ಈ ಸಾರಿನಲ್ಲಿ ತೊಗರಿಬೇಳೆ ಹಾಕಿದರೂ, ಸಾರು ರೆಡಿಯಾದ ಬಳಿಕ ತೊಗರಿಬೇಳೆ ಕಾಣುವುದೇ ಇಲ್ಲ. ತೊಗರಿಬೇಳೆಯನ್ನು ಅಷ್ಟು ಪ್ರಮಾಣದಲ್ಲಿ ಬೇಯಿಸಿ, ನೀರಿನಲ್ಲಿ ಬೇಳೆಯ ಅಂಶ ಮಿಶ್ರಣವಾಗುತ್ತದೆ. ಈ ತೊಗರಿಬೇಳೆಯ ನೀರಿನ ಮಿಶ್ರಣಕ್ಕೆ ಇಲ್ಲಿ ತೋವೆ ಎನ್ನುತ್ತಾರೆ.
ತೋವೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿಶೇಷ ಮಹತ್ವವೂ ಇದೆ. ಈ ತೋವೆ ಇಲ್ಲಿನ ಸಾರಸ್ವತ ಬ್ರಾಹ್ಮಣ ಸಮುದಾಯದ ಊಟದ ಟ್ರೇಡ್ ಮಾರ್ಕ್. ಸಾರಸ್ವರ ಬ್ರಾಹ್ಮಣರ ಯಾವುದೇ ಶುಭ-ಸಮಾರಂಭಗಳಲ್ಲಿ ತೋವೆ ಇಲ್ಲದ ಊಟ ಪರಿಪೂರ್ಣವಾಗೋದಿಲ್ಲ. ಪ್ರತಿಯೊಂದು ಸಾರಸ್ವತ ಬ್ರಾಹ್ಮಣರ ಸಮಾರಂಭಗಳಲ್ಲಿ ತೋವೆ ಇರೋದು ಸಾಮಾನ್ಯ. ಅಲ್ಲದೆ ಸಾರಸ್ವತ ಬ್ರಾಹ್ಮಣರ ಹೋಟೇಲ್ ಗಳಲ್ಲೂ ತೋವೆಗೆ ಭಾರೀ ಬೇಡಿಕೆಯೂ ಇದೆ. ಈ ತೋವೆ ಸಾರನ್ನು ಕೇಳಿಕೊಂಡು ಬಂದು ಊಟ ಮಾಡುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಸಾಕಷ್ಟಿದೆ.
ಈ ತೋವೆ ಸಾರು ರೆಡಿ ಮಾಡಲು ದೊಡ್ಡ ಪ್ರಯಾಸವೇನಿಲ್ಲ. ತೊಗರಿಬೇಳೆ,ನೀರು, ಇಂಗು, ರುಚಿಗೆ ಸ್ವಲ್ಪ ಉಪ್ಪು, ಬೆಳ್ಳುಳ್ಳಿ, ನೀರುಳ್ಳಿ, ಹಸಿಮೆಣಸು ಇದ್ದರೆ ಸಾಕು ಈ ತೋವೆ ರೆಡಿಯಾಗುತ್ತೆ. ಈ ತೊಗರಿಬೇಳೆ ಸಾರು (ತೋವೆ)ಯನ್ನು ಯಾರು ಬೇಕಾದರೂ ಮಾಡಬಹುದು, ಆದರೆ ತೋವೆಯ ನಿಜವಾದ ರುಚಿ ನೋಡಬೇಕಾದರೆ ಅದು ಸಾರಸ್ವತ ಬ್ರಾಹ್ಮಣರ ಪಾಕಶಾಲೆಯಲ್ಲೇ ಸಿದ್ಧವಾಗಬೇಕು.
ತೋವೆ ಸಾರಿಗೆ ಬೇಕಾದ ಸಾಮಾಗ್ರಿಗಳು!
- ತೊಗರಿಬೇಳೆ: 2 ಕಪ್
- ಅರಿಶಿನ: ಸ್ವಲ್ಪ
- ಉಪ್ಪು: ರುಚಿಗೆ ತಕ್ಕಷ್ಟು
- ತುಪ್ಪ ಅಥವಾ ಎಣ್ಣೆ: 2 ಚಮಚ
- ಸಾಸಿವೆ: ಸ್ವಲ್ಪ
- ಇಂಗು : ಸ್ವಲ್ಪ
- ಹಸಿಮೆಣಸಿನಕಾಯಿ: 2-3
- ಕೊತ್ತಂಬರಿ ಸೊಪ್ಪು: ಸ್ವಲ್ಪ
- ಶುಂಠಿ: ಸ್ವಲ್ಪ
- ಕರಿಬೇವಿನ ಸೊಪ್ಪು: ಸ್ವಲ್ಪ
* ತೊಗರಿಬೇಳೆಯನ್ನು ಮೊದಲಿಗೆ ಚೆನ್ನಾಗಿ ತೊಳೆದು, ನೀರು ಮತ್ತು ಸ್ವಲ್ಪ ಅರಿಶಿನ ಸೇರಿಸಿ ಕುಕ್ಕರ್‌ನಲ್ಲಿ 15-20 ನಿಮಿಷ ಬೇಯಿಸಿ. ಬೇಳೆ ಚೆನ್ನಾಗಿ ಮೆತ್ತಗಾಗಬೇಕು.
* ಬೇಳೆ ಬೆಂದ ಮೇಲೆ, ಅದಕ್ಕೆ ಬೇಕಾದಷ್ಟು ನೀರು ಮತ್ತು ಉಪ್ಪು ಸೇರಿಸಿ, ಮರದ ಮಂಥು ಅಥವಾ ಚಮಚದ ಹಿಂಭಾಗದಿಂದ ಚೆನ್ನಾಗಿ ಸ್ಮ್ಯಾಶ್ ಮಾಡಬೇಕು.
* ನಂತರ ಸಣ್ಣ ಪ್ಯಾನ್‌ನಲ್ಲಿ ತುಪ್ಪ/ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಬೇಕು. ಇಂಗು, ಹಸಿಮೆಣಸಿನಕಾಯಿ, ಶುಂಠಿ, ಕರಿಬೇವಿನ ಸೊಪ್ಪು ಸೇರಿಸಿ ಹುರಿಯಬೇಕು.
* ಈ ಒಗ್ಗರಣೆಯನ್ನು ಬಿಸಿ ಬೇಳೆ ಸಾರಿಗೆ ಹಾಕಬೇಕು. ಸ್ವಲ್ಪ ಹೊತ್ತು ಕುದಿಸಿ. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ (ಹಾಕುವುದಾದರೆ) ಸೇರಿಸಿ ಕಲಸಿ.
* ಕೊನೆಗೆ ಬಿಸಿ ಅನ್ನದೊಂದಿಗೆ ರುಚಿಕರವಾದ ತೊಗರಿಬೇಳೆ ಸಾರು (ತೋವೆ ಸಾರು) ಸವಿಯಲು ಸಿದ್ಧವಾಗುತ್ತದೆ.
ತೋವೆ ಸಾರು ದಕ್ಷಿಣ ಕನ್ನಡದ ಪಾಕಪದ್ಧತಿಯ ಸರಳ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಇದು ಮಸಾಲೆಯ ಅಬ್ಬರವಿಲ್ಲದೆ, ತನ್ನ ಶುದ್ಧ ಮತ್ತು ಸರಳ ರುಚಿಯಿಂದಲೇ ಜನಪ್ರಿಯತೆಯನ್ನು ಗಳಿಸಿದೆ. ನೀವು ಕೂಡ ಮನೆಯಲ್ಲಿದ್ದಾಗ ಈ ರೀತಿ ಸಿಂಪಲ್ ಆಗಿ ತೋವೆ ಸಾರು ಮಾಡಿ ಸವಿಯಬಹುದು.
(ರೆಸಿಪಿ: ಪ್ರಮೋದ್ ಪುತ್ತೂರು, ವರದಿ: ರಕ್ಷಿತಾ ಮಂಗಳೂರು)
Dakshina Kannada,Karnataka
December 11, 2025 6:05 PM IST