Last Updated:
ಲಕ್ನೋ ಸೂಪರ್ ಜೈಂಟ್ಸ್ 2025ರ ಐಪಿಎಲ್ 16ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಚಕ ಜಯ ಸಾಧಿಸಿದೆ. 204 ರನ್ ಗುರಿ ಬೆನ್ನಟ್ಟಿದ ಮುಂಬೈ 191 ರನ್ಗಳಿಗೆ ಸೀಮಿತವಾಯಿತು.
ಐಪಿಎಲ್ 2025ರ 16 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 12 ರನ್‌ಗಳ ರೋಚಕ ಜಯ ಸಾಧಿಸಿದೆ. ಶುಕ್ರವಾರ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. 204ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 191 ರನ್ಗಳಿಸಲಷ್ಟೆ ಶಕ್ತವಾಗಿ 12 ರನ್‌ಗಳ ಸೋಲು ಕಂಡಿತು.
204 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಎರಡನೇ ಓವರ್‌ನಲ್ಲೇ ಮೊದಲ ಹಿನ್ನಡೆಯಾಯಿತು. ವಿಲ್ ಜ್ಯಾಕ್ಸ್ 7 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಿಯಾನ್ ರಿಕಲ್ಟನ್ ಕೂಡ 5 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ನಮನ್ ಮತ್ತು ಸೂರ್ಯಕುಮಾರ್ ನಡುವೆ ಮೂರನೇ ವಿಕೆಟ್‌ಗೆ 35 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದರು. ನಮನ್ ಧೀರ್ 24 ಎಸೆತಗಳಲ್ಲಿ 46 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 67 ರನ್ ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು.
ಪಂದ್ಯ ಪೂರ್ತಿ ಕ್ರೀಸ್ನಲ್ಲಿದ್ದ ತಿಲಕ್ ವರ್ಮಾ 23 ಎಸೆತಗಳಲ್ಲಿ 2 ಬೌಂಡರಿ ಸಹಿತ ಕೇವಲ 25 ರನ್ ಗಳಿಸಿ ರಿಟೈರ್ಡ್ ಔಟ್ ಆದರು. ನಾಯಕ ಹಾರ್ದಿಕ್ ಪಾಂಡ್ಯ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 28 ರನ್ಗಳಿಸಿದರಾದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾನ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 76 ರನ್‌ಗಳ ಪಾಲುದಾರಿಕೆ ಇತ್ತು. ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 60 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಒಂಬತ್ತು ಬೌಂಡರಿಗಳಿದ್ದವು. ನಿಕೋಲಸ್ ಪೂರನ್ 6 ಎಸೆತಗಳಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ನಾಯಕ ರಿಷಭ್ ಪಂತ್ 6 ಎಸೆತಗಳಲ್ಲಿ ಎರಡು ರನ್ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು.
April 04, 2025 11:34 PM IST