Last Updated:
ಆಫ್ರಿಕನ್ ರೋಸ್ ಮೆಲ್ಲೋ ದಾಸವಾಳ ಹೂವು ಕರಾವಳಿಯಲ್ಲಿ ಅಪರೂಪ, ಬೆಳಗ್ಗೆ 9 ಗಂಟೆಗೆ ಅರಳುತ್ತದೆ. ಬ್ರೆಜಿಲ್ ನಲ್ಲಿ ಪಾನೀಯಕ್ಕೆ ಬಳಸುತ್ತಾರೆ, ಆಫೀಸ್ ಹೂ ಎಂದು ಕರೆಯಲಾಗುತ್ತದೆ.
ದಕ್ಷಿಣ ಕನ್ನಡ: ದಾಸವಾಳ (Hibiscus) ಹೂವಿನಲ್ಲಿ ಹಲವು ಪ್ರಕಾರಗಳಿದ್ದು, ಆಯಾಯ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಅವುಗಳು ಬೆಳೆಯುತ್ತವೆ. ಒಂದು ಕಡೆ ಬೆಳೆಯುವ ದಾಸವಾಳ ಹೂವಿಗೂ (Flower) ,ಇನ್ನೊಂದು ಕಡೆ ಬೆಳೆಯುವ ದಾಸವಾಳ ಹೂವಿಗೂ ಬಹಳಷ್ಡು ವ್ಯತ್ಯಾಸಗಳೂ ಇವೆ. ದಾಸವಾಳಗಳಲ್ಲಿ ಸುಮಾರು 250 ರಿಂದ 300 ಕ್ಕೂ ಮಿಕ್ಕಿದ ವಿವಿಧ ಪ್ರಕಾರದ ಹೂವುಗಳಿದ್ದು, ಕರಾವಳಿ (Coastal) ಭಾಗದಲ್ಲಿ ಅಪರೂಪವಾಗಿ ಕಾಣಸಿಗುವ ಆಫ್ರಿಕನ್ (African) ರೋಸ್ ಮೆಲ್ಲೋ ಎನ್ನುವ ದಾಸವಾಳ ಗಿಡವೂ ಇವುಗಳಲ್ಲಿ ಒಂದಾಗಿದೆ.
ಇದರ ಹೂವಿನಿಂದ ಹಿಡಿದು ಹೂವಿನ ಎಲೆ, ಕಾಂಡ ಎಲ್ಲವೂ ಕುಂಕುಮ ಬಣ್ಣದಂತಿದೆ. ಯಾರನ್ನೂ ಒಮ್ಮೆ ತನ್ನತ್ತ ಆಕರ್ಷಿಸುವ ಈ ಹೂ ಕರಾವಳಿ ಭಾಗದಲ್ಲಿ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕಂಡು ಬರುತ್ತವೆ. ನೈಸರ್ಗಿಕವಾಗಿ ಬೆಳೆಯುವ ಈ ಹೂವು ಆಫ್ರಿಕಾ ಮೂಲದ್ದಾಗಿರುವ ಕಾರಣಕ್ಕೆ ಇದನ್ನು ಆಫ್ರಿಕನ್ ರೋಸ್ಮೆಲ್ಲೋ ಎಂದು ಗುರುತಿಸಲಾಗಿದೆ. ಹೂವು, ಎಲೆ, ಕಾಂಡ ಎಲ್ಲವೂ ಕೆಂಪು ಮಿಶ್ರಿತ ಕಡು ಕಂದು ಬಣ್ಣದ್ದಾಗಿರುವ ಈ ಹೂವು ಬೆಳಗ್ಗೆ 9 ಗಂಟೆಯ ಬಳಿಕವೇ ಅರಳುತ್ತೆ.
ಸಾಮಾನ್ಯವಾಗಿ ಬಹುತೇಕ ಎಲ್ಲಾ ಹೂವುಗಳು ಸೂರ್ಯನ ಕಿರಣ ಸೋಕಿದ ತಕ್ಷಣವೇ ಮೊಗ್ಗು ಅರಳಿ ಹೂವಾದರೆ, ಈ ಗಿಡದ ಹೂಗಳು 9 ಗಂಟೆಯ ಪ್ರಖರ ಸೂರ್ಯ ರಶ್ಮಿ ಸೋಕಿದಾಗಲೇ ಅರಳೋದು ಇದರ ಸ್ಪೆಷಾಲಿಟಿಯಾಗಿದೆ. ಕರಾವಳಿಯ ಕೆಲವು ಭಾಗದ ಜನರಿಗೆ ಈ ಹೂವಿನ ಪರಿಚಯವಿದ್ದು, ಹೆಸರು ಮಾತ್ರ ಗೊತ್ತಿಲ್ಲ. ಇನ್ನು ಕೆಲವು ಕಡೆ ಗ್ರಾಮೀಣ ಭಾಗದ ಜನ ಈ ಹೂವನ್ನ ಆಫೀಸ್ ಹೂ ಅಂತಲೂ ಕರೆಯುತ್ತಾರೆ. ಅಲಂಕಾರಿಕ ಶೈಲಿಯಲ್ಲಿ ಇರುವ ಈ ಹೂ ಮತ್ತು ಗಿಡದ ವೈಶಿಷ್ಟ್ಯದಿಂದಲೇ ಈ ಹೆಸರಿನಲ್ಲಿ ಜನ ಗುರುತಿಸುತ್ತಿದ್ದಾರೆ ಎನ್ನಬಹುದಾಗಿದೆ.
Dakshina Kannada,Karnataka
October 12, 2025 9:11 AM IST