Last Updated:
ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಅದ್ಧೂರಿಯಾಗಿ ನಡೆಯಿತು. ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಾಗಿ, ಪೂರ್ಣಗೊಳಿಸಲು ಕನಿಷ್ಠ 35 ವರ್ಷ ಬೇಕು ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ: ಇಡೀ ತುಳುನಾಡಲ್ಲಿ ಅತೀ ಹೆಚ್ಚು ಆರಾಧಿಸುವ ದೈವವೆಂದರೆ (Demi God) ಪಂಜುರ್ಲಿಯ ನಂತರ ಬಹುಷಃ ಕಲ್ಲುರ್ಟಿಯೇ! ದೇವರಿಗಿಂತ (God) ಏಳು ಹೆಜ್ಜೆ ಹಿಂದೆ, ದೈವಗಳಿಗಿಂತ ಏಳು ಹೆಜ್ಜೆ ಮುಂದೆ ಎಂದು ಈ ದೈವದ ಶಕ್ತಿಯನ್ನು ಹೇಳಲಾಗುತ್ತದೆ. ಮಂತ್ರದೇವತೆ, ಸತ್ಯದೇವತೆ ಸೇರಿದಂತೆ ಎಲ್ಲಾ ದೈವಗಳನ್ನೂ ಕಲ್ಲುರ್ಟಿಯ ಸಮಾನವೇ (Equal) ಎನ್ನಲಾಗುತ್ತದೆ. ಇಂತಹ ಕಲ್ಲುರ್ಟಿ ವೀರ ಕಲ್ಲುಕುಟಿಗ ದೈವದ ಒಡಹುಟ್ಟಿದಾಕೆ ಹಾಗೆಯೇ ವರ್ತೆ ರೂಪದಲ್ಲಿ ಪಂಜುರ್ಲಿಯ ಮಾನಸ ತಂಗಿ! ಇಂತಹ ದೈವದ ನೇಮ ಇಲ್ಲಿ ತುಂಬಾ ಫೇಮಸ್.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ದೈವ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಅದ್ಧೂರಿಯಾಗಿ ನಡೆದಿದೆ. ಸಜೀಪ ಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದೆ. ರಾತ್ರಿ ಭಂಡಾರದ ಮನೆಯಿಂದ ದೈವಗಳ ಭಂಡಾರ ಆಗಮಿಸಿ ತಡರಾತ್ರಿ ವರ್ಷಾವಧಿ ಕೋಲ ನೆರವೇರಿದೆ. ಕೋಲದ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಮಾರ್ನಬೈಲು ಜಂಕ್ಷನ್‌ನಿಂದಲೂ ವಿದ್ಯುತ್ ದೀಪಗಳ ಮಾಡಲಾಗಿದೆ.
ಪಣೋಲಿಬೈಲ್ ತುಳುನಾಡಿನ ಕಾರಣಿಕ ಕ್ಷೇತ್ರವಾಗಿದ್ದು, ಪಣೋಲಿಬೈಲ್ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್ ಇದೆ. ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನ ಕೋಲ ಸೇವೆ ಸಂದಾಯವಾಗುತ್ತದೆ. ಆದರೆ ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಿದ್ದು, ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದಲ್ಲಿ 5 ದಿನ ಕೋಲ ಸೇವೆಗೆ ಅವಕಾಶವಿದ್ದರೂ ತುಳುವಿನ ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜೀಪ ಮಾಗಣೆಯ ಜಾತ್ರೆ, ಉತ್ಸವ ಮೊದಲಾದ ಸಂದರ್ಭ ಕೋಲ ಸೇವೆ ನಡೆಯುವುದಿಲ್ಲ. ಹೀಗಾಗಿ ವರ್ಷಕ್ಕೆ 600-700 ಮಂದಿಗೆ ಮಾತ್ರ ಕೋಲ ಸೇವೆಗೆ ಅವಕಾಶ ಸಿಗುತ್ತಿತ್ತು. ಕೋಲದ ದಿನ ಎಂಟು ಮಂದಿಗೆ ಹರಕೆ ಕೋಲ ಒಪ್ಪಿಸಲು ಅವಕಾಶವಿದೆ.
ಸಾಂಪ್ರದಾಯಿಕವಾಗಿ ನಡೆಯುತ್ತದೆ ನೇಮ-ಕೋಲ
ಕಲ್ಕುಡ-ಕಲ್ಲುರ್ಟಿ ದೈವಕ್ಕೆ ಪಣೋಲಿಬೈಲು ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಕೋಲ ಆಗೋದು ವಿಶೇಷ. ಸರಳ ಬಣ್ಣತೊಟ್ಟು ದೈವದ ಕೋಲಸೇವೆ ಆಗುತ್ತದೆ. ಪಣೋಲಿಬೈಲ್‌ನಲ್ಲಿ ಅಗೇಲು ಸೇವೆಗೂ ಮಹತ್ವವಿದ್ದು, ನೂರಾರು ಜನ ಅಗೇಲು ಸೇವೆಯನ್ನು ಒಪ್ಪಿಸುತ್ತಾರೆ. ಅನಾರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಜನ ಇಂದಿಗೂ ಕಲ್ಲುರ್ಟಿ ದೈವಕ್ಕೆ ಹರಕೆ ಹೇಳುವ ಸಂಪ್ರದಾಯವಿದ್ದು, ಆಶ್ಚರ್ಯವೆಂಬಂತೆ ಸಮಸ್ಯೆಗಳು ನಿವಾರಣೆಯಾಗುವ ಉದಾಹರಣೆಯಿದೆ.
Dakshina Kannada,Karnataka
November 27, 2025 4:59 PM IST