Last Updated:
ಮಹಾಲಿಂಗೇಶ್ವರ ದೇವರ ವರ್ಷದ ಮೊದಲ ಸವಾರಿ ಇದೇ ಪೂಕರೆ ಉತ್ಸವದಂದು ನಡೆಯುತ್ತದೆ. ಅಡಿಕೆ ಮರ ಮತ್ತು ಬಿದಿರನ್ನು ಬಳಸಿ ಈ ಪೂಕರೆಯನ್ನು ನಿರ್ಮಿಸಲಾಗುತ್ತದೆ.
ದಕ್ಷಿಣಕನ್ನಡ: ಕರಾವಳಿ ಭಾಗದಲ್ಲಿ(Coastal Area) ಬೇಸಾಯ ಮಾಡುವ ಮೊದಲು ಬೇಸಾಯ ಮಾಡುವ ಗದ್ದೆಯಲ್ಲಿ ಪೂಕರೆ ಉತ್ಸವ(Pookare Utsav) ನಡೆಯೋದು ಸಾಮಾನ್ಯ. ಈ ಪೂಕರೆ ಉತ್ಸವ ನಡೆದ ಬಳಿಕ ಗ್ರಾಮದ ಜನರೆಲ್ಲಾ ಒಟ್ಟು ಸೇರಿ ಗದ್ದೆಯಲ್ಲಿ ಬೇಸಾಯ ಮಾಡಲು ಆರಂಭಿಸುತ್ತಿದ್ದ ಸಂಪ್ರದಾಯವನ್ನು ಕೆಲವು ಕಡೆಗಳಲ್ಲಿ ಇತ್ತೀಚೆಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಬೇಸಾಯದ ಗದ್ದೆಯನ್ನು ಹೊಂದಿರುವ ದೇವಾಲಯಗಳಲ್ಲೂ ಈ ಪೂಕರೆ ಉತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗುತ್ತದೆ. ಇದೇ ರೀತಿಯ ಪೂಕರೆ ಉತ್ಸವವು ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ(Puttur Mahatobhara Mahalingeshwara Temple) ನಡೆಯುತ್ತದೆ. ದೇವರ ಉಪಸ್ಥಿತಿಯಲ್ಲಿ ಎಲ್ಲಾ ಸಮುದಾಯದ ಜನ ಒಟ್ಟುಗೂಡಿ ಆಚರಿಸುವ ಈ ಪೂಕರೆ ಉತ್ಸವಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾರೀ ಪ್ರಾಮುಖ್ಯತೆಯೂ ಇದೆ.
ಇದನ್ನೂ ಓದಿ: Mysuru: ವಿಶೇಷಚೇತನ ಕುಟುಂಬಕ್ಕೆ ಸೂರು ಕಲ್ಪಿಸಿದ ಧರ್ಮಸ್ಥಳ ಸಂಘ ಸಂಸ್ಥೆ!
ಪೂಕರೆಯನ್ನು ಹೇಗೆ ತಯಾರು ಮಾಡುತ್ತಾರೆ?
ಮಹಾಲಿಂಗೇಶ್ವರ ದೇವರ ವರ್ಷದ ಮೊದಲ ಸವಾರಿ ಇದೇ ಪೂಕರೆ ಉತ್ಸವದಂದು ನಡೆಯುತ್ತದೆ. ಅಡಿಕೆ ಮರ ಮತ್ತು ಬಿದಿರನ್ನು ಬಳಸಿ ಈ ಪೂಕರೆಯನ್ನು ನಿರ್ಮಿಸಲಾಗುತ್ತದೆ. ತ್ರಿಕೋನ ಆಕೃತಿಯಂತೆ ಕಾಣುವ ಇದಕ್ಕೆ ಹೂವಿನ ಅಲಂಕಾರವನ್ನು ಮಾಡಲಾಗುತ್ತದೆ. ಈ ಪೂಕರೆಯನ್ನು ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಜನರೇ ಸಿದ್ಧಪಡಿಸಬೇಕು ಎನ್ನುವ ಕಟ್ಟಲೆಯಿದ್ದು, ಈ ಸಮುದಾಯ ಸಿದ್ಧಪಡಿಸಿದ ಪೂಕರೆಗೆ ಸವಿತಾ ಸಮುದಾಯಕ್ಕೆ ಸೇರಿದವರು ಹೂವಿನ ಅಲಂಕಾರವನ್ನು ಮಾಡುತ್ತಾರೆ. ಹೀಗೆ ಸಿದ್ಧಗೊಂಡ ಪೂಕರೆಯನ್ನು ದೇವಸ್ಥಾನದ ಬಾಕಿಮಾರು ಮತ್ತು ದೇವರಮಾರು ಗದ್ದೆಯವರೆಗೆ ಕೊಂಡೊಯ್ಯಲಾಗುತ್ತದೆ. ಮುಗೇರ ಸಮುದಾಯಕ್ಕೆ ಸೇರಿದ ಜನ ಈ ಪೂಕರೆಯನ್ನು ಗದ್ದೆಯಲ್ಲಿ ನೆಟ್ಟ ಬಳಿಕ ಮಹಾಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ಪೂಕರೆ ಕಟ್ಟೆಯಲ್ಲಿ ಇಡಲಾಗುತ್ತದೆ. ಅಲ್ಲಿ ದೇವರಿಗೆ ಸೀಯಾಳ ಮತ್ತು ಇತರ ವಸ್ತುಗಳನ್ನು ಸಮರ್ಪಿಸಲಾಗುತ್ತದೆ.
ದೇವರನ್ನು ಪೂಕರೆ ಗದ್ದೆಗೆ ನಂದಿಯ ಮುಖವಾಡ ಧರಿಸಿದ ದೈವ ಕರೆದುಕೊಂಡು ಹೋಗುತ್ತದೆ. ಪೂಕರೆ ಕಟ್ಟೆಯಲ್ಲಿ ವಿರಾಜಮಾನವಾಗುವ ಮಹಾಲಿಂಗೇಶ್ವರನಿಗೆ ದೀವಟಿಗೆ ಸಲಾಂ, ಕಟ್ಟೆಪೂಜೆ ಮತ್ತು ಫಸಲು ಕಾಣಿಕೆಯನ್ನು ಸಮರ್ಪಿಸಲಾಗುತ್ತದೆ. ಪೂಕರೆಗೆ ದೇವರು ಹೊರಡುವ ಮೊದಲು ದೇವಸ್ಥಾನದ ಒಳಾಂಗಣದಲ್ಲಿ ಎರಡು ಬಲಿ ಉತ್ಸವ ಮತ್ತು ಹೊರಾಂಗಣದಲ್ಲಿ ಒಂದೂವರೆ ಸುತ್ತು ಬಲಿ ನಡೆಯುತ್ತದೆ. ಪೂಕರೆ ಪೂಜೆಯ ಬಳಿಕ ದೇವರು ಮತ್ತೆ ಗರ್ಭಗುಡಿಗೆ ಸೇರಿದ ಬಳಿದ ಪೂಕರೆ ಉತ್ಸವಕ್ಕೆ ತೆರೆ ಬೀಳುತ್ತದೆ.
Dakshina Kannada,Karnataka
November 29, 2024 2:18 PM IST