Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಣ್ಣಿನ ಪ್ರಸಾದಕ್ಕಿದೆ ಮೊದಲ ಆದ್ಯತೆ – ಭಕ್ತರಿಗೆ ಮೂಲ ಮೃತ್ತಿಕೆ ವಿತರಣೆ | Distribution of Mrutike Prasad in Dakshina Kannada district Kukke Subrahmanya

Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಣ್ಣಿನ ಪ್ರಸಾದಕ್ಕಿದೆ ಮೊದಲ ಆದ್ಯತೆ – ಭಕ್ತರಿಗೆ ಮೂಲ ಮೃತ್ತಿಕೆ ವಿತರಣೆ | Distribution of Mrutike Prasad in Dakshina Kannada district Kukke Subrahmanya

Last Updated:

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಚಂಪಾಷಷ್ಠಿ ಜಾತ್ರೋತ್ಸವಕ್ಕೂ ಮುನ್ನ ಮೂಲ ಮೃತ್ತಿಕೆಯನ್ನು ಭಕ್ತರಿಗೆ ವಿತರಿಸಲಾಗಿದೆ. ಈ ಕ್ಷೇತ್ರದಲ್ಲಿ ನೀಡುವ ಮಣ್ಣಿನ ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದ್ದು ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದ್ದಾರೆ.

X

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Sri Subrahmanya Temple) ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದವನ್ನು ವಿತರಿಸಲಾಗಿದೆ. ಚಂಪಾಷಷ್ಠಿ ಜಾತ್ರೆ ಆರಂಭಕ್ಕೂ ಮೊದಲು ಮೂಲ ಗರ್ಭಗುಡಿಯ ಹುತ್ತದಿಂದ ಮೃತಿಕೆ ಪ್ರಸಾದವನ್ನು ತೆಗೆಯಲಾಗುತ್ತದೆ. ಮೂಲ ಮೃತ್ತಿಕೆ ಪ್ರಸಾದಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಕ್ತರು (Devotees) ಸರತಿಸಾಲಿನಲ್ಲಿ ನಿಂತು ಈ ಪ್ರಸಾದವನ್ನು ಸ್ವೀಕರಿಸಿದ್ದಾರೆ (Dakshina Kannada News).

ಕುಕ್ಕೆಯ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರಿಗೆ ಮೂಲ ಮೃತ್ತಿಕೆ ಪ್ರಸಾದವನ್ನು ವಿತರಣೆ ಮಾಡಲಾಗಿದೆ. ಮೂಲ ಗರ್ಭಗುಡಿಯ ಹುತ್ತದಿಂದ ತೆಗೆಯುವ ಪವಿತ್ರ ಪ್ರಸಾದವೇ ಮೂಲ ಮೃತ್ತಿಕೆ. ಹುತ್ತದ ಮಣ್ಣನ್ನೇ ಇಲ್ಲಿ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಮಣ್ಣಿನ ಪ್ರಸಾದಕ್ಕೆ ಮೊದಲ ಆದ್ಯತೆಯಿದ್ದು, ಬಳಿಕವೇ ಗಂಧ ಪ್ರಸಾದ ಮೊದಲಾದವುಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಈ ಕ್ಷೇತ್ರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಹೆಸರು ಬರಲು ಕಾರಣ ಗೊತ್ತಾ?

ಸುಬ್ರಹ್ಮಣ್ಯದ ಮಲೆಕುಡಿಯ ಮಹಿಳೆಗೆ ಕಾಣಿಸಿಕೊಂಡಿದ್ದ ಸುಬ್ರಹ್ಮಣ್ಯ ಸ್ವಾಮಿಯನ್ನು ಆ ಮಹಿಳೆ ತನ್ನ ಬುಟ್ಟಿಯಲ್ಲಿ ತಂದು ಪೂಜಿಸಿದ್ದಳು ಎನ್ನುವ ಕಥೆಯಿದೆ. ಬುಟ್ಟಿಯನ್ನು ಹೋಲುವ ಕಾಡುತ್ಪತ್ತಿ‌ ಸಂಗ್ರಹಿಸುವ ಸಾಧನಕ್ಕೆ ಕುಕ್ಕೆ ಎಂದು ಕರೆಯುತ್ತಾರೆ. ಇದೇ‌ ಕಾರಣಕ್ಕೆ ಈ ಕ್ಷೇತ್ರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಎನ್ನುವ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.

ವಾಸುಕಿಯಾದಿಯಾಗಿ ಸುಬ್ರಹ್ಮಣ್ಯ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆಲೆಯಾಗಿದ್ದು, ನಾಗ ದೇವರಿಗೆ ಇಲ್ಲಿ ಪ್ರಮುಖ ಸ್ಥಾನವೂ ಇದೆ. ಇಲ್ಲಿ ಪೂಜೆ ಸಲ್ಲಿಸುವುದರಿಂದ ನಾಗದೋಷ, ಆರೋಗ್ಯ ಸಮಸ್ಯೆ, ಚರ್ಮರೋಗ ಸೇರಿದಂತೆ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ: Mysuru: ನಂಜನಗೂಡಿಗೆ ಹೋದ ಭಕ್ತರು ಇಲ್ಲಿಗೂ ಹೋಗಲೇಬೇಕು; ಪರಶುರಾಮನ ದರ್ಶನದಿಂದಷ್ಟೇ ಈಡೇರುತ್ತೆ ಬೇಡಿಕೆಗಳು!

ಗರ್ಭಗುಡಿಯೊಳಗಿನ ಹುತ್ತದಿಂದ ತೆಗೆಯುವ ಮಣ್ಣು

ಬೇರೆ ಯಾವುದೇ ಕ್ಷೇತ್ರದಲ್ಲಿ ಇರದ ಮಣ್ಣಿನ ಪ್ರಸಾದವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ವರ್ಷಕ್ಕೊಮ್ಮೆ ಗರ್ಭಗುಡಿಯೊಳಗಿನ ಹುತ್ತದಿಂದ ಮಣ್ಣನ್ನು ತೆಗೆದು ಭಕ್ತರಿಗೆ ನೀಡುತ್ತಾರೆ. ಚಂಪಾಷಷ್ಠಿ ಮಹೋತ್ಸವದ ಪ್ರಾರಂಭದ ದಿನ ಈ ಮಣ್ಣಿನ ಪ್ರಸಾದವನ್ನು ತೆಗೆದು ಭಕ್ತರಿಗೆ ವಿತರಿಸಲಾಗುತ್ತದೆ. ಬೇರೆ ದಿನಗಳಲ್ಲಿ ಈ ಪ್ರಸಾದವನ್ನು ಕ್ಷೇತ್ರದಲ್ಲಿ ಆಶ್ಲೇಷ ಬಲಿ, ಸರ್ಪ ಸಂಸ್ಕಾರ ಹಾಗೂ ಇತರ ಸೇವೆಗಳನ್ನು ಸಲ್ಲಿಸುವ ಭಕ್ತರಿಗೆ ನೀಡಲಾಗುತ್ತದೆ. ನಾಗ ದೇವರು ಮಣ್ಣಿನಲ್ಲೇ ಹರಿದಾಡುವ ಶಕ್ತಿಯಾಗಿರುವ ಕಾರಣ, ನಾಗ ದೇವರು ಹರಿದಾಡಿದ ಮಣ್ಣು ಅತ್ಯಂತ ಪವಿತ್ರ ಎನ್ನುವ ಕಾರಣಕ್ಕೆ ಮಣ್ಣಿನ ಪ್ರಸಾದವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀಡಲಾಗುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೃತ್ತಿಕೆ ಪ್ರಸಾದಕ್ಕೆ ಮಹತ್ವವಿದ್ದು, ಅನಾದಿಕಾಲದಿಂದಲೂ ಚಂಪಾಷಷ್ಠಿ ಉತ್ಸವ ಆರಂಭಕ್ಕೂ ಮೊದಲು ಗರ್ಭಗುಡಿಯಿಂದ ಹುತ್ತದ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಆ ಮಣ್ಣನ್ನು ಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತರಿಗೆ ನೀಡಲಾಗುತ್ತದೆ. ಈ ಒಂದು ದಿನ ಮಾತ್ರ ಎಲ್ಲ ಭಕ್ತರಿಗೆ ಮೂಲ ಮೃತ್ತಿಕೆಯನ್ನು ನೀಡಲಾಗುತ್ತದೆ. ಹಲವು ಸಮಸ್ಯೆಗಳಿಗೆ ಈ ಮೂಲ ಮೃತ್ತಿಕೆ ಪರಿಹಾರ ನೀಡುತ್ತದೆ ಎನ್ನುವ ನಂಬಿಕೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ಈ ಪ್ರಸಾದವನ್ನು ಪಡೆಯುತ್ತಾರೆ.