Last Updated:
ಖಡಕ್ ಆಫೀಸರ್ಸ್ ವರ್ಗಾವಣೆ ಹಿಂದೆ ಹುನ್ನಾರ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇಬ್ಬರು ಅಧಿಕಾರಿಗಳ ವರ್ಗಾವಣೆ ಚರ್ಚೆಗೆ ಶಾಸಕ ವೇದವ್ಯಾಸ ಕಾಮತ್ ವಿರೋಧಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಕಳೆದ ಆರು ತಿಂಗಳಿನಿಂದ ಅಕ್ರಮ ಚಟುವಟಿಕೆಗಳು ನಿಂತಿದೆ. ಇದಕ್ಕೆ ಕಾರಣ, ಮಂಗಳೂರು ಪೊಲೀಸ್ ಕಮಿಷನರ್ (Managaluru Police Commissioner) ಹಾಗೂ ಎಸ್ಪಿ (Dakshina Kannada SP) ಅನ್ನೋದು ಸಹಮತದ ಅಭಿಪ್ರಾಯ. ಆದ್ರೀಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ ನಿಷ್ಠಾವಂತ ಅಧಿಕಾರಿಗಳ ವರ್ಗಾವಣೆ ಹುನ್ನಾರ ನಡೆದಿದ್ಯಾ? (Police Transfer) ಅನ್ನೋ ಚರ್ಚೆ ಜೋರಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಎಷ್ಟೇ ಮುಂದುವರಿದ್ರೂ ಕೋಮು ಸೂಕ್ಷ್ಮ ಜಿಲ್ಲೆ ಅನ್ನೋ ಹಣೆಪಟ್ಟಿ ಹೋಗಿಲ್ಲ. ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದೆ ಪೊಲೀಸ್ರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ 6 ತಿಂಗಳಿಂದೆ ದಕ್ಷ ಪೊಲೀಸ್ ಅಧಿಕಾರಿಗಳಾದ ಸುದೀರ್ ಕುಮಾರ್ ರೆಡ್ಡಿ ಅವ್ರನ್ನ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಹಾಗೆ ಅರುಣ್ ಕುಮಾರ್ರನ್ನ ದಕ್ಷಿಣ ಕನ್ನಡ ಎಸ್ಪಿಯಾಗಿ ನೇಮಕ ಮಾಡ್ಲಾಗಿತ್ತು. ಇಬ್ರು ಖಡಕ್ ಆಫೀಸರ್ಸ್ ಜಿಲ್ಲೆಗೆ ಎಂಟ್ರಿ ಕೊಟ್ತಿದ್ದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಗಾಂಜಾ ಗಿರಾಕಿಗಳನ್ನು ಜೈಲಿಗೆ ಅಟ್ಟಿದ್ರು. ಅಡ್ಡ ದಾರಿ ತುಳಿಯೋರ ನಿದ್ದೆಯಲ್ಲೂ ಭಯ ಹುಟ್ಟಿಸಿದ್ರು. ಆದರೆ ಈಗ ಅದೇ ದಕ್ಷ ಅಧಿಕಾರಿಗಳ ವರ್ಗಾವಣೆ ಚರ್ಚೆಗೆ ಗ್ರಾಸವಾಗಿದೆ.
ಪೊಲೀಸ್ ಅಧಿಕಾರಿಗಳು ಅಂದ್ರೆ ಹಿಂಗಿರ್ಬೇಕಪ್ಪ ಅಂತ ಜನಸಾಮಾನ್ಯರು ಮಾತಾಡಿಕೊಳ್ತಿದ್ರು. ಅಕ್ರಮ ಚಟುವಟಿಕೆ, ಕೆಲವೊಂದು ಮಾಫಿಯಾ ನಡೆಸ್ತಿದ್ದವ್ರು ಈಗ ಬಾಲ ಮುದುಡಿಕೊಂಡು ಬಿಲ ಸೇರುವಂತಾಗಿದೆ. ಹೀಗಾಗಿ ರಾಜ್ಯದ ಹಿರಿಯ ನಾಯಕರಿಗೆ ವರ್ಗಾವಣೆ ಮಾಡಿ ಅಂತ ದುಂಬಾಲು ಬೀಳುತ್ತಿದ್ದಾರೆ ಎನ್ನಲಾಗಿದೆ.
ಖಡಕ್ ಆಫೀಸರ್ಸ್ ವರ್ಗಾವಣೆ ಹಿಂದೆ ಹುನ್ನಾರ ನಡೆದಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಇಬ್ಬರು ಅಧಿಕಾರಿಗಳ ವರ್ಗಾವಣೆ ಚರ್ಚೆಗೆ ಶಾಸಕ ವೇದವ್ಯಾಸ ಕಾಮತ್ ವಿರೋಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ವೇದವ್ಯಾಸ ಕಾಮತ್, ಮಂಗಳೂರಿನ ಪೊಲೀಸ್ ಕಮಿಷನರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಅವರ ವರ್ಗಾವಣೆಗೆ ಯಾರೋ ಬಂಡವಾಳ ಶಾಹಿ, ದಂಧೆಕೋರರು ಪ್ರಯತ್ನ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ತಡೆಯುತ್ತಿರುವ ಅಧಿಕಾರಿಗಳನ್ನು ಇಲ್ಲಿಂದ ಎತ್ತಂಗಡಿ ಮಾಡುತ್ತಿರುವ ಪ್ರಯತ್ನ ಸರಿಯಲ್ಲ ಎಂದು ಆರೋಪಿಸಿದ್ದಾರೆ.
Dakshina Kannada,Karnataka
Jan 11, 2026 12:42 PM IST