Last Updated:
ಪಣಂಬೂರು ಸಮುದ್ರ ತೀರದಲ್ಲಿ Gifted India ಆಯೋಜಿಸಿದ ಅಪರೂಪದ ಮೀನುಗಾರಿಕಾ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಗಾಳ ಬಳಸಿ ಮೀನು ಹಿಡಿದು ತೂಕ ಮಾಡಿ ಮತ್ತೆ ಸಮುದ್ರಕ್ಕೆ ಬಿಡಲಾಯಿತು.
ಮಂಗಳೂರು: ನದಿಗೆ, ತೋಡು, ಕೆರೆಗಳಿಗೆ ಗಾಳ (Fishing Net) ಹಾಕಿ ಮೀನು ಹಿಡಿಯುವುದನ್ನು ನಾವು ನೋಡಿದ್ದೇವೆ. ಆದರೆ ಕಡಲಿಗೆ ಗಾಳ ಹಾಕಿ ಮೀನು ಹಿಡಿಯುವ ಅಪೂರ್ವ ಸ್ಪರ್ಧೆಗೆ (Competition) ಮಂಗಳೂರು ನಗರದ ಪಣಂಬೂರು ಸಮುದ್ರ ತೀರ (Sea Shore) ಸಾಕ್ಷಿಯಾಗಿದೆ. ಹಾಗಂತ ಇಲ್ಲೇನು ವಿಶೇಷವಿದೆ? ಅಂತೀರಾ, ಇದು ಬಲು ಅಪರೂಪದ ಮೀನುಗಾರಿಕಾ ಸ್ಪರ್ಧೆ, ಇಂತಿಂಥಾ ಮೀನೇ ಇರಬೇಕು, ಅದಕ್ಕಿಷ್ಟೇ ತೂಕ (Weight) ಇರಬೇಕು, ಆಮೇಲೆ ಅದನ್ನ ತಿನ್ನಕೂಡದು ಅನ್ನೋ ನಿಯಮಗಳಿವು!
ಗಿಫ್ಟೆಡ್ ಇಂಡಿಯಾ ಸಂಸ್ಥೆ ಈ ಸ್ಪರ್ಧೆಗೊಂದು ವೇದಿಕೆ ಒದಗಿಸಿದೆ. ಜ.24 ಮತ್ತು 25ರಂದು ಎರಡು ದಿನಗಳ ಕಾಲ ಈ ಸ್ಪರ್ಧೆಯು ಪಣಂಬೂರು ಬಂದರ್ನ ಉತ್ತರದಲ್ಲಿರುವ ಬ್ರೇಕ್ ವಾಟರ್ನಲ್ಲಿ ನಡೆದಿದೆ. ಸಮುದ್ರಕ್ಕೆ ಹಾಕಲಾಗಿರುವ 950ಮೀ ವ್ಯಾಪ್ತಿಯ ಬ್ರೇಕ್ ವಾಟರ್ನ ಕಲ್ಲಬಂಡೆ ಹಾಸಿನಲ್ಲಿ 550ಮೀ ಉದ್ದಕ್ಕೆ ಈ ಸ್ಪರ್ಧೆ ಜರುಗಿತು. ಬೆಳ್ಳಂಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಸ್ಥಳೀಯ ಉತ್ಸಾಹಿ ಯುವಕರು ಸೇರಿ ದೇಶಾದ್ಯಂತ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.
ವಿಶೇಷ ಆ್ಯಂಗ್ಲಿಂಗ್ ಅಂದರೆ ಗಾಳ ಬಳಸಿ, ಗಾಳಕ್ಕೆ ಆರ್ಟಿಫಿಶಿಯಲ್ ಮೀನನ್ನು ಅಳವಡಿಸಿ ಸಮುದ್ರದಲ್ಲಿ ಮೀನು ಹಿಡಿಯಲಾಗುತ್ತದೆ. ಅತೀ ಹೆಚ್ಚು ತೂಕದ ಮೀನು ಹಿಡಿಯುವುದು ಮತ್ತು ಅತೀ ಹೆಚ್ಚು ಮೀನು ಹಿಡಿಯುವುದು ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. 500ಗ್ರಾಂ ಕಡಿಮೆ ತೂಕದ ಮೀನುಗಳನ್ನು ಸ್ಪರ್ಧೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
ಸ್ಪರ್ಧಿಗಳು ಗಾಳವನ್ನು ಸಮುದ್ರಕ್ಕೆ ಹಾಕಿ ಬ್ರೇಕ್ ವಾಟರ್ನಲ್ಲಿ ನಿಲ್ಲುತ್ತಾರೆ. ಗಾಳಕ್ಕೆ ಮೀನು ಸಿಕ್ಕುತ್ತಿದ್ದಂತೆ ತಕ್ಷಣ ಮೀನನ್ನು ತೂಕ ಮಾಡಿ, ಆ ಕ್ಷಣವೇ ಸಮುದ್ರಕ್ಕೆ ಬಿಡಲಾಗುತ್ತದೆ. ಯಾವುದೇ ಕಾರಣಕ್ಕೂ ಈ ಮೀನುಗಳನ್ನು ಮನುಷ್ಯ ಸೇವನೆಗೆ ಬಳಸಲಾಗುವುದಿಲ್ಲ. ಗಾಳಕ್ಕೆ ಸಿಕ್ಕ ಮೀನು ತೂಕ ಮಾಡಿ ಸಮುದ್ರಕ್ಕೆ ಬಿಡುವ ನಡುವೆ ಸತ್ತರೆ, ಅದನ್ನು ಸ್ಪರ್ಧೆಗೆ ಪರಿಗಣಿಸದೆ ಕೈಬಿಡಲಾಗುತ್ತದೆ.
ಕರಾವಳಿ ಪ್ರವಾಸೋದ್ಯಮಕ್ಕೆ ಇದು ಬೂಮಿಂಗ್ ಪಾಯಿಂಟ್!
ಈ ಹಿಂದೆ 2017 ಮತ್ತು 2018ರಲ್ಲಿ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆದಿತ್ತು. ತಾಂತ್ರಿಕ ತೊಂದರೆಯಿಂದ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಿಂದ ಯಾವುದೇ ಸ್ಪರ್ಧಿಗಳು ಬರಲಾಗದಿರುವುದು ಬೇಸರದ ಸಂಗತಿ. ಒಟ್ಟಿನಲ್ಲಿ ಕರಾವಳಿಯ ಪ್ರವಾಸೋದ್ಯಮದ ಬೆಳವಣಿಗೆಗೆ ಇಂತಹ ಸ್ಪರ್ಧೆ ನಿಜಕ್ಕೂ ಪೂರಕವಾಗಿದೆ. ಜಿಲ್ಲಾಡಳಿತ ಈ ಸ್ಪರ್ಧೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ.
Dakshina Kannada,Karnataka