Last Updated:
ವಿದ್ಯಾ ಸಂಪತ್ ಫಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ 22 ದೇಶಗಳನ್ನು ಸೋಲಿಸಿ ಕ್ರೌನ್ ಗೆದ್ದರು. ಮಂಗಳೂರು ಉದ್ಯಮಿ ಮತ್ತು ಮಾಡೆಲ್ ಆಗಿರುವ ವಿದ್ಯಾ ಭಾರತದ ಏಕೈಕ ಸ್ಪರ್ಧಿಯಾಗಿದ್ದರು.
ಮಂಗಳೂರು: ಮನೆ, ಸಂಸಾರ, ಮಗ, ಉದ್ಯಮವನ್ನೂ (Business) ನಿಭಾಯಿಸುತ್ತಾ, ಮಾಡೆಲಿಂಗ್ ಜಗತ್ತಿನಲ್ಲಿ ಛಾಪು ಮೂಡಿಸಿದ ಮಂಗಳೂರಿನ ಬೆಡಗಿಯೋರ್ವರು (Beautiful Girl) ಫಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಕ್ರೌನ್ (Crown) ಮುಡಿಗೇರಿಸಿದ್ದಾರೆ.
ಮಂಗಳೂರಿನ ಚಿತ್ರಾಪುರದಲ್ಲಿ ಸೂಪರ್ ಮಾರ್ಕೆಟ್ ಉದ್ಯಮಿಯಾಗಿರುವ ವಿದ್ಯಾ ಸಂಪತ್ ಈ ಸಾಧನೆ ಮಾಡಿದವರು. ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ವಿವಿಧ ರೌಂಡ್‌ಗಳ ಮೂಲಕ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಡಿ. 2 ರಿಂದ ಡಿ.10ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ. ಈ ಸ್ಪರ್ಧೆಯಲ್ಲಿ 22 ದೇಶದ ಇತರ ಸ್ಪರ್ಧಿಗಳು ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಅವರು ಮೊದಲ ಸ್ಥಾನ ಪಡೆದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ವಿದ್ಯಾ ಸಂಪತ್ ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸಲೂನ್ನ ಮರ್ಸಿನಿಂದ ತರಬೇತಿ ಪಡೆದುಕೊಂಡಿದ್ದಾರೆ. ಮುಂಬೈನಲ್ಲಿ ಹುಟ್ಟಿದ್ದರೂ, ಸದ್ಯ ಮಂಗಳೂರು ವಾಸಿಯಾಗಿರುವ ವಿದ್ಯಾ ಸಂಪತ್ ಫ್ಯಾಷನ್ ಲೋಕದತ್ತ ಆಕರ್ಷಿತರಾಗಿ ಅಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಟ್ಯಾಲೆಂಟ್ ಸುತ್ತು, ನ್ಯಾಷನಲ್ ಕಾಸ್ಟ್ಯೂಮ್ ರೌಂಡ್ ಹೀಗೆ ಟಫ್ ಕಾಂಪಿಟೇಷನ್ ಇತ್ತು. ಇವರು ನ್ಯಾಷನಲ್ ಕಾಸ್ಟ್ಯೂಮ್ಗೆ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ಪಕ್ಷಿ ನವಿಲು ಹಾಗೂ ತಾವರೆ ಹೂವಿನ ಸಂಕೇತವಿರುವ ವಸ್ತ್ರ ವಿನ್ಯಾಸ ಮಾಡಿಕೊಂಡಿದ್ದರು. ಜೊತೆಗೆ ಕಸದಿಂದ ರಸ ಪರಿಕಲ್ಪನೆಯಲ್ಲಿ ಬಳಸಿ ಎಸೆದಿರುವ ಟಿನ್ಗಳಿಂದಲೇ, ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು. ಈ ಮೂಲಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ತುಳುನಾಡಿನ ಸಂಸ್ಕೃತಿಯ ಸಂಕೇತವುಳ್ಳ ಪ್ರತಿಮೆಯನ್ನು ಬೇರೆ ಬೇರೆ ರಾಷ್ಟ್ರಗಳ 22 ಮಂದಿ ಸ್ಪರ್ಧಿಗಳಿಗೆ ನೀಡಿದ್ದಾರೆ.
ಫಿಲಿಫೈನ್ಸ್‌ನಲ್ಲಿ ಗೆದ್ದು ಬೀಗಿದ ಭಾರತೀಯ ಮಹಿಳೆ
Dakshina Kannada,Karnataka
December 17, 2025 3:06 PM IST