Last Updated:
ಪುತ್ತೂರು ವರ್ತಕರ ಸಂಘ ಪುತ್ತೂರು ಹಬ್ಬ ಯೋಜನೆ ಮೂಲಕ ಲಕ್ಕಿ ಕೂಪನ್ ಆಫರ್ ನೀಡಿದ್ದು, ಗ್ರಾಹಕರಿಗೆ ಟಿವಿ, ಮೊಬೈಲ್, ಫ್ರಿಡ್ಜ್, ಕಾರು, ಬೈಕ್ ಸೇರಿದಂತೆ ಬಹುಮಾನಗಳ ಅವಕಾಶ ಸಿಕ್ಕಿದೆ.
ದಕ್ಷಿಣ ಕನ್ನಡ: ದೊಡ್ಡ ದೊಡ್ಡ ವ್ಯಾಪಾರ ಮಳಿಗೆಗಳು, ಆನ್‌ಲೈನ್ ಮಾರಾಟ (Online) ಕಂಪನಿಗಳ ದರದ ಪೈಪೋಟಿಯಿಂದ (Competition) ಸಣ್ಣ-ಪುಟ್ಟ ಅಂಗಡಿಗಳು, ದಿನಸಿ ಅಂಗಡಿಗಳ ವ್ಯಾಪಾರಕ್ಕೂ ಕುತ್ತು ಬಂದಿದೆ. ಎಲ್ಲರೂ ಇಂದು ಆನ್‌ಲೈನ್ ಅಥವಾ ದೊಡ್ಡ ದೊಡ್ಡ ಮಳಿಗೆಗಳಿಂದಲೇ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಅವರು ನೀಡುವ ಆಫರ್, ಡಿಸ್ಕೌಂಟ್‌ಗಳಿಗೆ (Discount) ಮನಸೋತು ಅಲ್ಲಿ ವ್ಯವಹಾರ ಮಾಡಲು ತೆರಳುತ್ತಾರೆ.
ಈ ಹೊಡೆತವನ್ನು ಹೇಗಾದರೂ ಮಾಡಿ ತಪ್ಪಿಸಬೇಕು, ಗ್ರಾಹಕರನ್ನು ಮತ್ತೆ ತಮ್ಮ ಬಳಿ ಬರುವಂತೆ ಮಾಡಬೇಕು ಎಂದು ಪಣ ತೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವರ್ತಕರ ಸಂಘ ರಾಜ್ಯದಲ್ಲೇ ಮೊದಲ ಬಾರಿಗೆ ಆಫರ್ ಮತ್ತು ಬಹುಮಾನಗಳನ್ನು ಗ್ರಾಹಕರಿಗೆ ನೀಡುವ ಹೊಸ ಯೋಜನೆಯೊಂದಕ್ಕೆ ಮುಂದಾಗಿದೆ. ಸುಮಾರು 40 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ವರ್ತಕರ ಸಂಘ ಈ ಹೊಸ ಆಲೋಚನೆಗೆ ಮುಂದಾಗಿದ್ದು, ಈ ಯೋಜನೆಗೆ ಪುತ್ತೂರು ಹಬ್ಬ ಎನ್ನುವ ಹೆಸರನ್ನೂ ಇಟ್ಟಿದೆ.
ಯಾವ ರೀತಿಯಲ್ಲಿ ಆನ್‌ಲೈನ್ ಸಂಸ್ಥೆಗಳು, ದೊಡ್ಡ ಮಳಿಗೆಗಳು ಆಫರ್ ಡಿಸ್ಕೌಂಟ್‌ಗಳನ್ನು ತಮ್ಮ ಸಾಮಗ್ರಿಗಳಿಗೆ ನೀಡುತ್ತದೋ, ಅದೇ ರೀತಿಯಲ್ಲಿ ಲಕ್ಕಿ ಕೂಪನ್ ಮೂಲಕ ಈ ಆಫರ್‌ಗಳನ್ನು ಗ್ರಾಹಕರಿಗೆ ನೀಡಲು ಪುತ್ತೂರು ವರ್ತಕ ಸಂಘ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಎರಡು ತಿಂಗಳ ಕಾಲ ಈ ಪುತ್ತೂರು ಹಬ್ಬ ಚಾಲ್ತಿಯಲ್ಲಿರಲಿದ್ದು, ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಇದನ್ನು ಮುಂದುವರಿಸುವ ಚಿಂತನೆಯೂ ಇದೆ. ಈಗ 500 ರೂಪಾಯಿ ಖರೀದಿಗೆ 1 ಕೂಪನ್ ಹಾಗೆಯೇ 1000 ರೂಪಾಯಿ ಖರೀದಿಗೆ 2-3 ಕೂಪನ್ ಸಿಗುತ್ತಿದೆ.
ಡಿಸೆಂಬರ್ 15 ರಿಂದ ಈ ಆಫರ್‌ಗಳು ಆರಂಭಗೊಳ್ಳಲಿದ್ದು, ತಮ್ಮ ಬಳಿ ವ್ಯವಹಾರವನ್ನು ಮಾಡುವ ಗ್ರಾಹಕರಿಗೆ ಅಂಗಡಿ ಮಾಲಕ ತನ್ನ ವಿವೇಚನೆಗೆ ಅನುಗುಣವಾಗಿ ಲಕ್ಕಿ ಕೂಪನ್ ಒಂದನ್ನು ನೀಡಲಿದ್ದಾನೆ. ಪುತ್ತೂರಿನ ಸುಮಾರು 100 ಅಂಗಡಿಗಳಲ್ಲಿ ಈ ಕೂಪನ್ ಲಭ್ಯವಿರಲಿದ್ದು, ಕೂಪನ್‌ನಲ್ಲಿರುವ ನಂಬರ್ ಲಕ್ಕಿ ಡ್ರಾದ ಸಂದರ್ಭದಲ್ಲಿ ಆಯ್ಕೆಯಾದಲ್ಲಿ ಅಂತಹ ಗ್ರಾಹಕನಿಗೆ ಟಿವಿ, ಮೊಬೈಲ್, ಫ್ರಿಡ್ಜ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲು ವರ್ತಕರ ಸಂಘ ಸಿದ್ಧವಾಗಿದೆ. ಲಕ್ಕಿ ಕೂಪನ್‌ಗಳನ್ನು ವರ್ತಕರ ಸಂಘ ತಮ್ಮ ಸಂಘದ ಸದಸ್ಯರಿಗೆ ನೀಡಲಿದೆ.
ಸಂಘ ನೀಡಿದ ಕೂಪನ್ ಬುಕ್‌ಗಳನ್ನು ಅಂಗಡಿ ಮಾಲಕ ತಮ್ಮ ಇಚ್ಛೆಗನುಸಾರವಾಗಿ ಗ್ರಾಹಕನಿಗೆ ಕೂಪನ್ ನೀಡಬಹುದಾಗಿದೆ. ವಾರದ ಕೊನೆಯ ದಿನ ವರ್ತಕರ ಸಂಘದ ಸದಸ್ಯರು ಅಂಗಡಿಗಳಿಗೆ ವಿತರಿಸಲಾದ ಲಕ್ಕಿ ಕೂಪನ್‌ನ ಕೌಂಟರ್ ಫೈಲ್‌ಗಳನ್ನು ಕಲೆಕ್ಟ್ ಮಾಡಿ, ವಾರದ ಕೊನೆಯ ದಿನ ಲಕ್ ಡ್ರಾ ಮಾಡುತ್ತದೆ. ಈ ಡ್ರಾದಲ್ಲಿ ವಿಜೇತರಾದವರಿಗೆ ಟಿವಿ, ಮೊಬೈಲ್, ಫ್ರಿಡ್ಜ್‌ಗಳು ಸಿಗಲಿದೆ.
ಚಿಲ್ಲರೆ ಉದ್ಯಮಕ್ಕೆ ಪುಷ್ಠಿ ನೀಡಲಿದೆ ಈ ವ್ಯವಸ್ಥೆ
ಇದರ ಮುಂದಿನ ಭಾಗವಾಗಿ ಲಕ್ಕಿ ಕೂಪನ್‌ಗಳಿಗೆ ಬಂಪರ್ ಡ್ರಾ ಕೂಡಾ ಮಾಡಲಾಗುತ್ತದೆ. ಎರಡು ತಿಂಗಳಿಗೊಮ್ಮೆ ಈ ಬಂಪರ್ ಡ್ರಾ ನಡೆಯಲಿದ್ದು, ಇದರಲ್ಲಿ ಕಾರು, ಬೈಕ್ ಮತ್ತು ಇತರ ಬೆಲೆ ಬಾಳುವ ಬಹುಮಾನಗಳನ್ನು ನೀಡಲು ಸಂಘ ತೀರ್ಮಾನಿಸಿದೆ. ವಾರದ ಲಕ್ಕಿ ಡ್ರಾದಲ್ಲಿ ಭಾಗವಹಿಸಿದ ಗ್ರಾಹಕನಿಗೂ ಈ ಬಂಪರ್ ಡ್ರಾದ ಆಫರ್‌ಗಳು ಸಿಗಲಿದ್ದು, ಈ ಮೂಲಕವಾದರೂ ಗ್ರಾಹಕರು ಸಣ್ಣ-ಪುಟ್ಟ ಅಂಗಡಿಗಳಿಗೆ ಬರುತ್ತಾರೆ ಎನ್ನುವ ಆಶಾಭಾವನೆಯಲ್ಲಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
Dakshina Kannada,Karnataka