Last Updated:
ಪುತ್ತೂರಿನ ಫಿಸಿಯೋಥೆರಪಿಸ್ಟ್ ಶರತ್ ಶೆಟ್ಟಿ, ಅರುಣ್ ಮತ್ತು ಸುಧೀರ್ ಕುಮಾರ್ ರೆಡ್ಡಿ ಜಿಲ್ಲೆಯಲ್ಲಿ ಉಳಿಯಲಿ ಎಂದು ಶಿರಾಡಿಘಾಟ್ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದಕ್ಷಿಣ ಕನ್ನಡ: ಪೊಲೀಸರನ್ನ (Police) ಕಂಡ್ರೆ ಸಾಮಾನ್ಯ ಜನ ಮಾರು ದೂರ ಡಿಸ್ಟನ್ಸ್ ಕಾಪಾಡಿಕೊಳ್ತಾರೆ. ಯಾಕೆ ಬೇಕಪ್ಪಾ ನಮಗೆ ಠಾಣೆ, ಕೋರ್ಟು, ಕಚೇರಿ (Office) ಅಲೆದಾಟ ಅಂತಾನೂ ಹೇಳೋ ಜನ ಇದ್ದಾರೆ. ಕೆಲ ವರ್ಷಗಳ ಹಿಂದೆಯಂತೂ ನಾನು ಪೊಲೀಸ್ ಠಾಣೆ, ಕೋರ್ಟು ಮೆಟ್ಟಿಲು ಹತ್ತಿಲ್ಲ ಅನ್ನೋದು ಸಭ್ಯತೆಯ ಚಿಹ್ನೆಯಾಗಿತ್ತು. ಆದರೆ ಈಗ ಸಮಯ ಬದಲಾದರೂ ಕೆಲವೊಮ್ಮೆ ಆ ಅಸಂಗತ ಪೊಲೀಸ್ ಭಯ ಜನರಲ್ಲಿದೆ. ಆದರೆ ಇಲ್ಲಿ ನಡೆದಿರೋದು ವ್ಯತಿರಿಕ್ತವಾದ (Adverse) ವಿಷಯ! ವೈಯಕ್ತಿಕ ಕಾರಣಕ್ಕಾಗಿ ಹರಕೆ ಹೊರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಮನುಷ್ಯ ದೇವರಿಗೆ ಪೊಲೀಸ್ ಅಧಿಕಾರಿಗಳಿಗಾಗಿ (Officer) ಪೂಜೆ ಮಾಡಿಸಿದ್ದಾರೆ!
ಮಳೆಯಾಗಿಲ್ಲ ಅಂದಲ್ಲಿ, ಮಳೆ ಜಾಸ್ತಿಯಾದಲ್ಲಿ, ಕ್ರಿಕೆಟ್ನಲ್ಲಿ ಭಾರತ ತಂಡಕ್ಕೆ ಜಯ ಸಿಗಲಿ ಹೀಗೆ ಎಲ್ಲದಕ್ಕೂ ಇಂದು ದೇವರ ಮೊರೆ ಹೋಗೋದು ಸಾಮಾನ್ಯ. ದೇವಸ್ಥಾನದಲ್ಲಿ ಇದಕ್ಕೋಸ್ಕರ ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಸುತ್ತಾರೆ. ಆದರೆ ತನಗೆ ಪರಿಚಯವೇ ಇಲ್ಲದ ವ್ಯಕ್ತಿಗಳಿಗಾಗಿ ಪೂಜೆ ಮಾಡಿಸೋದು ಮಾತ್ರ ಕಡಿಮೆನೇ. ಇಲ್ಲೊಬ್ಬರು ಫಿಸಿಯೋಥೆರಪಿ ವೈದ್ಯರು ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿರುವ ಪೊಲೀಸ್ ಅಧಿಕಾರಿಗಳು ವರ್ಗಾವಣೆಯಾಗಬಾರದು ಎಂದು ದೇವರು ಈ ವರ್ಗಾವಣೆ ಪ್ರಯತ್ನವನ್ನ ವಿಫಲಗೊಳಿಸಬೇಕು ಎಂದು ದೇವರ ಮೊರೆ ಹೋಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ಯ ಕಾರ್ಯಾಚರಿಸುತ್ತಿರುವ ದಕ್ಷ ಪೊಲೀಸ್ ಅಧಿಕಾರಿಗಳ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡಿ ವರ್ಗಾವಣೆಗೆ ಮುಂದಾಗುತ್ತಿರುವುದು ಈ ವೈದ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಇದಕ್ಕಾಗಿ ಅವರು ನೇರವಾಗಿ ದೇವರಿಗೇ ಕಂಪ್ಲೇಂಟ್ ಕೊಟ್ಟು, ಪರಿಹಾರ ಒದಗಿಸುವಂತೆ ಬೇಡಿಕೊಂಡಿದ್ದಾರೆ.
ಪುತ್ತೂರಿನ ನೆಹರುನಗರದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಪ್ರ್ಯಾಕ್ಟೀಸ್ ಮಾಡುತ್ತಿರುವ ಶರತ್ ಶೆಟ್ಟಿ ದಕ್ಷಿಣ ಕನ್ನಡವನ್ನು ಡ್ರಗ್ಸ್ ಮುಕ್ತ ಜಿಲ್ಲೆಯಾಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎನ್ನುವ ಇಬ್ಬರು ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲೇ ಇನ್ನು ಕೆಲವು ವರ್ಷಗಳು ಉಳಿಯಬೇಕೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಿರಾಡಿಘಾಟ್ನ ಚಾಮುಂಡಿಗೆ ಮೊರೆಹೋದ ವೈದ್ಯ
ಮಂಗಳೂರಿನಲ್ಲಿ ಗಲಾಟೆ ಹಾಗೂ ವೇಶ್ಯಾವಾಟಿಕೆ, ಮಸಾಜ್ ಪಾರ್ಲರ್ ದಂಧೆಗಳನ್ನು ನಿಲ್ಲಿಸಿ ಯಾವುದಕ್ಕೂ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಕಮಿಷನರ್ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೆ ನಮ್ಮ ರಾಜಕಾರಣಿಗಳು ವರ್ಗಾವಣೆಯ ಕುತಂತ್ರ ಫಲಿಸಬಾರದು ಎಂದು ಅವರು ಪ್ರಾರ್ಥಿಸಿಕೊಂಡಿದ್ದಾರೆ. ಶಿರಾಡಿಘಾಟ್ನ ತಪ್ಪಲಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅವರು ತಮ್ಮ ಪ್ರಾರ್ಥನೆಯನ್ನು ನೆರವೇರಿಸಿದ್ದಾರೆ.
Dakshina Kannada,Karnataka