Last Updated:
ಕನ್ನಡ ನಟ ದರ್ಶನ್ ತಮ್ಮ ಕುಟುಂಬದೊಂದಿಗೆ ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಶತ್ರು ಸಂಹಾರ ಪೂಜೆ ನೆರವೇರಿಸಿದರು. ಈ ಭೇಟಿಯ ನಂತರ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಮಂಗಳೂರು: ಕೇರಳದ (Kerala) ಕಣ್ಣೂರು ಜಿಲ್ಲೆಯ ಮಾಡಾಯಿಕಾವು ಶ್ರೀ ತಿರುವರ್ ಕಾಟ್ ಕಾವು ಭಗವತಿ ದೇವಸ್ಥಾನಕ್ಕೆ (Madaikavu Sri Thiruvar Katkavu Bhagavathy Temple) ಇತ್ತೀಚೆಗೆ ಕನ್ನಡ ಚಿತ್ರರಂಗದ (Kannada Cinema) ಖ್ಯಾತ ನಟ ದರ್ಶನ್ (Actor Darshan) ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿದ್ದರು. ಈ ಭೇಟಿಯ ಸುದ್ದಿ ಹರಡಿದ ಬಳಿಕ ದೇವಸ್ಥಾನದ ಕಡೆಗೆ ರಾಜ್ಯದ ಭಕ್ತರ ದಂಡು ಹರಿದು ಬರುತ್ತಿದೆ. ದರ್ಶನ್ ಜೊತೆಗೆ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi), ಮಗ ಹಾಗೂ ನಟ ಧನ್ವೀರ್ ಕೂಡ ದೇವಸ್ಥಾನಕ್ಕೆ ಆಗಮಿಸಿದ್ದರು. ಈ ವೇಳೆ ದರ್ಶನ್ ಶತ್ರು ಸಂಹಾರ ಪೂಜೆಯನ್ನು ನೆರವೇರಿಸಿದ್ದರು ಎನ್ನಲಾಗಿದೆ. ಈ ಸುದ್ದಿ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಭಕ್ತರಲ್ಲಿ ಕೂಡ ಕುತೂಹಲ ಮೂಡಿಸಿದೆ.
ಮಾಡಾಯಿಕಾವು ದೇವಸ್ಥಾನ ಶತ್ರು ಸಂಹಾರ ಪೂಜೆಗೆ ದೇಶದಾದ್ಯಂತ ಪ್ರಸಿದ್ಧವಾಗಿದೆ. ಇದುವರೆಗೆ ಕೇರಳದ ವಿವಿಧ ಭಾಗಗಳು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ, ದರ್ಶನ್ ಭೇಟಿಯ ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಈಗ ಜಾತ್ರಾ ಉತ್ಸವ ನಡೆಯುತ್ತಿದ್ದು, ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಶತ್ರು ಸಂಹಾರ ಪೂಜೆ ವಿಶೇಷವಾಗಿದ್ದು, ಈ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯದ ಒಳಭಾಗಕ್ಕೆ ಪ್ರವೇಶವಿರುವುದಿಲ್ಲ. ಭಗವತಿ ದೇವಿಯ ಎದುರು ಭಕ್ತರ ಜನ್ಮ ನಕ್ಷತ್ರ ಮತ್ತು ಹೆಸರು ಹೇಳಿ ಅರ್ಚನೆ ಮಾಡಲಾಗುತ್ತದೆ. ಪೂಜೆಯ ಪ್ರಸಾದವಾಗಿ ಕೋಳಿ ಖಾದ್ಯ ನೀಡಲಾಗುತ್ತದೆ. ಭಗವತಿಯ ಭಸ್ಮ ಪ್ರಸಾದವನ್ನು ಭಕ್ತರು ಶ್ರದ್ಧೆಯಿಂದ ಸ್ವೀಕರಿಸುತ್ತಾರೆ, ಇದನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ರಾತ್ರಿ 8 ಗಂಟೆಯ ನಂತರ ದೇವಸ್ಥಾನಕ್ಕೆ ಯಾರಿಗೂ ಪ್ರವೇಶವಿಲ್ಲ ಎಂಬ ನಿಯಮವೂ ಇದೆ.
ಇದನ್ನೂ ಓದಿ: Bengaluru 2nd Airport: ಬೆಂಗಳೂರಿನ 2ನೇ ವಿಮಾನ ಶಿರಾದಲ್ಲಿ ನಿರ್ಮಾಣಕ್ಕೆ ಒತ್ತಾಯ; ಸಿಎಂ ಸಿದ್ದುಗೆ 30ಕ್ಕೂ ಹೆಚ್ಚು ಶಾಸಕರ ಪತ್ರ
ದರ್ಶನ್ ಭೇಟಿಯಿಂದ ಈ ದೇವಸ್ಥಾನದ ಮಹತ್ವ ರಾಜ್ಯದಾದ್ಯಂತ ಹರಡಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಘಟನೆಯಿಂದ ಮಾಡಾಯಿಕಾವು ಕ್ಷೇತ್ರಕ್ಕೆ ಹೊಸ ಗುರುತು ದೊರೆತಂತಾಗಿದೆ.
Dakshina Kannada,Karnataka
April 09, 2025 5:46 PM IST