Last Updated:
ಮಳೆಗಾಲದ ನಂತರ ದಕ್ಷಿಣ ಕನ್ನಡದಲ್ಲಿ ಕೊಳವೆಬಾವಿ ನಿರ್ವಹಣೆ ಹೆಚ್ಚಾಗುತ್ತದೆ.
ದಕ್ಷಿಣ ಕನ್ನಡ: ಮಳೆ (Rain) ನಿಂತ ಬಳಿಕ ನೀರಿನ ಮೂಲಗಳಿಂದಲೇ ಮುಂದಿನ ಮಳೆ ಬರೋ ತನಕ ನೀರನ್ನು (Water) ಉಪಯೋಗಿಸೋ ಅನಿವಾರ್ಯತೆಯಿದೆ. ಈ ಕಾರಣಕ್ಕೆ ಮಳೆಗಾಲದ ಸಂದರ್ಭದಲ್ಲಿ ಉಪಯೋಗಿಸದೇ ಬಿಟ್ಟ ನೀರಿನ ಮೂಲಗಳಲ್ಲಿ ಒಂದಾದ ಕೊಳವೆಬಾವಿಗಳನ್ನು (Tube Well) ಮತ್ತೆ ಆಕ್ಟೀವ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತೆ. ತೆರೆದ ಬಾವಿಯಂತೆ ಕೊಳವೆವಾವಿಗಳನ್ನು ನಿರ್ವಹಿಸೋದು ಅಷ್ಟು ಸುಲಭದ ಮಾತಲ್ಲ (Not Easy). ಕೊಳವೆಬಾವಿ ಕೊರೆದ ಬಳಿಕ ಅದರ ಒಳಗೆ ಅಳವಡಿಸುವ ಪೈಪ್ ಗಳು, ಮೋಟಾರು ಎಲ್ಲವೂ ಕೆಲವು ಸಂದರ್ಭದಲ್ಲಿ ಕೈಕೊಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಕಾರಣಕ್ಕಾಗಿ ಆಯಾಯ ಕಾಲಕ್ಕೆ ತಕ್ಕಂತೆ ಕೊಳವೆಬಾವಿಗಳನ್ನು ನಿರ್ವಹಣೆ ಮಾಡುವ ಅನಿವಾರ್ಯತೆಯೂ ಇದೆ.
ಕೊಳವೆ ಬಾವಿಗಳನ್ನು ನಿರ್ವಹಣೆ ಮಾಡಲೆಂದೇ ದಕ್ಷಿಣ ಕನ್ನಡದಲ್ಲಿ ವಿಶೇಷ ತಂಡವೂ ಇದೆ. ಈ ತಂಡದಲ್ಲಿ ಕೊಳವೆ ಬಾವಿಯೊಳಗಿನ ಪೈಪ್ ಹಾಗೂ ಮೋಟಾರ್ ಗಳನ್ನು ಹೊರ ತೆಗೆಯಲೆಂದೇ ತಯಾರಿಸಿದ ಸಲಕರಣೆಗಳೂ ಇವೆ. ಸಣ್ಣ ಮಟ್ಟಿನ ಕ್ರೇನ್ ರೂಪದ ಮಿಷಿನ್, ವಾಹನದಲ್ಲಿ ಈ ಮಿಷಿನ್ ಅನ್ನ ಸರಿಯಾಗಿ ಜೋಡಿಸಿಡಲೆಂದು ವಾಹನದ ಆಕಾರದಲ್ಲೂ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತೆ.
ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ಭೂಗರ್ಭದೊಳಗಿಂದ ನೀರನ್ನು ಮೇಲಕ್ಕೆತ್ತುವ ಮೋಟಾರು, ವಿದ್ಯುತ್ ಪಸರಿಸಲು ಅಳವಡಿಸಿದ ಕೇಬಲ್ ಮತ್ತು ಪೈಪ್ ಗಳಲ್ಲಿ ಡ್ಯಾಮೇಜ್ ಅಥವಾ ಬ್ಲಾಕ್ ಗಳು ಹೀಗೆ ಹಲವು ರೀತಿಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿರುತ್ತೆ. ಈ ಸಮಸ್ಯೆಗಳಲ್ಲಿ ಒಂದು ಸಮಸ್ಯೆ ತಲೆದೋರಿದರೂ, ಕೊಳವೆಯೊಳಗಿರುವ ಈ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸುವ ಅನಿವಾರ್ಯತೆಯೂ ಇದೆ.
ವಿದ್ಯುತ್ ಕೇಬಲ್ ಗಳು ಡ್ಯಾಮೇಜ್ ಆದ ಪಕ್ಷದಲ್ಲಿ ಮೋಟಾರ್ ಚಾಲನೆಯಾಗದೆ ನೀರು ಬರದಿರಬಹುದು. ಅದೇ ಪ್ರಕಾರ ಪೈಪ್ ಗಳ ಒಳಗಡೆ ಮಣ್ಣು ಅಥವಾ ಇತರ ವಸ್ತುಗಳು ಸಿಲುಕಿಕೊಂಡು ನೀರಿನ ಪ್ರೆಷರ್ ಕಡಿಮೆಯಾಗಬಹುದು ಅದೇ ಪ್ರಕರಣ ಮೋಟಾರಿನಲ್ಲಿ ಸಮಸ್ಯೆ ತಲೆದೋರಬಹುದು. ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುವ ಮೊದಲು ಕೊಳವೆ ಬಾವಿಯೊಳಗಿಂದ ಮೋಟಾರು, ಪೈಪ್ ಗಳನ್ನ ಮೇಲಕ್ಕೆತ್ತಲಾಗುತ್ತೆ. ಆ ಬಳಿಕ ಎಲ್ಲವನ್ನೂ ಸೂಕ್ತ ಪರಿಶೀಲನೆಯನ್ನು ನಡೆಸಿದ ಬಳಿಕ, ಯಾವುದಾದರೂ ದೋಷ ಕಂಡುಬಂದಲ್ಲಿ ಅದನ್ನು ಸರಿಪಡಿಸುವ ಕೆಲಸವನ್ನು ಕೊಳವೆಬಾವಿ ನಿರ್ವಹಣೆಯ ತಂಡ ಮಾಡುತ್ತವೆ.
ಕರಾವಳಿ ಭಾಗ ಅದರಲ್ಲೂ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವ ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಭಾಗದ ಎಲ್ಲಾ ಕೃಷಿ ತೋಟಗಳಲ್ಲೂ ಕೊಳವೆಬಾವಿಗಳಿದ್ದು, ಎಲ್ಲಾ ಕೊಳವೆಬಾವಿಗಳಿಗೂ ಈ ರೀತಿಯ ಸಮಸ್ಯೆ ಎದುರಾಗೋದು ಸಾಮಾನ್ಯವೂ ಆಗಿದೆ. ಸಣ್ಣ ವಾಹನದಲ್ಲೇ ಕೊಳವೆಬಾವಿ ನಿರ್ವಹಣೆಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡ ಹಲವು ವಾಹನಗಳು ಪುತ್ತೂರು ಹಾಗು ಸುತ್ತಮುತ್ತಲಿನ ತಾಲೂಕುಗಳಲ್ಲಿದ್ದು, ದಿನಕ್ಕೆ ಒಂದಲ್ಲ ಒಂದು ಕೊಳವೆ ಬಾವಿಗಳ ನಿರ್ವಹಣೆ ಈ ಎಲ್ಲಾ ವಾಹನಗಳಿಗೆ ದೊರಕುತ್ತದೆ. ಕೇವಲ ಕೃಷಿ ಜಮೀನಿನಲ್ಲಿರುವ ಕೊಳವೆ ಬಾವಿಗಳು ಮಾತ್ರವಲ್ಲದೇ ಸರಕಾರಿ ನೀರಿನ ವ್ಯವಸ್ಥೆ ಮಾಡುವ ಕೊಳವೆ ಬಾವಿಗಳ ನಿರ್ವಹಣೆಯನ್ನೂ ಇದೇ ತಂಡಗಳು ಮಾಡುತ್ತವೆ.
Dakshina Kannada,Karnataka
December 05, 2025 8:19 PM IST