Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Homeless Fear: ಕೆಲಸದಿಂದ ನಿವೃತ್ತಿಯಾಗುವ ಜೊತೆ ನಿವೇಶನವನ್ನೂ ತೊರೆಯಬೇಕು, ಸೂರು ಸಹ ಇರಲ್ಲ ಎನ್ನುವ ಆತಂಕ ಈ ಜನಕ್ಕೆ! | Sri Lankan Tamil refugees | ಮಂಗಳೂರು ನ್ಯೂಸ್ (Mangaluru News)

Last Updated:

ಶ್ರೀಲಂಕಾ ತಮಿಳು ನಿರಾಶ್ರಿತರು ದಕ್ಷಿಣ ಕನ್ನಡದಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗದಿಂದ ನಿವೃತ್ತಿಯಾಗುತ್ತಿದ್ದಂತೆ ಮನೆ ತೆರವುಗೊಳಿಸಬೇಕಾದ ಸ್ಥಿತಿ ಎದುರಾಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಶ್ರೀಲಂಕಾ (Sri Lanka), ತಮಿಳು (Tamil) ನಿರಾಶ್ರಿತರಾಗಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿಗಳಾಗಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಇದೀಗ ಮತ್ತೊಮ್ಮೆ ನಿರಾಶ್ರಿತರಾಗುವ ಭೀತಿಯ ನಡುವೆ ಬದುಕುತ್ತಿದೆ. ಕೆಲಸದಿಂದ (Job) ನಿವೃತ್ತಿ ಹಂತಕ್ಕೆ ಬಂದಿರುವ ಈ ಕುಟುಂಬದ ಸದಸ್ಯರು ಮನೆ ತೆರವುಗೊಳಿಸಿ ಹೊರ ಹೋಗಬೇಕಾದ ಸ್ಥಿತಿ ಎದುರಾಗಿದೆ. ಕಳೆದ ಹತ್ತು ವರ್ಷಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಈವರೆಗೂ ಇವರಿಗೆ ನಿವೇಶನ ಭಾಗ್ಯ ಸಿಕ್ಕಿಲ್ಲ.

ಕುಟುಂಬಗಳಿಗೆ ಆತಂಕ

ಪುತ್ತೂರು, ಸುಳ್ಯ ಹಾಗೂ ಕಡಬ ಭಾಗದಲ್ಲಿರುವ ಸರ್ಕಾರಿ ವ್ಯವಸ್ಥೆಯ ರಬ್ಬರ್ ಪ್ಲಾಂಟೇಶನ್ ಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗಿಗಳಾಗಿದ್ದು, ಉದ್ಯೋಗದಿಂದ ನಿವೃತ್ತರಾಗುತ್ತಲೇ ಇವರಿಗೆ ನೀಡಲಾದ ಸೂರುಗಳನ್ನು ಬಿಟ್ಟು ಬೀದಿ ಪಾಲಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಮಂದಿಗೆ ಸ್ಥಳೀಯ ನಿವೇಶನಗಳನ್ನು ನೀಡದಿರುವುದು ಈ ಕುಟುಂಬಗಳ ಆತಂಕವನ್ನ ಇನ್ನಷ್ಟು ಹೆಚ್ಚಿಸಿದೆ.

ಇವರು ಶ್ರೀಲಂಕಾ ನಿವಾಸಿಗಳು

1964 ಮತ್ತು 1974ರಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ನಡೆದ ಒಪ್ಪಂದದ ಹಿನ್ನೆಲೆಯಲ್ಲಿ ಒಂದು ಕಾಲದಲ್ಲಿ ಶ್ರೀಲಂಕಾ ನಿವಾಸಿಗಳಾಗಿದ್ದ, ಈ ಭಾರತದ ಮೂಲನಿವಾಸಿಗಳನ್ನು ಆಗಿನ ಪ್ರಧಾನಿ ಇಂದಿರಾಗಾಂಧಿ

ಭಾರತಕ್ಕೆ ಕರೆ ತಂದಿದ್ದರು. ಅವರಿಗಾಗಿಯೇ ಸರ್ಕಾರಿ ರಬ್ಬರ್ ಪ್ಲಾಂಟೇಶನ್ ಗಳನ್ನು ನಿರ್ಮಿಸಿ ಉದ್ಯೋಗ ಕೊಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಷ್ಟವೋ ಸುಖವೋ ಸರ್ಕಾರ ಕೊಟ್ಟ ಸೂರುಗಳಲ್ಲಿ ಈ ಕುಟುಂಬಗಳು ನಿರ್ಭೀತಿಯಿಂದ ಬದುಕುಕಟ್ಟಿಕೊಂಡಿದ್ದರು.

ಕರ್ತವ್ಯದಿಂದ ನಿವೃತ್ತಿಯಾಗುವ ಸಮಯ

1830ರಿಂದ 1930ರ ಅವಧಿಯಲ್ಲಿ ಶ್ರೀಲಂಕಾದಲ್ಲಿ ತಮ್ಮ ಎಸ್ಟೇಟುಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು ಮೂಲ ಭಾರತೀಯ ನಿವಾಸಿಗಳಾದ 8.25 ಲಕ್ಷ ಕಾರ್ಮಿಕರು ಬ್ರಿಟೀಷರ ಅಡಿಯಾಳುಗಳಾಗಿ ಭಾರತದಿಂದ ಶ್ರೀಲಂಕಾಕ್ಕೆ ರವಾನೆಯಾಗಿದ್ದರು. ಅಲ್ಲಿ ಉಂಟಾದ ಎಲ್‍ಟಿಟಿಇ ಮತ್ತು ಸಿಂಹಳೀಯರ ಕದನ ಬಳಿಕ ಸುಮಾರು 5. 25 ಲಕ್ಷದಷ್ಟು ಮಂದಿ ಮತ್ತೆ ಭಾರತದ ಆಶ್ರಿತರಾಗಿ ಬಂದಿದ್ದರು. ಹಾಗೇ ಬಂದ ಮಂದಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಈ ಸರ್ಕಾರಿ (ಕೆಆರ್‍ಡಿಸಿ) ರಬ್ಬರ್ ಪ್ಲಾಂಟೇಶನ್ ಗಳು ಹುಟ್ಟಿಕೊಂಡಿದ್ದವು. ಇದು ಈ ನಿರಾಶ್ರಿತರಿಗೆ ಬದುಕು ಕಟ್ಟಿಕೊಟ್ಟ ತಾಣಗಳಾಗಿತ್ತು. ಹೀಗೆ ರಬ್ಬರ್ ಟ್ಯಾಪಿಂಗ್ ಉದ್ಯೋಗಕ್ಕೆ ಸೇರಿದ ಬಹುತೇಕ ಮಂದಿ ಈಗ ಕರ್ತವ್ಯದಿಂದ ನಿವೃತ್ತರಾಗುತ್ತಿದ್ದಾರೆ.

ನಿವೇಶನವೂ ಇರಲ್ಲ

ನಿವೃತ್ತಿಯಾದ ತಕ್ಷಣವೇ ನಿವೇಶನವೂ ಇಲ್ಲದೆ ತಲೆಯ ಮೇಲೊಂದು ಸೂರು ಇಲ್ಲದೆ ಮತ್ತೆ ನಿರಾಶ್ರಿತರಾಗುವ ಭೀತಿ ಈ ಶ್ರೀಲಂಕಾ ತಮಿಳು ನಿರಾಶ್ರಿತರದ್ದಾಗಿದೆ. ಅಕ್ರಮವಾಸಿಗಳಿಗೆ ಸೂರು ಭಾಗ್ಯ ಕಲ್ಪಿಸುವ ಸರಕಾರಗಳು ಈ ನಿರಾಶ್ರಿತರ ಬಗ್ಗೆಯೂ ಕಾಳಜಿ ವಹಿಸಬೇಕಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಇದನ್ನೂ ಓದಿ: Arecanut: ಚಟವೇ ಚಟ್ಟಕ್ಕೆ ಕಾರಣ, ಈ ಸಾಲಿಗೆ ಅಡಿಕೆ ಸೇರಿಸಲು ಚಿಂತನೆ; ಬೆಳೆಗಾರರು ಕಂಗಾಲು!

ಕಡಬ ತಾಲೂಕಿನ ಐತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 500 ಕುಟುಂಬಗಳು ಈ ರಬ್ಬರ್ ಟ್ಯಾಪಿಂಗ್ ಉದ್ಯೋಗ ಮಾಡುತ್ತಿದ್ದಾರೆ. ಅದರಲ್ಲಿ ಈ ಬೆತ್ತೋಡಿ ಸಿಆರ್‍ಸಿ ಕಾಲೊನಿಯೂ ಒಂದಾಗಿದೆ. ಇದರಲ್ಲಿ ಸುಮಾರು 15 ಕುಟುಂಬಗಳು ವಾಸ ಮಾಡುತ್ತಿವೆ. 1972 ರಲ್ಲಿ ನಿರ್ಮಿಸಿ ಇವರಿಗೆ ನೀಡಲಾದ ಎಲ್ಲಾ ಮನೆಗಳು ಪ್ರಸ್ತುತ ದುರಸ್ಥಿಯಲ್ಲಿವೆ. ಮಳೆಗಾಲ ಬಂದಾಗ ಈ ಮನೆಗಳಲ್ಲಿ ವಾಸ ಮಾಡಲು ಸಾಧ್ಯವೇ ಇಲ್ಲ. ರಬ್ಬರ್ ಅಭಿವೃದ್ಧಿ ನಿಗಮದ ನಿಯಮ ಪ್ರಕಾರ ಉದ್ಯೋಗದಿಂದ ನಿವೃತ್ತಿ ಪಡೆಯುತ್ತಲೇ ಈ ಕುಟುಂಬಗಳು ಮನೆಯನ್ನು ತೊರೆಯಬೇಕು. ಆದರೆ ಮನೆ ತೊರೆದು ಎಲ್ಲಿಗೆ ಹೋಗುತ್ತೀರಿ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಐತ್ತೂರು ಗ್ರಾಪಂಗೆ ನಮಗೊಂದು ನಿವೇಶನ ಕೊಡಿ ಎಂದು ಸಿಆರ್‍ಸಿ ಕಾಲೊನಿಗಳ ಕುಟುಂಬಗಳು ಕಳೆದ 10 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. 5 ಸೆಂಟ್ಸ್ ಬೇಡ, ಕನಿಷ್ಟ 3 ಸೆಂಟ್ಸ್ ಆದರೂ ಕೊಡಿ ಎಂದು ಆಳವತ್ತುಕೊಂಡಿದ್ದಾರೆ. ಆದರೆ ಈ ಗ್ರಾಪಂ ಆಡಳಿತವಾಗಲೀ ಇಲ್ಲಿನ ಅಧಿಕಾರಿಗಳಾಗಲೀ ಈ ಬಗ್ಗೆ ಕ್ಯಾರೇ ಅಂದಿಲ್ಲ.