Dakshina Kannada: ಪುತ್ತೂರಿನಲ್ಲಿ ಹಲಸಿನ ಜಾತ್ರೆ; 100ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ, ಮಿಸ್ ಮಾಡ್ದೆ ನೋಡಿ | Puttur 3 day jackfruit fest special contests diverse products

Dakshina Kannada: ಪುತ್ತೂರಿನಲ್ಲಿ ಹಲಸಿನ ಜಾತ್ರೆ; 100ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ, ಮಿಸ್ ಮಾಡ್ದೆ ನೋಡಿ | Puttur 3 day jackfruit fest special contests diverse products

ಕೊಂಚ ಡಿಫರೆಂಟ್ ಆಗಿ‌ ಮೇಳ ಆಯೋಜನೆ

ಜಿಲ್ಲೆಯಲ್ಲಿ ಇದೀಗ ಮತ್ತೆ ಹಲಸಿನ ಮೇಳದ ಸೀಸನ್ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮೂರು ದಿನಗಳ ಕಾಲ ಈ ಮೇಳ ನಡೆಯಲಿದೆ. ಈ ಬಾರಿ ಕೊಂಚ ಡಿಫರೆಂಟ್ ಆಗಿ‌ ಮೇಳ ಆಯೋಜಿಸಲಾಗಿದ್ದು, ಹಲಸಿನ ಭಾರ ಎತ್ತುವ ಸ್ಪರ್ಧೆ, ಹಲಸು ತಿನ್ನುವ ಸ್ಪರ್ಧೆ, ಹಲಸಿನ ವಿಚಾರದ ತಾಳಮದ್ದಳೆ ಹೀಗೆ ವಿಶೇಷ ಕಾರ್ಯಕ್ರಮಗಳನ್ನು ಮೇಳದ ಜೊತೆಗೆ ಜೋಡಿಸಲಾಗಿದೆ.

ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್

ರಾಜ್ಯದೆಲ್ಲೆಡೆ ಬೆಳೆಯಲಾಗುವ ವಿವಿಧ ಜಾತಿಯ ಹಲಸುಗಳ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ಮಾವು ಹಾಗು ಇತರ ಕೃಷಿ ಉತ್ಪನ್ನಗಳ ಮಾರಾಟಕ್ಕೂ ಮೇಳದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಹುಣಸೂರು, ಸಖರಾಯಪಟ್ಟ, ದೊಡ್ಡಬಳ್ಳಾಪುರದ ರುಚಿರುಚಿಯಾದ ಹಲಸಿನ ಹಣ್ಣುಗಳು, ಬ್ರಹ್ಮಾವರ, ಚನ್ನಪಟ್ಟಣದಿಂದ ಉತ್ಕೃಷ್ಟ ಮಾವಿನ ಹಣ್ಣುಗಳು, ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ಸೊಳೆ ರೊಟ್ಟಿ, ರೇಶ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ ಮೊದಲಾದವು ಗ್ರಾಹಕರ ಗಮನಸೆಳೆದವು.

50ಕ್ಕೂ ಹೆಚ್ಚು ಸ್ಟಾಲ್

ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಆಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು ವಿಶೇಷವಾಗಿ ಗಮನಸೆಳೆದವು. 50ಕ್ಕೂ ಮಿಕ್ಕಿ ಸ್ಟಾಲ್‌ಗಳು ಮೇಳದಲ್ಲಿದ್ದು, ರವಿವಾರದ ತನಕ ಗ್ರಾಹಕರಿಗೆ ಖರೀದಿ ಅವಕಾಶ ಕಲ್ಪಿಸಲಿದೆ.

ಹಲಸಿನ ಉತ್ಪನ್ನಗಳ ತಯಾರಿ

ಇತರ ಉದ್ದೇಶದ ಮೇಳಗಳಂತೆ ಕಡಿಮೆ ದರದಲ್ಲಿ ಹಲಸಿನ ಖಾದ್ಯಗಳು ಲಭಿಸಬಹುದು ಎಂದು ಆಗಮಿಸಿದವರಿಗೆ ಹಲಸು ಉತ್ಪನ್ನ ಹಾಗೂ ಹಣ್ಣುಗಳು ಮೇಳದಲ್ಲಿ ದುಬಾರಿಯೆನಿಸಿದವು. ಹಲಸಿನ ಉತ್ಪನ್ನಗಳ ತಯಾರಿ ಹಾಗೂ ಸಿದ್ಧಪಡಿಸುವುದು ಶ್ರಮ, ವೆಚ್ಚದಾಯಕ. ಈ ಕಾರಣದಿಂದ ಹಲಸಿನ ಉತ್ಪನ್ನಗಳ ಬೆಲೆಯು ಒಂದಷ್ಟು ಹೆಚ್ಚೇ ಇರುತ್ತದೆ ಎನ್ನುವ ಸಮಜಾಯಿಷಿಯೂ ಸಂಘಟಕರದ್ದಾಗಿತ್ತು.