Last Updated:
29 ವರ್ಷಗಳ ಹಿಂದೆ ಮಂಗಳೂರಲ್ಲಿ ಜೋಡಿ ಕೊಲೆಯಾಗಿತ್ತು. ಕತ್ತಲ ರಾತ್ರಿಯಲ್ಲಿ ಇಬ್ಬರ ಹೆಣ ಉರುಳಿಸಿದ ದಂಡು ಪಾಳ್ಯದ ಸೈಲೆಂಟ್ ಕಿಲ್ಲರ್ ಯಾರ ಕೈಗೂ ಸಿಕ್ಕಿರ್ಲಿಲ್ಲ. ಆಂಧ್ರದಲ್ಲಿ ತಲೆಮರಿಸಿಕೊಂಡಿದ್ದವ್ನನ್ನ ಈಗ ಲಾಕ್ ಮಾಡಲಾಗಿದೆ.
ಬೆಂಗಳೂರು: ದಂಡುಪಾಳ್ಯ ಸಿನಿಮಾದವನ್ನು (Dandupalya Cinema) ಬಹುತೇಕ ಮಂದಿ ನೋಡಿರುತ್ತೀರಿ. ಅಲ್ಲದೇ ಸಿನಿಮಾ ನೋಡಿದವ್ರು ಅಕ್ಷರಶಃ ನಿಬ್ಬೆರಗಾಗಿ ಹೋಗೋದು ಗ್ಯಾರಂಟಿ. ಮನುಷ್ಯ ರೂಪದ ರಾಕ್ಷಸರ ಅಟ್ಟಹಾಸ ಕಂಡು ನರನಾಡಿಗಳಲ್ಲೂ ನಡುಕ ಶುರುವಾಗಿತ್ತು. ಹೆಣ್ಣು (Women) ಹೊನ್ನು ಕಂಡ್ರೆ ಸಾಕು ಹುರಿದು ಮುಕ್ಕಿಬಿಡ್ತಿದ್ರು. ಒಂದು ಕಾಲದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನಟೋರಿಯಸ್ ಗ್ಯಾಂಗ್ ಇದು. ಈಗ ಇವ್ರದ್ಯಾರದ್ದೂ ಸದ್ದಿಲ್ಲ. ರಕ್ತದ (Blood) ರುಚಿಗೆ ಮತ್ತೆ ಇಳಿದಂತೆ ಕಾಣ್ತಿಲ್ಲ. ಆದ್ರೆ, ದಶಕಗಳ ಹಿಂದೆ ಮಾಡಿದ ಪಾಪದ ಫಲ ಇನ್ನೂ ಮುಗಿದಿಲ್ಲ. ಹೀಗಾಗಿಯೇ 29 ವರ್ಷ ಹಿಂದೆ ಜೋಡಿ ಕೊಲೆ ಮಾಡಿದ್ದ ದಂಡುಪಾಳ್ಯ ಹಂತಕನನ್ನ (Gold) ಈಗ ಹೆಡೆಮುರಿ ಕಟ್ಟಿದ್ದಾರೆ. ಸುಮಾರು ಮೂರು ದಶಕಗಳಿಂದ ಪೊಲೀಸರ (Karnataka Police) ಕೈಗೆ ಸಿಗದೆ ತಲೆಮರಿಸಿಕೊಂಡಿದ್ದವ್ನನ್ನ ಈಗ ಖಾಕಿ ಖೆಡ್ಡಾಗೆ ಕೆಡವಿದೆ.
ಅದು 1997ರ ಸಮಯ, ಮಧ್ಯರಾತ್ರಿ ನಡೆದಿದ್ದ ಭೀಕರ ಜೋಡಿ ಕೊಲೆಗೆ ಮಂಗಳೂರು ಬೆಚ್ಚಿ ಬಿದ್ದಿತ್ತು. ಹಿಂದೆಂದೂ ಕಾಣದಂಥಾ ಬೀಭತ್ಸಕರ ಕೃತ್ಯ ಇಡೀ ಜಿಲ್ಲೆಯ ಜನರ ನಿದ್ದೆಗೆಡಿಸಿತ್ತು. ಮನೆಯಿಂದ ಹೊರ ಹೋಗೋದಿರಲಿ, ಮನೆಯೊಳಗೆ ಇರೋದಕ್ಕೂ ಜನ ಭಯ ಪಡ್ತಿದ್ದರು. ಅವತ್ತು ಜೋಡಿ ಕೊಲೆ ಮಾಡಿದ್ದ ಸೈಲೆಂಟ್ ಕಿಲ್ಲರ್ ಎಲ್ಲೋದ, ಏನಾದ ಅನ್ನೋದು ಯಾರಿಗೂ ಗೊತ್ತಿರ್ಲಿಲ್ಲ. ಈತನ ಸಣ್ಣ ಹೆಜ್ಜೆಗುರುತು ಸಹ ಪೊಲೀಸ್ರಿಗೆ ಸಿಕ್ಕಿರ್ಲಿಲ್ಲ. ಆದರೆ ಈಗ ಈತನ ಪಾಪದ ಕೊಡ ತುಂಬಿದೆ. ಹೀಗಾಗಿಯೇ 29 ವರ್ಷಗಳ ನಂತ್ರ ಕೋಳ ಬಿದ್ದಿದೆ.
ಮಧ್ಯರಾತ್ರಿ ಹೊತ್ತು, ಇಡೀ ಊರು ಸ್ಮಶಾನ ಮೌನದಂತಿತ್ತು. ಯಾರೊಬ್ಬರ ಸುಳಿವೂ ಇರ್ಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಮಾರಿಗುಡಿ ಕ್ರಾಸ್ ಬಳಿ ಅನ್ವರ್ ಮಹಲ್ ಅನ್ನೋ ಮನೆಯಿದೆ. ಇದೇ ಮನೆಗೆ ಇಡೀ ದಂಡುಪಾಳ್ಯ ಗ್ಯಾಂಗ್ ನುಗ್ಗಿತ್ತು. ಮನೆಯಲ್ಲಿದ್ದ 80 ವರ್ಷದ ಲೂಯಿಸ್ ಡಿಮೆಲ್ಲೋ ಹಾಗೂ 19 ವರ್ಷದ ರಂಜಿತ್‌ನ ಕತ್ತು ಸೀಳಿ ರಕ್ತದ ಕೋಡಿ ಹರಿಸಿದ್ರು. ಯಾವಾಗ ಜೋಡಿ ಹೆಣಗಳು ಉರುಳಿದ್ವೋ, ಇಡೀ ಮನೆಯನ್ನೆಲ್ಲಾ ಜಾಲಾಡಿ ಚಿನ್ನಾಭರಣದ ಮೂಟೆ ಕಟ್ಟಿದ್ರು. ಅವತ್ತು ನಡೆದಿದ್ದ ಈ ಜೋಡಿ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ತನಿಖೆಗಿಳಿದ ಉರ್ವ ಪೊಲೀಸರು, ಏಳು ಮಂದಿಯ ಹೆಡೆಮುರಿ ಕಟ್ಟಿದ್ರು. ಆದ್ರೆ, ಚಿಕ್ಕ ಹನುಮ ಅನ್ನೋ ಸೈಲೆಂಟ್ ಕಿಲ್ಲರ್ ಮಾತ್ರ ಕೈಗೆ ಸಿಕ್ಕಿರ್ಲಿಲ್ಲ. ಸತತ ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲಾ ಆರೋಪಿಗಳನ್ನ ಅಪರಾಧಿಗಳು ಅಂತಾ ತೀರ್ಪು ನೀಡಿತ್ತು. ಆದ್ರೆ, ಕೆ. ಕೃಷ್ಣಪ್ಪ ಅಲಿಯಾಸ್ ಕೃಷ್ಣ ಅಂತಾ ಹೆಸರು ಬದಲಿಸಿಕೊಂಡಿದ್ದ ಚಿಕ್ಕಹನುಮ ಮಾತ್ರ ಪೊಲೀಸರ ಕೈಗೆ ಸಿಕ್ಕಿರ್ಲಿಲ್ಲ.
ಈ ಸೈಲೆಂಟ್ ಕಿಲ್ಲರ್ ಚಿಕ್ಕ ಹನುಮ ಸಾಮಾನ್ಯದವನಲ್ಲ. ಈತನ ಮೇಲೆ 13 ಕೊಲೆ ಸೇರಿದಂತೆ ಹತ್ತಾರು ದರೋಡೆ ಪ್ರಕರಣಗಳಿವೆ. ಆದ್ರೆ, ಹೆಸರು ಬದಲಿಸಿಕೊಂಡಿದ್ದ ಚಿಕ್ಕ ಹನುಮ, ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ, ಮದನಪಲ್ಲಿ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಧೀರ್ಘ ಕಾಲದಿಂದ ಉಳಿದಿರೋ ಪ್ರಕರಣಗಳ ಬಗ್ಗೆ ಮಂಗಳೂರು ಪೊಲೀಸ್ರು ಬೆನ್ನುಹತ್ತಿದ್ರು. ಅದ್ರಲ್ಲಿ ಚಿಕ್ಕ ಹನುಮನ ಕೇಸ್ ಕೂಡಾ ಒಂದು. ಈತ ಹೆಸರು ಬದಲಿಸಿಕೊಂಡಿದ್ದಾನೆ ಅನ್ನೋದು ಗೊತ್ತಾಗ್ತಿದ್ದಂತೆ ಒಂದೊಂದೇ ಮಾಹಿತಿ ಪತ್ತೆಯಾಗಿತ್ತು. ಹೀಗಾಗಿ ಮದನಪಲ್ಲಿ ಗ್ರಾಮಕ್ಕೆ ಹೋಗಿಯೇ ಎತ್ತಾಕೊಂಡು ಬಂದಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅಭಿನಂದಿಸಿದ್ದಾರೆ.
1997ರಲ್ಲಿ ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೋಡಿ ಕೊಲೆಯಾಗಿತ್ತು. ಪ್ರಕರಣದಲ್ಲಿ ಚಿಕ್ಕಹನುಮ ಎಂಬ ಆರೋಪಿ ಎಸ್ಕೇಪ್ ಆಗಿದ್ದ. ಈಗ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ, ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ. ಈ ಗ್ಯಾಂಗ್ ನ ವಿರುದ್ಧ ಹಲವು ಪ್ರಕರಣಗಳಿದ್ದು, 8 ಪ್ರಕರಣಗಳು ಚಿಕ್ಕಹನುಮನ ಮೇಲಿದೆ. 3 ಪ್ರಕರಣಗಳಲ್ಲಿ ಹೈಕೋರ್ಟ್ ನಲ್ಲೂ ಶಿಕ್ಷೆ ಪ್ರಕಟವಾಗಿದೆ. ಹೆಸರು ವಿಳಾಸ ಬದಲಾವಣೆ ಮಾಡಿ ಆಂಧ್ರಗೆ ಹೋಗಿ ಹೊಸ ಫ್ಯಾಮಿಲಿ ಮಾಡಿಕೊಂಡು ವಾಸಿಸುತ್ತಿದ್ದ. ಕೋರ್ಟ್ ಆದೇಶವೊಂದರಲ್ಲಿ ಆರೋಪಿ ಹೆಸರು ಬದಲಾವಣೆ ಮಾಡಿರೋದು ಕಂಡ ಬಂದಿತ್ತು, ಕೂಡಲೇ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿವರಿಸಿದ್ದಾರೆ.
Mangalore,Dakshina Kannada,Karnataka