ಇನ್ನೂ ಇದೇ ತಿಂಗಳ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕಳೆದ ವರ್ಷ ಕೊನೆಯಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕೆಲವು ಹಿರಿಯ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ನಿರೀಕ್ಷೆ ಕೊನೆಗೂ ಹುಸಿಯಾಗಿದ್ದು, ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ ಹಾಗೂ ಮೊಹಮ್ಮದ್ ಶಮಿ ಅಂತಹ ಅನುಭವಿ ಆಟಗಾರರನ್ನು ಇಂಗ್ಲೆಂಡ್ ಸರಣಿಗೆ ನಿರ್ಲಕ್ಷಿಸಲಾಗಿದೆ.
ಶಮಿಗೆ ಕೋಕ್:
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ವೇಗಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಿಲ್ಲ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು, ಟೆಸ್ಟ್ ಮಾದರಿಲ್ಲಿ ಅಧಿಕ ಓವರ್ ಬೌಲಿಂಗ್ ಮಾಡುವುದಕ್ಕೆ ಮೊಹಮ್ಮದ್ ಶಮಿ ಹೊಂದಿಕೊಳ್ಳುವುದು ಕಷ್ಟ ಎಂದು ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ವೈದ್ಯಕೀಯ ಸಮಿತಿ ಆಯ್ಕೆ ಸಮಿತಿಗೆ ಮಾಹಿತಿ ನೀಡಿತ್ತು. ಮೊಹಮ್ಮದ್ ಶಮಿ ಫಿಟ್ ಆಗಿಲ್ಲ ಮತ್ತು ಟೆಸ್ಟ್ ಕ್ರಿಕೆಟ್‌ನ ಕೆಲಸದ ಹೊರೆಯನ್ನು ಈಗ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 34 ವರ್ಷದ ಶಮಿ ಅವರು, ಇದುವರೆಗೂ 64 ಪಂದ್ಯಗಳ 122 ಇನ್ನಿಂಗ್ಸ್‌ಗಳಲ್ಲಿ ಟೀಂ ಇಂಡಿಯಾ ಪರ ಆಡಿದ್ದು ಇದರಲ್ಲಿ 229 ವಿಕೆಟ್ ಪಡೆದು ಮಿಂಚಿದ್ದಾರೆ.
ಇನ್‌ಫಾರ್ಮ್ ರಹಾನೆಗೂ ಇಲ್ಲ ಅವಕಾಶ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ 36 ವರ್ಷದ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಮುಂಬೈ ಮೂಲದ ಅಜಿಂಕ್ಯಾ ರಹಾನೆ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಅದಕ್ಕೆ ಕಾರಣ ಅವರ ಇತ್ತೀಚಿನ ಪ್ರದರ್ಶನ. ಆದ್ರೆ, ಸದ್ಯ ಆಯ್ಕೆ ಮಾಡಿರುವ ತಂಡದಲ್ಲಿ ಅವರನ್ನು ಕಡೆಗಣಿಸಲಾಗಿದ್ದು, ಅವರ ಅಭಿಮಾನಿಗಳಲ್ಲಿ ಕೂಡ ಬೇಸರ ತರಿಸಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅಜಿಂಕ್ಯಾ ರಹಾನೆ ಅವರ ಪ್ರದರ್ಶನ ನೋಡುವುದಾದ್ರೆ, ಇದುವರೆಗೂ ಅವರು 85 ಪಂದ್ಯಗಳ 144 ಇನ್ನಿಂಗ್ಸ್‌ಗಳಲ್ಲಿ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿದ್ದು, ಇದರಲ್ಲಿ 39ರ ಸರಾಸರಿಯಲ್ಲಿ 5077 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕ ಮತ್ತು 26 ಅರ್ಧಶತಕಗಳು ಕೂಡ ಸೇರಿವೆ.
ಚೇತೇಶ್ವರ ಪೂಜಾರ ಕಡೆಗಣನೆ
ಭಾರತದ ಹೊಸ ಟೆಸ್ಟ್ ತಂಡದಲ್ಲಿ ಚೇತೇಶ್ವರ ಪೂಜಾರ ಅವರ ಹೆಸರು ಕೂಡ ಕಂಡು ಬಂದಿಲ್ಲ. ಅವರು ಜೂನ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಓವಲ್ ಟೆಸ್ಟ್ ಪಂದ್ಯದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಆ ಪಂದ್ಯದಲ್ಲಿ, ಪೂಜಾರ ಎರಡೂ ಇನ್ನಿಂಗ್ಸ್‌ಗಳಲ್ಲಿ ಸೇರಿ 41 ರನ್ ಗಳಿಸಿದ್ದರು. ಈ ಪಂದ್ಯದ ನಂತರ, ಪೂಜಾರ ಸುಮಾರು ಎರಡು ವರ್ಷಗಳ ಕಾಲ ಭಾರತೀಯ ಟೆಸ್ಟ್ ತಂಡದಿಂದ ಹೊರಗಿದ್ದಾರೆ. ಇದನ್ನು ಗಮನಿಸಿದರೆ ಅವರ ಟೆಸ್ಟ್ ಕರಿಯರ್ ಕೂಡ ಬಹುತೇಕ ಅಂತ್ಯಗೊಂಡಂತೆ ಎನ್ನಲಾಗಿದೆ.
ಪೂಜಾರ ಟೆಸ್ಟ್ ರೆಕಾರ್ಡ್: ಟೀಂ ಇಂಡಿಯಾದಲ್ಲಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ರಂತಹ ಸ್ಟಾರ್ ಟೆಸ್ಟ್ ಪ್ಲೇಯರ್‌ಗಳು ನಿವೃತ್ತಿ ಹೊಂದಿದ ಬಳಿಕ ಟೀಂ ಇಂಡಿಯಾದ ಪರ ಟೆಸ್ಟ್‌ನಲ್ಲಿ ಭರವಸೆ ಮೂಡಿಸಿದ ಆಟಗಾರ ಅಂದ್ರೆ ಅದು ಚೇತೇಶ್ವರ ಪೂಜಾರ. ಅವರು ಇದುವರೆಗೂ 103 ಟೆಸ್ಟ್ ಪಂದ್ಯಗಳ 176 ಇನ್ನಿಂಗ್ಸ್‌ಗಳಲ್ಲಿ 44ರ ಸರಾಸರಿಯಲ್ಲಿ 7195 ರನ್ ಕಲೆಹಾಕಿದ್ದಾರೆ. ಇದರಲ್ಲಿ 19 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ.
ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ ( ಉಪನಾಯಕ), ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಕರುಣ್ ನಾಯರ್, ಶಾರ್ದೂಲ್ ಠಾಕೂರ್, ಪ್ರಸಿದ್ಧ್ ಕೃಷ್ಣ, ಆಕಾಶದೀಪ್, ಅರ್ಶ್‌ದೀಪ್, ಆಕಾಶದೀಪ್, ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.