Last Updated:
ಮಂಡೆಕೋಲು ಗ್ರಾಮ ಗೇಟ್ ವೇ ಆಫ್ ಎಲಿಫೆಂಟ್ ಎಂದು ಪ್ರಸಿದ್ಧಿ ಪಡೆದಿದ್ದು, ಕಾಡಾನೆ ಸಮಸ್ಯೆಯಿಂದ ಹುಡುಗರಿಗೆ ಮದುವೆ ಸಮಸ್ಯೆ, ಜನರು ಹೆಣ್ಣು ಕೊಡಲು ಹಿಂಜರಿಯುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ದಕ್ಷಿಣ ಕನ್ನಡ: ಈ ಗ್ರಾಮದ (Village) ಮದುವೆಯಾಗುವ ವಯಸ್ಸಿನ ಹುಡುಗರಿಗೆ ಹೆಣ್ಣು ಕೊಡಲು ಜನ ಹಿಂದೆಮುಂದೆ ನೋಡುತ್ತಾರೆ. ಯಾಕೆ ಈ ರೀತಿಯ ಗೊಂದಲ ಈ ಗ್ರಾಮದ ಮೇಲೆ ಅನ್ನೋದಕ್ಕೆ ಪ್ರಮುಖ ಕಾರಣವೇ ಇಲ್ಲಿನ ವನ್ಯಜೀವಿಗಳ (Wild Life) ಸಮಸ್ಯೆ. ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಅತೀ ಕುಗ್ರಾಮ ಎಂದು ಗುರುತಿಸಿಕೊಂಡಿರುವ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಸದ್ಯದ ಸ್ಥಿತಿ.
ಹಸಿರಿನಿಂದ ಸಂಪದ್ಭರಿತವಾದ ಈ ಗ್ರಾಮದಲ್ಲಿ ಪರಿಶುದ್ಧ ಗಾಳಿಯಿದೆ, ಶುಭ್ರ ಜಲವಿದೆ ಆದರೆ ಇಲ್ಲಿನ ಜನರಿಗೆ ಮಾತ್ರ ಪ್ರತಿದಿನವೂ ಸಮಸ್ಯೆಗಳು ಮಾತ್ರ ಮುಗಿಯೋದೇ ಇಲ್ಲ. ದಟ್ಟ ಅರಣ್ಯದಂಚಿನಲ್ಲಿರುವ ಈ ಗ್ರಾಮಕ್ಕೆ ವನ್ಯಜೀವಿಗಳ ಓಡಾಟ ಸಾಮಾನ್ಯ. ಅದರಲ್ಲೂ ಈ ಗ್ರಾಮ ಗೇಟ್ ವೇ ಆಫ್ ಎಲಿಫೆಂಟ್.
ಕೇರಳದ ಗಡಿ ಹಂಚಿಕೊಂಡಿರುವ ಈ ಗ್ರಾಮದ ಮೂಲಕವೇ ಕಾಡಾನೆಗಳು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ ಹೀಗೆ ಎಲ್ಲಾ ಕಡೆಗಳಿಗೂ ಪಸರಿಸುತ್ತವೆ. ಇದೇ ಕಾರಣಕ್ಕೆ ಈ ಗ್ರಾಮವನ್ನ ಗೇಟ್ ವೇ ಆಫ್ ಎಲಿಫೆಂಟ್ ಎಂದು ಸ್ಥಳೀಯ ಜನ ಕರೆಯುತ್ತಿದ್ದಾರೆ. ಆನೆಗಳು ಕೇವಲ ಕೃಷಿಭೂಮಿಗೆ ನುಗ್ಗಿ ಹಾನಿ ಮಾಡೋದಲ್ಲದೆ, ಇದೀಗ ಇಲ್ಲಿನ ಜನರ ಮೇಲೂ ದಾಳಿಗೆ ಮುಂದಾಗುತ್ತಿರುವುದು ಈ ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿದೆ.
ಈ ಗ್ರಾಮದ ಕಾಡಾನೆಗಳ ಸಮಸ್ಯೆಯನ್ನು ತಿಳಿದಿರುವ ಜನ ಈ ಗ್ರಾಮಕ್ಕೆ ಹೆಣ್ಣು ಕೊಟ್ಟು ಸಂಬಂಧ ಬೆಳೆಸಲು ಹಿಂದೆ ಮುಂದೆ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಮಾತನ್ನ ಇಲ್ಲಿನ ಸ್ಥಳೀಯ ನಿವಾಸಿಗಳೇ ಹೇಳುತ್ತಿದ್ದಾರೆ. ಇಲ್ಲಿನ ಹುಡುಗರು ಮದುವೆಯಾಗಬೇಕಾದಲ್ಲಿ ಒಂದೋ ಊರು ಬಿಟ್ಟು ಬೇರೆ ಕಡೆಗೆ ಶಿಫ್ಟ್ ಆಗಬೇಕು ಇಲ್ಲವೇ ಮದುವೆಯಾಗದೇ ಇರಬೇಕು ಎನ್ನುವ ಸ್ಥಿತಿಯಿದೆ.
ಚಿರಯುವಕರಾಗಿ ಬಿಡುತ್ತೇವೆ ಎಂಬ ಭಯ
ವನ್ಯಜೀವಿಗಳ ಉಪಟಲದಿಂದ ಒಂದು ಕಡೆ ಬೆಳೆದ ಕೃಷಿಯೂ ನಾಶವಾಗುತ್ತಿದ್ದರೆ, ಇನ್ನೊಂದೆಡೆ ಕಾಡಾನೆಗಳು ಯಾವಾಗ, ಎಲ್ಲಿ ತಮ್ಮ ಮೇಲೆ ದಾಳಿ ಮಾಡುತ್ತದೆ ಎನ್ನುವ ಆತಂಕದಲ್ಲೇ ಈ ಗ್ರಾಮದ ಜನ ಬದುಕುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಇರುವ ಈ ಊರಿಗೆ ಹೆಣ್ಣು ಕೊಟ್ಟು, ಮಗಳನ್ನ ಸಂಕಷ್ಟಕ್ಕೆ ದೂಡಲು ಯಾರು ತಾನೇ ಸಿದ್ಧರಿದ್ದಾರೆ ಅನ್ನೋದು ಸ್ಥಳೀಯ ನಿವಾಸಿಯಾದ ಸುರೇಶ್ ಮಂಡೆಕೋಲು ಅಭಿಪ್ರಾಯ. ಕಾಡಾನೆಗಳ ಹಾವಳಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಹೆಚ್ಚಾಗಿದ್ದು, ಈ ಹಿಂದೆ ಈ ಊರಿನಲ್ಲಿ ಮದುವೆಯಾದವರು ಬಚಾವ್ ಆಗಿದ್ದು, ಮುಂದೆ ಊರಿನಲ್ಲಿ ಆನೆಗಳ ಕಂಟ್ರೋಲ್ ಆಗೋ ತನಕ ಹುಡುಗರು ಕುವರರಾಗಿಯೇ ಉಳಿಯಬೇಕಾದ ಅನಿವಾರ್ಯತೆಯಿದೆ.
Dakshina Kannada,Karnataka