Last Updated:
ದಕ್ಷಿಣ ಕನ್ನಡದ ಕೃಷಿಕರು ಕೇರಳದಿಂದ ಬರುವ ಕಾಡಾನೆಗಳ ಹಾವಳಿಯಿಂದ ತೋಟ ನಾಶ, ಜೀವ ಭಯ ಎದುರಿಸುತ್ತಿದ್ದಾರೆ. ಆನೆ ಟಾಸ್ಕ್ ಫೋರ್ಸ್ ಘೋಷಣೆ ಮಾತ್ರ ಮಾಡಿದ್ದು , ಪರಿಹಾರ ಹಾಗೂ ಕ್ರಮಕ್ಕೆ ರೈತರು ಒತ್ತಾಯ ಮಾಡಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರಿಗೆ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ (Wild Animals) ಹಾವಳಿ ಹೆಚ್ಚಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ (Agriculture) ಉಳಿಸುವ ಜೊತೆಗೆ ತಮ್ಮ ಪ್ರಾಣವನ್ನೂ ಉಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಕೇರಳ (Kerala) ಆನೆಗಳ ಉಪಟಳ ಹೆಚ್ಚಾಗುತ್ತಿದೆ. ಆನೆ ಟಾಸ್ಕ್ ಫೋರ್ಸ್ (Elephant Task Force) ಭರವಸೆ ಆಗಿಯೇ ಉಳಿದಿದೆ.
ದಕ್ಷಿಣ ಕನ್ನಡ ಜಿಲ್ಲೆ ಕೃಷಿಕರು ಹಲವು ರೀತಿಯ ಸಮಸ್ಯೆಗಳಿಗೆ ಎದುರಿಸುತ್ತಿದ್ದು, ಕಾಡಾನೆ ಉಪಟಳವೂ ಸೇರಿಕೊಂಡಿದೆ. ಅರಣ್ಯದಂಚಿನ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕೃಷಿಕರ ತೋಟಗಳನ್ನು ನಾಶ ಮಾಡುತ್ತಿರುವುದು ಶೇಕಡ 60 ಆನೆಗಳು ಕೇರಳದಿಂದ ಬರ್ತಿರೋದು ಅನ್ನೋದು ವಿಶೇಷ. ಮಂಡೆಗೋಲು ಅರಣ್ಯದಿಂದ ಪಯಸ್ವಿನಿ ನದಿಯನ್ನು ದಾಟಿ ಮರ್ಕಂಜ, ಅರಂತೋಡು, ಸಂಪಾಜೆ, ಪಾಣಾಜೆ, ಪೆರ್ಲಂಪ್ಪಾಡಿ ಮೂಲಕ ಸಾಗಿ ಕಾಡಂಚಿನ ಕೃಷಿ ಭೂಮಿಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ.
ಆನೆಗಳಿಂದ ದೊಡ್ಡ ಸಮಸ್ಯೆ ಆಗಿದೆ. ಕೃಷಿಕರಿಗೆ ಅದರಲ್ಲೂ ಪ್ರಮುಖವಾಗಿ ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ಅಪಾರ ನಾಶ ಆಗುತ್ತಿದೆ. ಅಡಿಕೆ, ತೆಂಗು, ರಬ್ಬರ್, ಬಾಳೆ ಸೇರಿದಂತೆ ಯಾವುದೇ ಕೃಷಿ ಮಾಡಲು ಆಗುತ್ತಿಲ್ಲ. ಕೊಡಗಿನಿಂದ ಸುಳ್ಯಗೆ, ಸಕಲೇಶಪುರದಿಂದ ಕಡಬ ಭಾಗಕ್ಕೆ, ಚಿಕ್ಕಮಗಳೂರಿನಿಂದ ಬೆಳ್ತಂಗಡಿಗೆ ಆನೆಗಳು ಬರ್ತಿದೆ ಎಂದು ರೈತ ಮುಖಂಡ ಸುನಿಲ್ ಬೋರ್ಕರ್ ತಿಳಿಸಿದ್ದಾರೆ.
ಅಲ್ಲದೇ, ಆನೆ ಸಮಸ್ಯೆಗೆ ಪರಿಹಾರ ನೀಡಲು ಇಟಿಎಫ್ ಬೇಕು, ಘೋಷಣೆ ಆಗಿದ್ದರೂ ಪ್ರಯೋಜನ ಆಗಿಲ್ಲ. ರ್ಯಾಪಿಟ್ ರಿಯಾಕ್ಷನ್ ಫೋರ್ಸ್ ಕೂಡ ಇಲ್ಲಿಗೆ ನಮಗೆ ಬೇಕಿದೆ ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಆನೆಗಳು ಜನವಸತಿ ಪ್ರದೇಶಗಳಿಗೆ ಬರೋದನ್ನು ತಡೆಯಲು ರಾಜ್ಯ ಸರಕಾರ ಕಳೆದ ಬಜೆಟ್ನಲ್ಲಿ ಎಲಿಫೆಂಡ್ ಟಾಸ್ಕ್ ಫೋರ್ಸ್ ಮಾಡುವ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಸರಕಾರ ಕೂಡಲೇ ಈ ತಂಡವನ್ನು ರಚಿಸುವ ಜೊತೆಗೆ ರ್ಯಾಪಿಡ್ ರೆಸ್ಕೂ ಫೋರ್ಸ್ ರಚಿಸಬೇಕು. ಆನೆ ದಾಳಿ ಹಾನಿಗೆ ನೀಡಬೇಕಾದ 4 ಕೋಟಿ ರೂಪಾಯಿ ಪರಿಹಾರ ಶೀಘ್ರವೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Bangalore [Bangalore],Bangalore,Karnataka