Last Updated:
ಮಂಗಳೂರು ವೈಟ್ ಡೌಸ್ ಸಂಸ್ಥೆ ಕೊರಿನಾ ರಸ್ಕಿನ್ ನೇತೃತ್ವದಲ್ಲಿ ಜಾರ್ಖಂಡ್ ಯುವತಿ ಕಿರಣ್ ಕುಮಾರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿ ಕುಟುಂಬಕ್ಕೆ ಸೇರಿಸಿದೆ.
ಮಂಗಳೂರು: ಹೆತ್ತವರ ವಿರಸ, ಆರ್ಥಿಕ ಸಂಕಷ್ಟ (Money Problem) ಮತ್ತು ಮಾನಸಿಕ ಒತ್ತಡದಿಂದ ಮನೆ ತೊರೆದು ನಾಪತ್ತೆಯಾಗಿದ್ದ ಜಾರ್ಖಂಡ್ 21 ವರ್ಷದ ಯುವತಿ ಕಿರಣ್ ಕುಮಾರಿಯನ್ನು ಮಂಗಳೂರಿನ ವೈಟ್ ಡೌಸ್ ರಕ್ಷಿಸಿ ಚಿಕಿತ್ಸೆ (Treatment) ನೀಡಿ, ಇದೀಗ ಕುಟುಂಬದೊಂದಿಗೆ ಸೇರಿಸಿದೆ.
2025ರ ನ.27ರಂದು ಕಿರಣ್ ಜಪ್ಪುವಿನ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥಳಾಗಿ ಪತ್ತೆಯಾಗಿದ್ದಳು. ಅಸಹಾಯಕ ಸ್ಥಿತಿಯಲ್ಲಿ ತಿರುಗಾಡುತ್ತಿದ್ದ ಆಕೆಯನ್ನು ವೈಟ್ ಡೌಸ್ ಸಂಸ್ಥಾಪಕಿ ಕೊರಿನಾ ರಸ್ಕಿನ್ ಅವರು ರಕ್ಷಿಸಿ ಸಂಸ್ಥೆಗೆ ಕರೆತಂದಿದ್ದಾರೆ. ಕಿರಣ್ ತನ್ನ ಹೆಸರನ್ನು ಹೇಳಿದ್ದರೂ, ತಾನು ಹೇಗೆ ಮಂಗಳೂರಿಗೆ ಬಂದೆ ಎಂಬುದು ಆಕೆಗೆ ತಿಳಿದಿರಲಿಲ್ಲ. ಪ್ರಾರಂಭದಲ್ಲಿ ಮಾತು ಕಡಿಮೆ, ಅತಿಯಾದ ಮೌನ ಹಾಗೂ ಭಯಭೀತ ಸ್ಥಿತಿಯಲ್ಲಿದ್ದಳು.
ವೈಟ್ಡೌಸ್ ಸಂಸ್ಥೆಯಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ ಮಾಡಲಾಯಿತು. ಜೊತೆಗೆ ಫಿಸಿಯೋ ಥೆರಪಿ, ಯೋಗ, ಮ್ಯೂಸಿಕ್ ಥೆರಪಿ ಮತ್ತು ಪ್ಲೇ ಥೆರಪಿ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲಾಯಿತು. ಇದರಿಂದ ನಿಧಾನವಾಗಿ ಆಕೆ ನಗಲು, ಮಾತನಾಡಲು ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದಳು.
ಕೇವಲ ಎರಡೇ ತಿಂಗಳಲ್ಲಿ ಚೇತರಿಕೆ ಕಂಡ ಹುಡುಗಿ
ಕೇವಲ ಎರಡು ತಿಂಗಳ ಆರೈಕೆಯಲ್ಲಿ ಚೇತರಿಸಿಕೊಂಡಿದ್ದಳು. ಈ ಮಧ್ಯೆ ಆಕೆ ನೀಡಿದ ಮನೆಯವರ ಫೋನ್ ನಂಬರ್ನಿಂದ ಕುಟುಂಬವನ್ನು ಪತ್ತೆ ಹಚ್ಚುವ ಪ್ರಕ್ರಿಯೆ ಆರಂಭವಾಯಿತು. ಈ ಮೂಲಕ ಆಕೆಯ ತಂದೆ ಸಂಪರ್ಕಕ್ಕೆ ಸಿಕ್ಕರು. ಶನಿವಾರ ತಂದೆ ಮೋತಿರಾಮ್ ಅವರು ಜಾರ್ಖಾಂಡ್ನಿಂದ ವೈಟ್ಡೌಸ್ಗೆ ಆಗಮಿಸಿದ್ದಾರೆ. ಆಕೆ ಇಂದೇ ತಂದೆಯೊಂದಿಗೆ ಜಾರ್ಖಂಡ್ಗೆ ಪ್ರಯಾಣಿಸಿದ್ದಾಳೆ. ಆಕೆಯ ಮುಂದಿನ ಜೀವನ ಸುಖ, ಸಂತೋಷದಿಂದ ಕೂಡಿರಲಿ ಎಂಬುದೇ ನಮ್ಮ ಆಶಯ.
Dakshina Kannada,Karnataka