ಅಯೋಧ್ಯೆಯಲ್ಲಿ ಹಣದ ಹೊಳೆ; ಶ್ರೀರಾಮ ಜನ್ಮಭೂಮಿ ಟ್ರಸ್ಟ್ನಿಂದ ಬರೋಬ್ಬರಿ 400 ಕೋಟಿ ರೂ. ತೆರಿಗೆ ಪಾವತಿ – UP RAM TEMPLE
ಶ್ರೀರಾಮ ಮಂದಿರವಿರುವ ಅಯೋಧ್ಯೆಯಿಂದ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಹರಿದುಬಂದಿದೆ. ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ.
UP Ram temple
ಅಯೋಧ್ಯೆ (ಉತ್ತರ ಪ್ರದೇಶ): ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಚ್ಚಿನ ತೆರಿಗೆ ಕಟ್ಟುವ ಮೂಲಕ ಸುದ್ದಿಯಾಗಿದೆ. ಕಳೆದ ಐದು ವರ್ಷಗಳಲ್ಲಿ 400 ಕೋಟಿ ರೂಪಾಯಿ ಟ್ಯಾಕ್ಸ್ ಅನ್ನು ಟ್ರಸ್ಟ್ ಕಟ್ಟಿದೆ. ಇದು ಧಾರ್ಮಿಕ ಕ್ಷೇತ್ರದಲ್ಲಿನ ಪ್ರವಾಸೋದ್ಯಮಕ್ಕೆ ಸಾಕ್ಷಿಯಾಗಿದೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರೈ ಭಾನುವಾರ ತಿಳಿಸಿದ್ದಾರೆ.
ಇದು ಫೆಬ್ರವರಿ 5, 2020 ರಿಂದ ಫೆಬ್ರವರಿ 5, 2025 ರ ಅವಧಿಯಲ್ಲಿ ಕಟ್ಟಲಾದ ಒಟ್ಟು ತೆರಿಗೆ ಮೊತ್ತ ಎಂದು ಅವರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಸರಕು ಮತ್ತು ಸೇವಾ ತೆರಿಗೆಯಾಗಿ 270 ಕೋಟಿ ರೂಪಾಯಿ ಮತ್ತು ಇನ್ನುಳಿದ 130 ಕೋಟಿ ರೂಪಾಯಿ ಇತರೆ ತೆರಿಗೆಗಳಿಂದ ಸಂಗ್ರಹವಾಗಿದೆ ಎಂದು ಹೇಳಿದರು.
ಮಹಾಕುಂಭದ ವೇಳೆ ಭಾರಿ ಜನಸ್ತೋಮ : 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳ ಇತ್ತೀಚಿಗೆ ಪ್ರಯಾಗ್ರಾಜ್ನಲ್ಲಿ ಜರುಗಿತ್ತು. ಇದರಲ್ಲಿ ನಿರೀಕ್ಷೆಗೂ ಮೀರಿ ಜನರು ಭಾಗಿಯಾದರು. ಮಹಾಕುಂಭ ಮೇಳದ ಸಂದರ್ಭದಲ್ಲಿ ಅಯೋಧ್ಯೆಗೆ 1.26 ಕೋಟಿ ಭಕ್ತರು ಆಗಮಿಸಿದ್ದರು. ಇದು ಭಕ್ತರು, ಪ್ರವಾಸಿಗರಿಗೆ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸಹ ದೊರೆತಿವೆ ಎಂದರು.
2024ರಲ್ಲಿ ಅಯೋಧ್ಯೆಗೆ 16 ಕೋಟಿ ಜನರು ಭೇಟಿ ನೀಡಿದ್ದು, ಈ ಪೈಕಿ 5 ಕೋಟಿ ಜನರು ಶ್ರೀರಾಮ ಮಂದಿರ ದರ್ಶನ ಪಡೆದಿದ್ದಾರೆ.
ಈ ಎಲ್ಲಾ ಹಣಕಾಸಿನ ವಹಿವಾಟಿನ ಬಗ್ಗೆ ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ಅಧಿಕಾರಿಗಳು ಲೆಕ್ಕ ಪರಿಶೋಧನೆ ನಡೆಸುತ್ತಾರೆ ಎಂದು ರೈ ವಿವರಿಸಿದರು.
ಕಳೆದ ವರ್ಷ ಜನವರಿ 22 ರಂದು ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಅದ್ಧೂರಿಯಾಗಿ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಕೇಂದ್ರ ಸಚಿವರು, ಧಾರ್ಮಿಕ ಮುಖಂಡರು, ಸೆಲೆಬ್ರಿಟಿಗಳು, ಗಣ್ಯರು ಸಾಕ್ಷಿಯಾಗಿದ್ದರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಶ್ರೀ ಬಾಲರಾಮನ ಸುಂದರ ಮೂರ್ತಿ ಕೆತ್ತನೆ ಮೂಲಕ ದೇಶದ ಗಮನ ಸೆಳೆದರು.