Last Updated:
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 169 ರನ್ಗಳಿಸಿದರೆ, 170 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಕೇವಲ 151 ರನ್ ಗಳಿಸಿ 18 ರನ್ಗಳ ಸೋಲನುಭವಿಸಿತು.
ಏಷ್ಯಾಕಪ್ಗೆ (Asia Cup) ಪೂರ್ವಭಾವಿಯಾಗಿ ನಡೆಯುತ್ತಿರುವ ಯುಎಇ ತ್ರಿಕೋನ ಟಿ20 ಸರಣಿಯ (Tri Series) 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ (Pakistan vs Afghanistan) ತಂಡವು ಪಾಕಿಸ್ತಾನವನ್ನು 18 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಏಷ್ಯಾದ ಎರಡನೇ ಅತ್ಯುತ್ತಮ ತಂಡ ಎಂಬ ಸ್ಥಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶಾರ್ಜಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 2, 2025 ರಂದು ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲಾ ಕ್ಷೇತ್ರಗಳಲ್ಲೂ ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಸಾಧಿಸಿತು. ಆರಂಭಿಕ ಆಟಗಾರರಾದ ಸೆದಿಕುಲ್ಲಾ ಅಟಲ್ ಮತ್ತು ಇಬ್ರಾಹಿಂ ಜದ್ರಾನ್‌ರ ಭರ್ಜರಿ ಬ್ಯಾಟಿಂಗ್, ಜೊತೆಗೆ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ನೂರ್ ಅಹ್ಮದ್‌ರ ಸ್ಪಿನ್ ಬೌಲಿಂಗ್‌ನಿಂದ ಅಫ್ಘಾನಿಸ್ತಾನ ಈ ಗೆಲುವನ್ನು ಸಾಧಿಸಿತು. ಈ ಗೆಲುವು ಏಷ್ಯಾ ಕಪ್ 2025ಕ್ಕೆ ಮುನ್ನ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 169 ರನ್ ಗಳಿಸಿತು. ಆರಂಭಿಕ ಆಟಗಾರ ಸೆದಿಕುಲ್ಲಾ ಅಟಲ್ (54 ರನ್, 38 ಎಸೆತಗಳಲ್ಲಿ, 5 ಬೌಂಡರಿಗಳು, 2 ಸಿಕ್ಸರ್‌ಗಳು) ಮತ್ತು 3ನೇ ಕ್ರಮಾಂಕದಲ್ಲಿ ಬಂದ ಇಬ್ರಾಹಿಂ ಜದ್ರಾನ್ (63 ರನ್, 40 ಎಸೆತಗಳಲ್ಲಿ, 6 ಬೌಂಡರಿಗಳು, 1 ಸಿಕ್ಸರ್) ಉತ್ತಮವಾಗಿ ಬ್ಯಾಟಿಂಗ್ ಮಾಡಿ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು. ಕರೀಂ ಜನತ್ (18 ರನ್) ಮತ್ತು ಅಜ್ಮತುಲ್ಲಾ ಒಮರ್ಜಾಯ್ (15 ರನ್) ಅವರ ಕೊಡುಗೆಯಿಂದ ಅಫ್ಘಾನಿಸ್ತಾನ 169 ರನ್‌ಗಳ ಗೌರವಾನ್ವಿತ ಮೊತ್ತವನ್ನು ಕಲೆಹಾಕಿತು.
ಪಾಕಿಸ್ತಾನದ ಬೌಲಿಂಗ್‌ನಲ್ಲಿ ಫಹೀಮ್ ಅಶ್ರಫ್ ಒಬ್ಬರೇ ಗಮನ ಸೆಳೆದರು. ಅವರ 4 ವಿಕೆಟ್‌ಗಳು ಅಫ್ಘಾನಿಸ್ತಾನದ ರನ್ ಗಳಿಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದವು. ಆದರೆ, ಶಾಹೀನ್ ಶಾ ಆಫ್ರಿದಿ (1/36), ಹ್ಯಾರಿಸ್ ರೌಫ್ (0/38) ಮತ್ತು ಸುಫಿಯಾನ್ ಮುಕೀಮ್ (0/28) ಅವರಂತಹ ಪ್ರಮುಖ ಬೌಲರ್‌ಗಳು ದುಬಾರಿಯಾಗಿದರು ಮತ್ತು ವಿಕೆಟ್‌ಗಳನ್ನು ಪಡೆಯಲು ವಿಫಲರಾದರು.
170 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ ಕೇವಲ 151 ರನ್ ಗಳಿಸಿ ಸೋಲನುಭವಿಸಿತು. ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ (21 ರನ್, 10 ಎಸೆತಗಳಲ್ಲಿ) ಸ್ಫೋಟಕ ಆರಂಭ ನೀಡಿದರೂ, ಫಜಲ್‌ಹಕ್ ಫಾರೂಕಿಯ ಬೌಲಿಂಗ್‌ನಿಂದ ಆರಂಭದಲ್ಲೇ ವಿಕೆಟ್ ಕಳೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಸೈಮ್ ಆಯುಬ್ (25 ರನ್), ಫಖರ್ ಜಮಾನ್ (15 ರನ್) ಮತ್ತು ನಾಯಕ ಸಲ್ಮಾನ್ ಅಘಾ (20 ರನ್) ಕೆಲವು ರನ್‌ಗಳನ್ನು ಗಳಿಸಿದರೂ, ಅಫ್ಘಾನ್ ಸ್ಪಿನ್ನರ್‌ಗಳಾದ ರಶೀದ್ ಖಾನ್ (2/21), ಮೊಹಮ್ಮದ್ ನಬಿ (2/23), ಮತ್ತು ನೂರ್ ಅಹ್ಮದ್ (2/20) ಅವರ ಸ್ಪಿನ್ ಜಾಲಕ್ಕೆ ಸಿಲುಕಿ ವಿಕೆಟ್‌ಗಳನ್ನು ಕಳೆದುಕೊಂಡರು. ಕೊನೆಯಲ್ಲಿ ಹ್ಯಾರಿಸ್ ರೌಫ್‌ನ 18 ಎಸೆತಗಳಲ್ಲಿ 34 ರನ್‌ಗಳ ಸಿಡಿಸಿ ಸೋಲಿನ ಅಂತರವನ್ನ ತಗ್ಗಿಸಿದರು.
ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯು ಸಂಪೂರ್ಣವಾಗಿ ಸಮತೋಲಿತವಾಗಿತ್ತು. ಫಜಲ್‌ಹಕ್ ಫಾರೂಕಿಯ ವೇಗದ ಬೌಲಿಂಗ್ (2/30) ಆರಂಭಿಕರನ್ನ ಕಟ್ಟಿ ಹಾಕಿದರೆ, ಸ್ಪಿನ್ನರ್‌ಗಳಾದ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ನೂರ್ ಅಹ್ಮದ್ ಮಧ್ಯಮ ಓವರ್‌ಗಳಲ್ಲಿ ಪಾಕಿಸ್ತಾನದ ಬ್ಯಾಟರ್ಗಳನ್ನ ಧೂಳೀಪಟ ಮಾಡಿದರು. ರಶೀದ್ ಖಾನ್‌ರ ನಾಯಕತ್ವದ ತಂತ್ರಗಾರಿಕೆಯು ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ.
ಕೊನೆಗೆ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ಗಳಿಗೆ ಸೀಮಿತವಾಯಿತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನವು 18 ರನ್‌ಗಳಿಂದ ಗೆಲುವು ಸಾಧಿಸಿತು, ಇದರೊಂದಿಗೆ ಯುಎಇ ತ್ರಿಕೋನ ಸರಣಿಯಲ್ಲಿ ತಮ್ಮ ಎರಡನೇ ಗೆಲುವನ್ನು ದಾಖಲಿಸಿತು. ಪಾಕ್ ವಿರುದ್ಧದ ಪಂದ್ಯ ಏಷ್ಯಾ ಕಪ್ 2025ಕ್ಕೆ ಮುನ್ನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಪಂದ್ಯವು ಏಷ್ಯಾದಲ್ಲಿ ಭಾರತದ ನಂತರ ಎರಡನೇ ಅತ್ಯುತ್ತಮ ತಂಡ ಯಾವುದು ಎಂಬ ಚರ್ಚೆಗೆ ಒಂದು ಸ್ಪಷ್ಟ ಉತ್ತರವನ್ನು ನೀಡಿದೆ. ಅಫ್ಘಾನಿಸ್ತಾನದ ಈ ಪ್ರದರ್ಶನವು ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ತಂಡಗಳಿಗೆ ಸವಾಲನ್ನು ಒಡ್ಡಿದೆ.
September 03, 2025 4:43 PM IST