Last Updated:
ಧರ್ಮಸ್ಥಳದಲ್ಲಿ 2026ರ ಎಪ್ರಿಲ್ 29ರಂದು 54ನೇ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ವೀರೇಂದ್ರ ಹೆಗ್ಗಡೆ ನೇತೃತ್ವದ ಟ್ರಸ್ಟ್ ಈವರೆಗೆ 13000 ಜೋಡಿಗಳನ್ನು ವಿವಾಹಗೊಳಿಸಿದೆ.
ಮಂಗಳೂರು: ಧರ್ಮಸ್ಥಳ ನಾಲ್ಕು ಬಗೆಯ ದಾನಗಳಿಗೆ (Donation) ಹೆಸರಾದ ಧರ್ಮಕ್ಷೇತ್ರ. ದಾನದಲ್ಲಿ ಮಹಾದಾನ ಕನ್ಯಾದಾನ ಎನ್ನುತ್ತಾರೆ. ಸಾವಿರ ಅಶ್ವಮೇಧದ ಪುಣ್ಯ (virtue) ಕೊಡುವ ಕನ್ಯಾದಾನಕ್ಕೆ ಸೂರು ಒದಗಿಸುತ್ತಾ 50 ವಸಂತಗಳನ್ನು ಧರ್ಮಸ್ಥಳ ಸುಕ್ಷೇತ್ರ ಪೂರೈಸಿದೆ. ಈಗ ಕೂಡ 54ನೇ ಸಾಮೂಹಿಕ ವಿವಾಹಕ್ಕಾಗಿ ಧರ್ಮಸ್ಥಳ ತಯಾರಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಎಪ್ರಿಲ್ 29ರಂದು ಸಂಜೆ 6.40 ಗಂಟೆಗೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಮೃತ ವರ್ಷಿಣಿ ಸಭಾಭವನದಲ್ಲಿ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ವಿಶೇಷ ಏನೆಂದರೆ ಪ್ರತೀ ಜಾತಿಗಳಿಗೂ ಒಂದೇ ಸೂರಿನಡಿ ತಮ್ಮದೇ ಸಂಪ್ರದಾಯದಂತೆ ವಿವಾಹವಾಗಲು ಅವಕಾಶ ಒದಗಿಸಲಾಗುತ್ತದೆ.
ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ, ಕಣ ಹಾಗೂ ಮಂಗಳ ಸೂತ್ರ ಹಾಗೂ ಹೂವಿನ ಹಾರವನ್ನು ನೀಡಲಾಗುತ್ತದೆ. ಮದುವೆಯ ಎಲ್ಲಾ ವೆಚ್ಚವನ್ನು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುತ್ತದೆ. ಈ ಸಾಮೂಹಿಕ ಮದುವೆಯಲ್ಲಿ ಎರಡನೇ ಮದುವೆಗೆ ಅವಕಾಶ ಇರೋದಿಲ್ಲ. ಹಾಗೆಯೇ ವಧು-ವರರ ತಂದೆ-ತಾಯಿಯ ಉಪಸ್ಥಿತಿಯ ಅತ್ಯಗತ್ಯ. ಹಾಗೆಯೇ ವಧು-ವರರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ತಮ್ಮ ಶಾಲಾ ದಾಖಲಾತಿ ಪತ್ರ ತರಬೇಕು.
ವರದಕ್ಷಿಣೆ ಹಾಗೂ ಮದುವೆಗೆ ಆಗುವ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು 1972ರಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹವನ್ನು ಪ್ರತಿವರ್ಷ ನಡೆಸಲಾಗುತ್ತಿದೆ. ಈ ತನಕ ಒಟ್ಟು 13 ಸಾವಿರ ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ ಶಾಂತಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ
Dakshina Kannada,Karnataka
Dec 29, 2025 12:58 PM IST