Last Updated:
ಪಂಕಜ್ ತನ್ವರ್ ಅವರ AI ಹೆಲ್ಮೆಟ್ ಬೆಂಗಳೂರು ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಹಚ್ಚಿ ಪೊಲೀಸರಿಗೆ ಇಮೇಲ್ ಮಾಡುತ್ತದೆ; ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಂದ್ರೆ ಟ್ರಾಫಿಕ್ಕು. ಸಿಲಿಕಾನ್ ಸಿಟಿಯಲ್ಲಿ (Silicon City) ಜನ ಸಿಡಿಮಿಡಿ ಆಗುವಂತೆ ಮಾಡೋದೇ ರಸ್ತೆ ಗುಂಡಿ, ರಸ್ತೆ ನಿಯಮ ಉಲ್ಲಂಘನೆ ಹಾಗೂ ವಿಪರೀತವಾದ ವಾಹನ (Vehicle) ದಟ್ಟಣೆ. ಈಗ ಇದಕ್ಕೊಂದು ಸೂಪರ್ ಪರಿಹಾರವನ್ನು (Solution) ಟೆಕ್ಕಿಯೊಬ್ಬರು ಕಂಡುಹಿಡಿದಿದ್ದಾರೆ. ಹೌದು, ಸೂಕ್ತವಾಗಿ ಅಳವಡಿಕೆಯಾದರೆ ಇದೊಂದು ಸಂಚಾರ ಕ್ರಾಂತಿ (Traffic Marvel) ಆಗೋದ್ರಲ್ಲಿ ಸಂಶಯವಿಲ್ಲ!
ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಮತ್ತು ರಸ್ತೆ ನಿಯಮ ಉಲ್ಲಂಘನೆಗೆ ಬೇಸತ್ತ ಟೆಕ್ಕಿಯೊಬ್ಬರು ವಿಶಿಷ್ಟ ಪರಿಹಾರ ಕಂಡುಕೊಂಡಿದ್ದಾರೆ. ಪಂಕಜ್ ತನ್ವರ್ ಎಂಬ ಯುವಕ ತಮ್ಮ ಹೆಲ್ಮೆಟ್ ಅನ್ನೇ ‘ಸಂಚಾರಿ ಪೊಲೀಸ್’ ಆಗಿ ಪರಿವರ್ತಿಸಿದ್ದು, ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಓಡಾಡುವವರನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡುವ ಎಐ ಸಾಧನ ಹೊಂದಿರುವ ಹೆಲ್ಮೆಟ್ ವ್ಯವಸ್ಥೆಯನ್ನು ರೂಪಿಸಿದ್ದಾರೆ. ತಮಾಷೆಯ ವಿಷಯವೇನೆಂದರೆ ಯಾವಾಗಾದ್ರೂ ಅಡ್ಡಾದಿಡ್ಡಿ ಡ್ರೈವಿಂಗ್ ಮಾಡೋ ಚಾಲಕರು ಕಂಡರೆ ʼದಯವಿಟ್ಟು ಸರಿಯಾಗಿ ವಾಹನ ಚಲಾಯಿಸಿʼ ಎಂದು ಇಂಗ್ಲೀಷ್ನಲ್ಲಿ ಅವರಿಗೆ ಮಾತಾಡಿ ಎಚ್ಚರಿಸಲಿದೆಯಂತೆ!
“ರಸ್ತೆಯಲ್ಲಿನ ಅವಿವೇಕಿ ಜನರನ್ನು ನೋಡಿ ಬೇಸತ್ತು ನನ್ನ ಹೆಲ್ಮೆಟ್ ಅನ್ನು ಹೀಗೆ ಕೋಡ್ ಮಾಡಿ ಸ್ಮಾರ್ಟ್ ಹೆಲ್ಮೆಟ್ ಆಗಿಸಿದ್ದೇನೆ” ಎಂದು ಪಂಕಜ್ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಬೈಕ್ ಓಡಿಸುವಾಗ ಹೆಲ್ಮೆಟ್ನಲ್ಲಿ ಅಳವಡಿಸಲಾದ ಎಐ ಏಜೆಂಟ್ ರಿಯಲ್ ಟೈಮ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಕ್ಕಪಕ್ಕದಲ್ಲಿ ಯಾರಾದರೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದರೆ, ತಕ್ಷಣವೇ ಅದು ಪತ್ತೆಹಚ್ಚುತ್ತದೆ. ಅಷ್ಟೇ ಅಲ್ಲ, ನಿಯಮ ಉಲ್ಲಂಘಿಸಿದವರ ಫೋಟೋ, ನಂಬರ್ ಪ್ಲೇಟ್ ಮತ್ತು ಸ್ಥಳದ ವಿವರಗಳನ್ನು ಸ್ವಯಂಚಾಲಿತವಾಗಿ ಟ್ರಾಫಿಕ್ ಪೊಲೀಸರಿಗೆ ಇಮೇಲ್ ಮಾಡುತ್ತದೆ.
ಜನವರಿ 3, 2026 ರಂದು ಮಧ್ಯಾಹ್ನ ಹೊರ ವರ್ತುಲ ರಸ್ತೆಯಲ್ಲಿ (Outer Ring Road) ಸಂಚರಿಸುವಾಗ ಹೆಲ್ಮೆಟ್ ರಹಿತ ಸವಾರನೊಬ್ಬನ ವಿವರಗಳನ್ನು ಈ ತಂತ್ರಜ್ಞಾನದ ಮೂಲಕ ಸೆರೆಹಿಡಿದು ಪೊಲೀಸರಿಗೆ ಕಳುಹಿಸಿದ ಸ್ಕ್ರೀನ್ಶಾಟ್ ಅನ್ನು ಪಂಕಜ್ ಹಂಚಿಕೊಂಡಿದ್ದಾರೆ. “ಬೆಂಗಳೂರಿಗರೇ, ಇನ್ಮುಂದೆ ಸುರಕ್ಷಿತವಾಗಿ ವಾಹನ ಚಲಾಯಿಸಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ” ಎಂದು ತಮ್ಮ X ಮೂಲಕ ಮಾಹಿತಿ ಹಂಚಿಕೊಂಡು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರಿಂದಲೂ ಮೆಚ್ಚುಗೆ
ವಿಶೇಷವೆಂದರೆ, ಪಂಕಜ್ ಅವರ ಈ ನವೀನ ಆವಿಷ್ಕಾರಕ್ಕೆ ಬೆಂಗಳೂರು ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಅಧಿಕೃತ ಖಾತೆಯಿಂದ ಪಂಕಜ್ ಅವರಿಗೆ ಸಂದೇಶ ಕಳುಹಿಸಲಾಗಿದ್ದು, “ನಿಮ್ಮ ಹೆಲ್ಮೆಟ್ ಆಧಾರಿತ ಟ್ರಾಫಿಕ್ ಉಲ್ಲಂಘನೆ ಪತ್ತೆಹಚ್ಚುವ ಪರಿಕಲ್ಪನೆಯನ್ನು ನಾವು ಗಮನಿಸಿದ್ದೇವೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇದೊಂದು ವಿನೂತನ ಮತ್ತು ಆಸಕ್ತಿದಾಯಕ ಐಡಿಯಾ ಆಗಿದೆ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಈ ತಂತ್ರಜ್ಞಾನವನ್ನು ತಮ್ಮ ಇಲಾಖೆಯಲ್ಲಿ ಅಳವಡಿಸಿಕೊಳ್ಳಲು ಆಶಯ ವ್ಯಕ್ತಪಡಿಸಿದ್ದಾರೆ ಎಂದು ಈ ಕುರಿತು ಪಂಕಜ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Bangalore [Bangalore],Bangalore,Karnataka
Jan 17, 2026 12:00 PM IST