ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಇಂಗ್ಲೆಂಡ್ನಲ್ಲಿ ನಡೆಯುವ ಐದು ಟೆಸ್ಟ್ ಪಂದ್ಯಗಳಿಗೆ ಜಸ್ಪ್ರಿತ್ ಬುಮ್ರಾ ಲಭ್ಯವಿರುವುದಿಲ್ಲ. ಈ ಕಾರಣಕ್ಕಾಗಿಯೇ ಅವರು ಟೆಸ್ಟ್ ನಾಯಕತ್ವದ ರೇಸ್ನಿಂದ ಹೊರಗುಳಿದಿದ್ದಾರೆ ಅಗರ್ಕರ್ ಅವರು ಹೇಳಿದ್ದಾರೆ.
ಫಿಟ್ನೆಸ್ ಕಾರಣಕ್ಕೆ ಅವರನ್ನು ನಾಯಕತ್ವದಿಂದ ದೂರ ಇಡಲಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಗರ್ಕರ್, “ಬುಮ್ರಾ ಒಬ್ಬ ಅದ್ಭುತ ಆಟಗಾರ ಮಾತ್ರವಲ್ಲ, ಅವರು ನಾಯಕ ಕೂಡ. ಅವರು ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಉಪನಾಯಕನಾಗಿ ಹಾಗೂ ನಾಯಕನಾಗಿಯೂ ಮುನ್ನಡೆಸಿದ್ದಾರೆ. ಆದ್ರೆ, ಓರ್ವ ನಾಯಕನಾಗಿ ಅಥವಾ ಉಪನಾಯಕನಾಗಿ ಎಲ್ಲಾ ಟೆಸ್ಟ್ ಪಂದ್ಯಗಳಿಗೆ ಲಭ್ಯವಿರುವುದು ಮುಖ್ಯ. ಅವರು ನಾಯಕತ್ವಕ್ಕಿಂತ ಓರ್ವ ಆಟಗಾರನಾಗಿ ನಮಗೆ ಅತ್ಯಂತ ಮುಖ್ಯ ಎಂದು ನಾನು ಭಾವಿಸುತ್ತೇನೆ. ಅವರು ಹೆಚ್ಚು ಫಿಟ್ ಆಗಿರಲು ಬಯಸುತ್ತೇವೆ. ತಂಡವನ್ನು ಮುನ್ನಡೆಸುವಾಗ 15 ರಿಂದ 16 ಜನರನ್ನು ನಿಭಾಯಿಸಬೇಕು ಇದು ಸವಾಲಿನ ಕೆಲಸ, ಬುಮ್ರಾ ಫಿಟ್ ಆಗಿಲ್ಲದೆ ಇರವುದರಿಂದ ಅವರನ್ನು ನಾಯಕತ್ವದಿಂದ ದೂರ ಇಡಲಾಗಿದೆ ಎಂದು ಸ್ಪಷ್ಟಪಡಿಸಿದರು”.
ಮುಂದುವರೆದು ಮಾತನಾಡಿದ ಅವರು, “ಬುಮ್ರಾ ಅವರ ಮೇಲೆ ಹೆಚ್ಚು ಹೊರೆ ಹಾಕುವ ಬದಲು, ಅವರು ಚೆನ್ನಾಗಿ ಬೌಲಿಂಗ್ ಮಾಡುವುದನ್ನು ನಾವು ಬಯಸುತ್ತೇವೆ. ಅವರಿಗೆ ಅದರ ಬಗ್ಗೆ ಅರಿವಿದೆ ಮತ್ತು ಅವರು ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ ಮತ್ತು ಫಿಟ್ ಆಗಿ ಬೌಲಿಂಗ್ ಮಾಡುತ್ತಾರೆ” ಎಂದು ಅಗರ್ಕರ್ ಹೇಳಿದರು.
ಬುಮ್ರಾ 2023 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಮಾತ್ರವಲ್ಲ, ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಮತ್ತು ಅಂತಿಮ ಪಂದ್ಯಗಳಲ್ಲಿ ಕೂಡ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ವೇಗದ ಬೌಲರ್ ತಮ್ಮ ನಾಯಕತ್ವ ಕೌಶಲ್ಯದಿಂದ ಅನೇಕರನ್ನು ಮೆಚ್ಚಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ
ಇದೇ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ನ ಎಲ್ಲಾ ಸ್ವರೂಪಕ್ಕೆ ವಿದಾಯ ಹೇಳಿದ ನಂತರ, ಭಾರತೀಯ ತಂಡದಲ್ಲಿ ಹಲವಾರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಕರುಣ್ ನಾಯರ್, ಸಾಯಿ ಸುದರ್ಶನ್ಗೆ ಅವಕಾಶ
ಗುಜರಾತ್ ಟೈಟಾನ್ಸ್ ತಂಡದ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಐಪಿಎಲ್ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಅವರನ್ನು ಕೂಡ ತಂಡಕ್ಕೆ ಆಯ್ಕೆ ಮಾಡಲಾಗಿದೆ. ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಕರುಣ್ ನಾಯರ್ ಅಂತಿಮವಾಗಿ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿದ್ದು, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಠಾಕೂರ್ ಭಾರತ ತಂಡಕ್ಕೆ ಮರಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ:
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೀ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ದೀಪ್, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.