SRH vs GT: ಸಿರಾಜ್​, ಪ್ರಸಿಧ್ ದಾಳಿಗೆ ತವರಲ್ಲೇ ಧೂಳೀಪಟವಾದ ಹೈದರಾಬಾದ್! 300 ಹೊಡಿತೀವಿ ಅಂತಾ ಬಂದವ್ರೂ 152 ಠುಸ್​

SRH vs GT: ಸಿರಾಜ್​, ಪ್ರಸಿಧ್ ದಾಳಿಗೆ ತವರಲ್ಲೇ ಧೂಳೀಪಟವಾದ ಹೈದರಾಬಾದ್! 300 ಹೊಡಿತೀವಿ ಅಂತಾ ಬಂದವ್ರೂ 152 ಠುಸ್​

Last Updated:

ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ಟೈಟಾನ್ಸ್ ವಿರುದ್ಧ 152 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಮಿಂಚಿದರು.

ಮೊಹಮ್ಮದ್ ಸಿರಾಜ್ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

IPL 2025ರ 19ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ಟೈಟಾನ್ಸ್ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ಸನ್​ರೈಸರ್ಸ್ ಹೈದರಾಬಾದ್ ತಂಡ ಮತ್ತೆ ತನ್ನ ನೀರಸ ಪ್ರದರ್ಶನವನ್ನು ಮುಂದುವರಿಸಿದೆ. ಗುಜರಾತ್ ಬೌಲರ್​ಗಳ ದಾಳಿಗೆ ಉತ್ತರಿಸಲಾಗದೇ ಕಮಿನ್ಸ್ ಪಡೆಯ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 152 ರನ್​ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಲು ಬಂದ ಹೈದರಾಬಾದ್​ಗೆ ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲೇ ಮೊದಲ ಹೊಡೆತ ನೀಡಿದರು. ಸಿರಾಜ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್(8) ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಮೊದಲ ಬ್ರೇಕ್ ನೀಡಿದರು. ಹೆಡ್ 5 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದು ಅವರ ಸತತ 3ನೇ ವೈಫಲ್ಯವಾಗಿದೆ. ನಂತರ ಮತ್ತೊಬ್ಬ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 14 ಎಸೆತಗಳಲ್ಲಿ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಪವರ್ ಪ್ಲೇನಲ್ಲೇ ಬ್ಯಾಟಿಂಗ್​​ಗೆ ಬಂದ ನಿತೀಶ್ ಕುಮಾರ್ ನಿಧಾನಗತಿ ಬ್ಯಾಟಿಂಗ್​​ಗೆ ಮೊರೆ ಹೋದರು. ಅವರು 4ನೇ ವಿಕೆಟ್ ಜೊತೆಯಾಟದಲ್ಲಿ ಹೆನ್ರಿಕ್ ಕ್ಲಾಸೆನ್ ಜೊತೆಗೆ 50 ರನ್‌ಗಳ ಜೊತೆಯಾಟ ನಡೆಸಿದರು. ಕ್ಲಾಸೆನ್ 19 ಎಸೆತಗಳಲ್ಲಿ 27 ರನ್ ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು, ಇವರ ವಿಕೆಟ್ ಬೆನ್ನಲ್ಲೇ ಮತ್ತೆ ಹೈದರಾಬಾದ್ ಕುಸಿತ ಅನುಭವಿಸಿತು.

ನಿತೀಶ್ ಕುಮಾರ್ 34 ಎಸೆತಗಳಲ್ಲಿ 3 ಬೌಂಡರಿ ಸಹಿತ 31 ರನ್​ಗಳಿಸಿದರೆ, ಕಮಿಂಡು ಮೆಂಡಿಸ್ 5 ಎಸೆತಗಳಲ್ಲಿ ಕೇವಲ 1 ರನ್​ಗಳಿಸಿ ಔಟ್ ಆದರು. ಯುವ ಬ್ಯಾಟರ್ ಅನಿಕೇತ್ ವರ್ಮಾ ಆಟ ಕೇವಲ 18ರನ್​ಗಳಿಗೆ ಸೀಮಿತವಾಯಿತು. ಕಮಿನ್ಸ್ ಅಜೇಯ 22 ರನ್​ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್ 17ಕ್ಕೆ4 ವಿಕೆಟ್ ಪಡೆದು ಮಿಂಚಿದರೆ, ಪ್ರಸಿಧ್ ಕೃಷ್ಣ 25ಕ್ಕೆ 2, ಸಾಯಿ ಕಿಶೋರ್ 24ಕ್ಕೆ 2 ವಿಕೆಟ್ ಪಡೆದು ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.