Dakshina Kannada: ಭಿಕ್ಷಾಟನೆಯಿಂದ ಉದ್ಯಮ, ತಾರತಮ್ಯ ಮೀರಿ ಮಂಗಳಮುಖಿಯ ಸಾಧನೆಯ ಕಥೆ | Annie Mangaluru Transgender Auto Service Achievement

Dakshina Kannada: ಭಿಕ್ಷಾಟನೆಯಿಂದ ಉದ್ಯಮ, ತಾರತಮ್ಯ ಮೀರಿ ಮಂಗಳಮುಖಿಯ ಸಾಧನೆಯ ಕಥೆ | Annie Mangaluru Transgender Auto Service Achievement

Last Updated:

ಅನಿ ಮಂಗಳೂರು, ಮಂಗಳಮುಖಿಯೆಂದು ತಾತ್ಸಾರಕ್ಕೆ ಒಳಗಾದರೂ, ಆಟೋ ರಿಕ್ಷಾ ಖರೀದಿಸಿ ಬಾಡಿಗೆಗೆ ಬಿಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗರ್ಭಿಣಿಯರಿಗೆ ಉಚಿತ ಪ್ರಯಾಣ, ಅನಾಥರ ಸೇವೆ, ಜಿಮ್ ಟ್ರೈನರ್, ನಟನೆಯಲ್ಲೂ ಸಾಧನೆ ಮಾಡಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಮಂಗಳಮುಖಿಯೆಂದರೆ (Transgender) ಎಲ್ಲರಿಗೂ ತಾತ್ಸಾರ. ಅವರನ್ನು ಕೆಲವರು ಮನುಷ್ಯರೆಂದೇ (Human) ಪರಿಗಣಿಸುವುದಿಲ್ಲ. ಇದರ ನಡುವೆಯೂ ಕೆಲವು ಮಂಗಳಮುಖಿಯರು ಭಿಕ್ಷಾಟನೆ (Begging) ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಿದ್ದಾರೆ. ಅಂಥವರಲ್ಲಿ ಒಬ್ಬರು ಅನಿ ಮಂಗಳೂರು.

ಅದೊಂದು ದಿನ ಸಂಜೆ ಮನೆಯತ್ತ ಮರಳುತ್ತಿದ್ದ ಅನಿಯವರಿಗೆ ಯಾವ ಆಟೋರಿಕ್ಷಾಗಳು (Auto Rickshaw) ನಿಲ್ಲಿಸಿರಲಿಲ್ಲ. ರಾತ್ರಿಯಾದರೂ ಒಂದೇ ಒಂದು ಆಟೋ ರಿಕ್ಷಾ ಸಿಗದ ಕಾರಣ ಅವರು ಮನೆಗೆ ನಡೆದುಕೊಂಡೇ ಹೋಗಬೇಕಾಯ್ತು. ಅಂದೇ ಅವರು ಆಟೋ ರಿಕ್ಷಾ ಖರೀದಿಸಿ ಬಾಡಿಗೆಗೆ (Rent) ಬಿಡುವ ನಿರ್ಧಾರ ಕೈಗೊಂಡರು. ಅದಕ್ಕಾಗಿ ಬ್ಯಾಂಕ್‍ಗೆ ಓಡಾಟ ಶುರುಮಾಡಿ ಸಾಲ ಸಿಕ್ಕ ತಕ್ಷಣ ನಾಲ್ಕು ಆಟೋಗಳನ್ನು ಖರೀದಿಸಿದರು. ಈ ನಾಲ್ಕೂ ಆಟೋಗಳನ್ನು ಮಂಗಳೂರು (Mangaluru) ಗ್ರಾಮಾಂತರ ಪ್ರದೇಶ ದೇರಳಕಟ್ಟೆಯಲ್ಲಿ ಬಾಡಿಗೆಗೆ ಬಿಟ್ಟಿದ್ದಾರೆ. ಇದೀಗ ಪ್ರತೀ ಆಟೋದಿಂದ ದಿನವೂ ಅವರಿಗೆ ನಿಶ್ಚಿತ ಮೌಲ್ಯದ ಆದಾಯ ಬರುತ್ತದೆ.

ವಿಶೇಷವೆಂದರೆ, ಇವರ ಆಟೋಗಳಲ್ಲಿ ಗರ್ಭಿಣಿಯರಿಗೆ ಹಾಗೂ ಹಿರಿಯ ಮಂಗಳಮುಖಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ತನಗಾದ ಸಂಕಷ್ಟ, ಅವಮಾನ, ತೊಂದರೆ ಇನ್ನಾವ ಮಂಗಳಮುಖಿಯರಿಗೆ, ಹೆಣ್ಣಿಗೆ ಆಗಬಾರದೆಂದು ಈ ಉಚಿತ ಸೇವೆಯ ಅವಕಾಶವನ್ನು ಕಲ್ಪಿಸಿದ್ದಾರೆ.

ಮೂಲತಃ ರಾಯಚೂರು ಜಿಲ್ಲೆಯವರಾದ ಅನಿ ಶಿಕ್ಷಣಕ್ಕೆಂದು ಮಂಗಳೂರಿಗೆ ಬಂದವರು ಸಾಕಷ್ಟು ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾರೆ. ಬಿಎ ಪದವಿ ಪಡೆದಿರುವ ಇವರು ಬಿಎಡ್ 2ನೇ ಸೆಮಿಸ್ಟರ್ ವೇಳೆಗೆ ಮಂಗಳಮುಖಿಯಾಗಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ ಅರ್ಧಕ್ಕೇ ಮೊಟಕುಗೊಳಿಸಿದರು.

ಆದರೆ ಸಾಧನೆಯಲ್ಲಿ ಮಾತ್ರ ಇವರು ಹಿಂದೆ ಉಳಿದಿಲ್ಲ. ಸದ್ಯ ಜಿಮ್ ಟ್ರೈನರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಅನಿ, ಶಿವಲೀಲಾ ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಆಟೋರಿಕ್ಷಾದಲ್ಲಿ ಬರುವ ಆದಾಯದಲ್ಲಿ ಅನಾಥರ, ಬಡ ಮಕ್ಕಳ ಹಸಿವೆ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಎಲ್ಲವೂ ಇದ್ದೂ ಏನೂ ಸಾಧನೆ ಮಾಡದಿರುವವರ ನಡುವೆ ಅನಿ ಮಂಗಳೂರು ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.