ದೂರದ ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಬೆಳೆಯುವ ವಿಶೇಷ ಸುಗಂಧದ್ರವ್ಯದ ಮರಗಳು ಈಗ ಕರ್ನಾಟಕದ ಕೃಷಿಕರ ಪಾಲಿಗೂ ಲಾಭದಾಯಕವಾಗಿ ಬದಲಾಗುತ್ತಿದೆ. ಯಾವ ರೀತಿ ಕರ್ನಾಟಕದಲ್ಲಿ ಶ್ರೀಗಂಧ, ಆಂಧ್ರಪ್ರದೇಶದಲ್ಲಿ ರಕ್ತಚಂದನ ನೈಸರ್ಗಿಕವಾಗಿ ಬೆಳೆಯುತ್ತದೆಯೋ, ಅದೇ ರೀತಿ ಅಸ್ಸಾಂನಲ್ಲಿ ಅಗರ್ವುಡ್ ಮರಗಳು ಬೆಳೆಯುತ್ತವೆ. ಅಸ್ಸಾಂನಲ್ಲಿ ನೈಸರ್ಗಿಕವಾಗಿ ಸುಗಂಧದ್ರವ್ಯ ಉತ್ಪಾದಿಸುತ್ತಿದ್ದ ಅಗರ್ವುಡ್ ಮರಗಳನ್ನು ಈಗ ಕರ್ನಾಟಕದ ಹಲವೆಡೆ ಬೆಳೆಯಲಾಗುತ್ತಿದೆ.
ಸುಗಂಧ ದ್ರವ್ಯ ಉತ್ಪಾದನೆಗೆ ಅಗತ್ಯ ಅಂಶಗಳ ಇಂಜೆಕ್ಟ್
ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಈ ಮರಗಳಿಗೆ ಸುಗಂಧ ದ್ರವ್ಯ ಉತ್ಪಾದಿಸಲು ಬೇಕಾದ ಅಂಶಗಳನ್ನು ಬಾಹ್ಯವಾಗಿ ಇಂಜೆಕ್ಟ್ ಮಾಡಲಾಗುತ್ತದೆ. ಮರ ನೆಟ್ಟು 8 ವರ್ಷಗಳಾದ ಬಳಿಕ ಈ ಅಂಶಗಳನ್ನು ಮರದ ಬುಡದಿಂದ ಹಿಡಿದು ಮೇಲ್ಭಾಗದವರೆಗೂ ಇಂಜೆಕ್ಟ್ ಮಾಡುತ್ತಾರೆ. ಬಳಿಕ ಈ ಅಂಶಗಳು ಮರಕ್ಕೆ ಅಂಟಿಕೊಂಡು ಇಡೀ ಮರವೇ ಸುಗಂಧ ದ್ರವ್ಯದ ಗಣಿಯಾಗಿ ಬದಲಾಗುತ್ತದೆ. ಮರಗಳಿಗೆ ಈ ಅಂಶವನ್ನು ಇಂಜೆಕ್ಟ್ ಮಾಡಿದ ಮೇಲೆ ಕನಿಷ್ಠ ಮೂರು ವರ್ಷಗಳವರೆಗೆ ಬಿಡಬೇಕು. ಆಗಷ್ಟೇ ಈ ಮರಗಳಲ್ಲಿ ಸುಗಂಧ ದ್ರವ್ಯದ ಅಂಶಗಳು ಸೇರಿಕೊಂಡು ಕಟಾವಿಗೆ ಸಿದ್ಧಗೊಳ್ಳುತ್ತದೆ.
ನೈಸರ್ಗಿಕ ಸುಗಂಧ ದ್ರವ್ಯಗಳಿಗಿದೆ ಭಾರೀ ಬೇಡಿಕೆ
ಮರಗಳಲ್ಲಿ ಪೊಟರೆಯಾಕಾರದಲ್ಲಿ ಈ ಸುಗಂಧ ದ್ರವ್ಯಗಳು ಸಿಗುತ್ತಿದ್ದು ಅದರಿಂದ ಅಗರ್ ಬತ್ತಿ, ಸುಗಂಧ ಲೇಪನ, ಸುಗಂಧ ತೈಲಗಳನ್ನು ತಯಾರಿಸಲಾಗುತ್ತಿದೆ. ಹಲವು ದೇಶಗಳಲ್ಲಿ ನೈಸರ್ಗಿಕವಾಗಿ ತಯಾರಾಗುವ ಸುಗಂಧ ದ್ರವ್ಯಗಳಿಗೆ ಭಾರೀ ಬೇಡಿಕೆಯಿದೆ. ಆದ್ದರಿಂದ ಈ ಮರಗಳ ಕಟಾವಿನ ಬಳಿಕ ಉತ್ತಮ ಗುಣಮಟ್ಟದ ಅಗರ್ವುಡ್ ಸೇರಿದಂತೆ ಮರದ ಎಲ್ಲಾ ಭಾಗಗಳಿಗೂ ಬೇಡಿಕೆಯಿದೆ.
ಇದನ್ನೂ ಓದಿ: Antaragange Hills: ಮಲೆನಾಡಿನಂತಾಗಿದೆ ಕೋಲಾರದ ಅಂತರಗಂಗೆ ಬೆಟ್ಟ! ಪ್ರವಾಸಿಗರನ್ನು ಕೈಬೀಸಿ ಕರೀತಿದೆ
ಪ್ರತಿ ಕಿಲೋಗೆ 40 ಸಾವಿರ ರೂಪಾಯಿ
ಗುಣಮಟ್ಟದ ಅಗರ್ವುಡ್ಗೆ ಪ್ರತಿ ಕಿಲೋಗೆ 40 ಸಾವಿರ ರೂಪಾಯಿ ಬೆಲೆ ಇದೆ. ಇನ್ನು ಕೊಂಚ ಕಡಿಮೆ ಗುಣಮಟ್ಟದ ಅಗರ್ವುಡ್ಗೆ ಪ್ರತಿ ಕಿಲೋಗೆ 25ರಿಂದ 30 ಸಾವಿರ ರೂಪಾಯಿ ಸಿಗುತ್ತದೆ. ಅದೇ ರೀತಿ ಅಗರ್ವುಡ್ ತೆಗೆದ ಬಳಿಕ ಉಳಿಯುವ ಮರದ ತುಂಡುಗಳು, ಪೌಡರ್ ಗೆ ಪ್ರತ್ಯೇಕ ದರ ಸಿಗುತ್ತದೆ.
ಕರ್ನಾಟಕದಲ್ಲಿ ವನದುರ್ಗ ಎನ್ನುವ ಸಂಸ್ಥೆಯ ಮೂಲಕ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಅಗರ್ವುಡ್ ಮರಗಳನ್ನು ಬೆಳೆಸಲಾಗುತ್ತಿದೆ. ಸುಮಾರು 10 ಸಾವಿರ ಕೃಷಿಕರು ಇದರಲ್ಲಿ ತೊಡಗಿದ್ದು, ಒಟ್ಟು 15 ಲಕ್ಷ ಮರಗಳನ್ನು ಬೆಳೆಯಲಾಗುತ್ತಿದೆ. ಕೃಷಿಕ ತಾನು ಬೆಳೆದ ಅಗರ್ವುಡ್ ಅನ್ನು ತಾನೇ ಸಂಸ್ಕರಿಸಲಿ ಎನ್ನುವ ಕಾರಣಕ್ಕೆ ವನದುರ್ಗ ಸಂಸ್ಥೆ, ಕೃಷಿಕರಿಗೆ ಅಗರ್ವುಡ್ ಸಂಸ್ಕರಿಸುವ ತರಬೇತಿಯನ್ನೂ ನೀಡಿದೆ.
(ಇದು ವ್ಯಾಪಾರ ಪರಿಕಲ್ಪನೆಯಾಗಿದ್ದು, ಮಾಹಿತಿ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ. ನ್ಯೂಸ್ 18 ಈ ಕುರಿತು ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ)
Dakshina Kannada,Karnataka
October 24, 2024 10:32 AM IST