Last Updated:
ರಥೋತ್ಸವದ ವೇಳೆ ದೇವರಿಗಿಂತಲೂ ಮುಂದೆ ಕುದುರೆ ಏರಿ ಸ್ವಾಮೀಜಿಯೊಬ್ಬರು ಸಂಚರಿಸುವುದು, ದೇವರನ್ನೇ ‘ಆವೋ ಬೇಟಾ’ ಎಂದು ಸಂಭೋದಿಸುವುದು ಕದ್ರಿ ದೇವಸ್ಥಾನದ ಹೊರತು ಬೇರೆಲ್ಲೂ ಇಲ್ಲ.
ಮಂಗಳೂರು: ಬಿಳಿಯ ಕುದುರೆ (White Horse) ಏರಿದ ಸ್ವಾಮೀಜಿ ಮೂರು ಬಾರಿ ‘ಆವೋ ಬೇಟಾ ಮಂಜುನಾಥ’ ಎನ್ನುತ್ತಿದ್ದಂತೆ ರಥ ಮುಂದೆ ಬರುತ್ತದೆ. ಸ್ವಾಮೀಜಿ ಕುದುರೆ ಏರಿ ಮುಂದೆ ಮುಂದೆ ಹೋಗುತ್ತಿದ್ದಂತೆ, ರಥ (Chariot) ಅವರ ಹಿಂದೆ ಹಿಂದೆ ಬರುತ್ತದೆ. ಈ ಅಚ್ಚರಿಯ ದೃಶ್ಯಗಳು ಕಂಡು ಬಂದಿದ್ದು ಕದ್ರಿ (Kadri Temple) ರಥೋತ್ಸವದಲ್ಲಿ. ಏನಿದರ ವಿಶೇಷತೆ ಅಂತ ನೀವು ತಿಳಿದುಕೊಳ್ಳಬೇಕು ಎಂದರೆ ಈ ಸ್ಟೋರಿ ನೋಡಿ.
ಸ್ವಾಮೀಜಿಯವರು ಬಾರದೆ ರಥೋತ್ಸವ ನಡೆಯುವುದಿಲ್ಲ
ಹೌದು, ಇದು ಮಂಗಳೂರಿನ ಇತಿಹಾಸ ಪ್ರಸಿದ್ಧ ದೇವಾಲಯ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ರಥೋತ್ಸವದ ವಿಶೇಷ. ಇಲ್ಲಿ ಕದ್ರಿ ಯೋಗೀಶ್ವರ ಮಠದ ಸ್ವಾಮೀಜಿಯವರು ಬಾರದೆ ರಥೋತ್ಸವ ನಡೆಯುವುದಿಲ್ಲ. ಮಂಗಳವಾರ ಸಂಜೆ ಕದ್ರಿ ದೇವಸ್ಥಾನದ ಮಹಾರಥೋತ್ಸವ ನೆರವೇರಿತು.
ಸಂಜೆಯಾಗುತ್ತಿದ್ದಂತೆ ಕದ್ರಿ ಯೋಗಿಮಠದಿಂದ ಯೋಗಿ ಶ್ರೀ ನಿರ್ಮಲಾನಾಥ ಮಹಾರಾಜರು ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆದರು. ಬಳಿಕ ರಥಕ್ಕೆ ಒಂದು ಸುತ್ತು ಹಾಕಿದ ಅವರು, ತೆಂಗಿನಕಾಯಿ ಒಡೆದು ಕುದುರೆ ಏರಿ ‘ಆವೋ ಬೇಟ ಮಂಜುನಾಥ’ ಅನ್ನುತ್ತಿದ್ದಂತೆ ಭಕ್ತರೆಲ್ಲರೂ ರಥವನ್ನು ಎಳೆದು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬರಲಾಯಿತು.
ಇದನ್ನೂ ಓದಿ: Belagavi: ಗಜಗಾತ್ರದ ಎತ್ತು ನೋಡಲು ಟಿಕೆಟ್ ಕಡ್ಡಾಯ; ಬರೋಬ್ಬರಿ ಒಂದೂವರೆ ಟನ್ ತೂಕದ ಗೂಳಿ
ಸ್ವಾಮೀಜಿ ಕುದುರೆ ಏರಿ ಸಂಚಾರ
ರಥೋತ್ಸವದ ವೇಳೆ ದೇವರಿಗಿಂತಲೂ ಮುಂದೆ ಕುದುರೆ ಏರಿ ಸ್ವಾಮೀಜಿಯೊಬ್ಬರು ಸಂಚರಿಸುವುದು, ದೇವರನ್ನೇ ‘ಆವೋ ಬೇಟಾ’ ಎಂದು ಸಂಭೋದಿಸುವುದು ಕದ್ರಿ ದೇವಸ್ಥಾನದ ಹೊರತು ಬೇರೆಲ್ಲೂ ಇಲ್ಲ. ಇದೇ ಇಲ್ಲಿನ ರಥೋತ್ಸವದ ವಿಶೇಷ. ಸ್ವಾಮೀಜಿ ಕುದುರೆ ಏರಿ ಸಂಚಾರ ನಡೆಸುವುದನ್ನು ನೋಡುವುದೇ ಚಂದ. ರಥೋತ್ಸವದ ವೇಳೆ ಹರಹರ ಮಹಾದೇವ ಎಂಬ ಉದ್ಘಾರ ಕೇಳಿ ಬಂತು. ಈ ದೃಶ್ಯ ವೈಭವವನ್ನು ಕಾಣಲೆಂದೇ ದೇವಸ್ಥಾನದ ಸುತ್ತಲೂ ಸಾಕಷ್ಟು ಮಂದಿ ಭಕ್ತರು ಜಮಾಯಿಸಿದ್ದರು. ಭಕ್ತಗಡಣದ ನಡುವೆ ಕದ್ರಿ ಮಂಜುನಾಥನ ರಥೋತ್ಸವ ಸುಸಾಂಗವಾಗಿ ನೆರವೇರಿತು.
Dakshina Kannada,Karnataka
January 22, 2025 3:29 PM IST