Last Updated:
ಪೊಲೀಸರು ಮತ್ತು ಸಂಚಾರ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ್ದರು. ಅಭಿಮಾನಿಗಳು ಸಂಖ್ಯೆ ನಿರೀಕ್ಷೆಗೂ ಮೀರಿ ಬರುವ ಸಾಧ್ಯತೆ ಇರುವುದರಿಂದ ವಿಧಾನಸೌಧದಿಂದ ಚಿನ್ನಸ್ವಾಮಿಗೆ ಓಪನ್ ಬಸ್ ಮೆರವಣಿಗೆಯನ್ನು ಬಿಡಲು ಸಲಹೆ ನೀಡಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ 2025ರ ಐಪಿಎಲ್ (IPL 2025) ಟ್ರೋಫಿ ಗೆಲುವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಯೋಜಿಸಿದ್ದ ಸಂಭ್ರಮಾಚರಣೆ ದುರಂತ ಅಂತ್ಯವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy) ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಆರ್ಸಿಬಿ ಐಪಿಎಲ್ ಟ್ರೋಫಿಯನ್ನು ಗೆದ್ದ ಕ್ಷಣದಿಂದಲೇ ಬೆಂಗಳೂರಿನ ರಸ್ತೆಗಳಲ್ಲಿ ಗೊಂದಲದ ವಾತಾವರಣ ಇತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಗೆಲುವನ್ನು ಉತ್ಸಾಹದಿಂದ ಆಚರಿಸುತ್ತಿದ್ದರು. ಬುಧವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ಇರುವುದು ಖಚಿತವಾದ ಕೂಡಲೇ, ಬೆಳಿಗ್ಗೆಯಿಂದಲೇ ಲಕ್ಷಗಟ್ಟಲೇ ಅಭಿಮಾನಿಗಳು ಕ್ರೀಡಾಂಗಣದ ಸುತ್ತ ಜಮಾಯಿಸಿದ್ದರು.
ಪೊಲೀಸ್ ಎಚ್ಚರಿಕೆಗೆ ಮನ್ನಣೆ ನೀಡದ ಫ್ರಾಂಚೈಸಿ
ಪೊಲೀಸರು ಮತ್ತು ಸಂಚಾರ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದ್ದರು. ಅಭಿಮಾನಿಗಳು ಸಂಖ್ಯೆ ನಿರೀಕ್ಷೆಗೂ ಮೀರಿ ಬರುವ ಸಾಧ್ಯತೆ ಇರುವುದರಿಂದ ವಿಧಾನಸೌಧದಿಂದ ಚಿನ್ನಸ್ವಾಮಿಗೆ ಓಪನ್ ಬಸ್ ಮೆರವಣಿಗೆಯನ್ನು ಬಿಡಲು ಸಲಹೆ ನೀಡಿದ್ದರು. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಆರ್ಸಿಬಿ ಆಡಳಿತ ಮಂಡಳಿ ಮತ್ತು ಕರ್ನಾಟಕ ಸರ್ಕಾರಕ್ಕೆ ಬುಧವಾರ ಯಾವುದೇ ಆಚರಣೆ ನಡೆಸದಂತೆ ಒತ್ತಾಯಿಸಲಾಗಿತ್ತು, ಏಕೆಂದರೆ ಅಭಿಮಾನಿಗಳ ಉತ್ಸಾಹ ತುಂಬಾ ತೀವ್ರವಾಗಿದೆ ಪೊಲೀಸರು ತಿಳಿಸಿದ್ದರು ಎಂದು ತಿಳಿದುಬಂದಿದೆ.
ಭಾನುವಾರಕ್ಕೆ ಮುಂದೂಡಲು ಪೊಲೀಸರ ಒತ್ತಾಯ
ಪೊಲೀಸರು ಆರ್ಸಿಬಿಗೆ ವಿಜಯೋತ್ಸವವನ್ನು ಭಾನುವಾರಕ್ಕೆ ಮುಂದೂಡಲು ಸಲಹೆ ನೀಡಿದ್ದರು, ಆಗ ಅಭಿಮಾನಿಗಳ ಭಾವನೆಗಳು ಶಾಂತವಾಗಿರುತ್ತವೆ ಎಂದು ತಿಳಿಸಿದ್ದರು. ಆದರೆ, ಆರ್ಸಿಬಿ ಆಡಳಿತ ಮಂಡಳಿಯು ಈ ಸಲಹೆಯನ್ನು ತಿರಸ್ಕರಿಸಿತು. ಭಾನುವಾರದ ವೇಳೆಗೆ ತಂಡದ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ತೆರಳಿರುತ್ತಾರೆ ಎಂದು ಆರ್ಸಿಬಿ ವಾದಿಸಿ ಬುಧವಾರವೇ ನಡೆಸಲು ಒತ್ತಾಯಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಡೆಕ್ಕನ್ ಹೆರಾಲ್ಡ್ಗೆ ತಿಳಿಸಿದ್ದಾರೆ. “ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಆರ್ಸಿಬಿ ಆಡಳಿತಕ್ಕೆ ಬುಧವಾರ ಆಚರಣೆ ಮಾಡದಂತೆ ಎಚ್ಚರಿಕೆ ನೀಡಿದ್ದೆವು. ಭಾನುವಾರ ಈ ಕಾರ್ಯಕ್ರಮ ನಡೆಸಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೆವು. ಮೆರವಣಿಗೆಯ ಬದಲಿಗೆ ಒಂದೇ ಸ್ಥಳದಲ್ಲಿ, ಕ್ರೀಡಾಂಗಣದ ಒಳಗೆ ವ್ಯವಸ್ಥಿತವಾಗಿ ಕಾರ್ಯಕ್ರಮ ಮಾಡಿ, ಆಟಗಾರರನ್ನು ತಂದು ಆಚರಣೆ ಪೂರ್ಣಗೊಳಿಸಿ ಎಂದು ಹೇಳಿದ್ದೆವು ಎಂದು ಅಧಿಕಾರಿಯೊಬ್ಬರು” ತಿಳಿಸಿದ್ದಾರೆ.
ವಿದೇಶಿ ಆಟಗಾರರ ಸಮಸ್ಯೆ
ಐಪಿಎಲ್ 2025ರ ವೇಳಾಪಟ್ಟಿಯು ಭಾರತ-ಪಾಕಿಸ್ತಾನ ಒತ್ತಡದಿಂದಾಗಿ ಒಂದು ವಾರಕ್ಕಿಂತ ಹೆಚ್ಚು ಮುಂದೂಡಲ್ಪಟ್ಟಿತು. ಇದರಿಂದ ಆರ್ಸಿಬಿಯ ವಿದೇಶಿ ಆಟಗಾರರು ತಮ್ಮ ರಾಷ್ಟ್ರೀಯ ತಂಡಗಳ ಜೊತೆಗಿನ ಕಾರ್ಯಕ್ರಮಗಳಿಗೆ ತೆರಳಬೇಕಾಯಿತು. “ವಿದೇಶಿ ಆಟಗಾರರು ಇಂದು ಅಥವಾ ನಾಳೆ ತೆರಳಲಿದ್ದಾರೆ ಎಂದು ಆರ್ಸಿಬಿ ತಿಳಿಸಿತು. ಆದ್ದರಿಂದ, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಲಿಲ್ಲ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೊಂದಲದ ವಾತಾವರಣ
“ಮಂಗಳವಾರ ರಾತ್ರಿಯಿಂದ ಬುಧವಾರದ ಬೆಳಿಗ್ಗೆ 5:30ರವರೆಗೂ ನಮ್ಮ ಎಲ್ಲ ಸಿಬ್ಬಂದಿ – ಪೊಲೀಸ್ ಆಯುಕ್ತರಿಂದ ಸಾಮಾನ್ಯ ಕಾನ್ಸ್ಟೇಬಲ್ಗಳವರೆಗೆ ರಸ್ತೆಯಲ್ಲಿಯೇ ಇದ್ದರು. ಎಲ್ಲರೂ ದಣಿದಿದ್ದರು. ಇಂತಹ ಉತ್ಸಾಹದ ಗೊಂದಲವನ್ನು ನಾವು ಎಂದೂ ಕಂಡಿರಲಿಲ್ಲ. ಹಾಗಾಗಿಯೇ ನಾವು ಭಾನುವಾರಕ್ಕೆ ಕಾರ್ಯಕ್ರಮಕ್ಕೆ ಮುಂದೂಡಲು ಬಯಸಿದ್ದೆವು ಎಂದು ಆ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
June 05, 2025 3:51 PM IST
RCB victory parade stampede: ಪೋಲಿಸರ ಎಚ್ಚರಿಕೆಯ ನಂತರವೂ ಭಾನುವಾರದ ಬದಲು ಬುಧವಾರವೇ ವಿಕ್ಟರಿ ಪರೇಡ್ ನಡೆಸಲು ಆರ್ಸಿಬಿ ಒತ್ತಾಯಿಸಿದ್ದೇಕೆ?