ್ತೆಯಲ್ಲಿ ಅಲ್ಲಲ್ಲಿ ಸೇನೆಯ ತಪಾಸಣೆ ಕೇಂದ್ರಗಳಿವೆ. ಪ್ರತಿ ವಾಹನಗಳನ್ನು ಇಂಚಿಂಚು ಪರಿಶೋಧಿಸಿದ ಬಳಿಕವಷ್ಟೇ ಮುಂದಕ್ಕೆ ಸಾಗಲು ಅನುಮತಿ. ಇದೇ ಕಾರಣಕ್ಕೆ 90 ಕಿಲೋ ಮೀಟರ್ ಪ್ರಯಾಣಕ್ಕೆ ಬರೋಬ್ಬರಿ ಮೂರರಿಂದ ಮೂರುವರೆ ತಾಸು ಸಮಯ ಬೇಕು. ಅಂಥಾ ಜಾಗದಲ್ಲಿ ಸೇನೆಯ ಕಣ್ಣು ತಪ್ಪಿಸಿ ಭಯೋತ್ಪಾಕರು ಸ್ಫೋಟಕ ತಂದು ಸಿಡಿಸಿರುವುದು ನನಗೆ ಹಾಗೂ ನನ್ನ ಗೆಳೆಯರಿಗೆ ನಂಬಲು ಕಷ್ಟವೇ ಆಯಿತು!!
ಈ ಘಟನೆ ಬಳಿಕ ಈಗ ಪ್ರತಿ ಕನಿಷ್ಠ 50 ಮೀಟರ್ ಗೆ ಓರ್ವ ಸೈನಿಕರು ಬಂದೂಕು ಹಿಡಿದು ಕಣ್ಗಾವಲಿನಲ್ಲಿರುತ್ತಾರೆ. ಇದರ ಬಗ್ಗೆ ಗೈಡ್ ಪರ್ವೀಜ್ ಕೇಳಿದರೆ “Its All Dirty Politics My Friend” ಎನ್ನುತ್ತಾನೆ. ಅಷ್ಟಕ್ಕೂ ಏನಿದು ರಾಜಕೀಯ ಎನ್ನುವುದು ನನ್ನ ಪ್ರಶ್ನೆ? ಇಲ್ಲಿಂದ ತುಸು ದೂರ ದಾರಿ ಸವೆಸಿದರೆ ಜಗತ್ತಿನ ಸಾಫ್ರಾನ್ ಕ್ಯಾಪಿಟಲ್ ಪಂಪೋರೆ ಧಕ್ಕುತ್ತದೆ. ಅದು ಮತ್ತೊಂದು ಸೋಜಿಗ.
(ಮುಂದುವರೆಯುತ್ತದೆ…)
Pahalgam,Anantnag,Jammu and Kashmir
November 27, 2025 8:11 AM IST