Last Updated:
ಮಂಗಳೂರು ಸಜೀಪ ಮೂಡದಲ್ಲಿ 15 ವರ್ಷ ಪಾಳು ಬಿದ್ದ 10 ಎಕರೆ ಗದ್ದೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನೇತೃತ್ವದಲ್ಲಿ ನೇಜಿ ನಾಟಿ ಕಾರ್ಯಕ್ರಮ ನಡೆಯಿತು, ಶಾಲಾ ಮಕ್ಕಳು ಭಾಗವಹಿಸಿದರು.
ಮಂಗಳೂರು: ಇಡೀ ಕರಾವಳಿ ಕರ್ನಾಟಕದಲ್ಲಿ (Coastal Karnataka) ಮೊದಲು ಭತ್ತದ ಹಂಗಾಮು ಎಷ್ಟು ಜೋರಾಗಿರುತ್ತಿತ್ತೆಂದರೆ ಇಡೀ ನಾಡಿಗೆ ಅನ್ನದ ಬಟ್ಟಲಾಗುವಷ್ಟು (Rice Bowl) ಭತ್ತ ಇಲ್ಲಿ ಬೆಳೆಯಲ್ಪಡುತ್ತಿತ್ತು. ಕಾಲಾಂತರದಲ್ಲಿ ಆದ ಅಡಿಕೆ ಆರ್ಭಟದಿಂದ ಹಾಗೂ ವಲಸೆಯಿಂದ (Migration) ಕರಾವಳಿಯ ಭೂಮಿ ಭತ್ತದ ಕೃಷಿಯಿಂದ ಬಹುಪಾಲು ವಿಮುಖವಾಯಿತು. ಗದ್ದೆಗಳು (Paddy Field) ತೋಟಗಳಾದವು, ರಿಯಲ್ ಎಸ್ಟೇಟ್ ಜಾಗಗಳಾದವು, ಬಂಜರು ಭೂಮಿಯೂ ಆದವು!
ಹದಿನೈದು ವರ್ಷದಿಂದ ಹಡೀಲು (ಪಾಳು) ಬಿದ್ದಿದ್ದ 10 ಎಕರೆ ಗದ್ದೆಯಲ್ಲಿ ನೇಜಿ (ಸಸಿ) ನಾಟಿ ನಡೆಸುವ ಕಾರ್ಯಕ್ರಮ ಸಜೀಪ ಮೂಡ ಗ್ರಾಮದ ಕಾಂತಾಡಿಯಲ್ಲಿ ನಡೆಯಿತು. ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಸ್ಥಾಪಕಾಧ್ಯಕ್ಷ, ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಪ್ರಗತಿಪರ ಕೃಷಿಕ ದಿವಂಗತ ಬಿ. ಸದಾನಂದ ಪೂಂಜ ಇವರ ಪುತ್ರ ಗ್ರಾ. ಪಂ. ಮಾಜಿ ಅಧ್ಯಕ್ಷ ಶೋಭಿತ್ ಪೂಂಜ ನೇತೃತ್ವದಲ್ಲಿ, ಮತ್ತು ಸಜೀಪ ದಸರಾ 2026 ಶತಮಾನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.
ಬೆಲೆ ಏರಿಕೆ ನಡುವೆಯೂ ವಿವಿಧ ರೋಗ ಭಾದೆಯಿಂದ ಕಳೆಗುಂದುತ್ತಿರುವ ಅಡಿಕೆ ಬೆಳೆಗೆ ಪರ್ಯಾಯವಾಗಿ ಮರೆಯಾಗುತ್ತಿರುವ ಭತ್ತ ಬೇಸಾಯದತ್ತ ಇವರು ಚಿತ್ತ ಹರಿಸಿದ್ದು, ನೇಜಿ (ಸಸಿ) ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಮಕ್ಕಳ ಸಾಥ್, ಗದ್ದೆಗಿಳಿದು ನಾಟಿ ಮಾಡಿದ ಗ್ರಾಮಸ್ಥರು
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಿ.ಪ್ರಾ. ಶಾಲೆ ವಿದ್ಯಾರ್ಥಿಗಳು ಕೂಡಾ ಭಾಗವಹಿಸಿದ್ದರು. ಸಜೀಪ ಮಾಗಣೆಯ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಹಾಗೂ ಸುಭಾಷ್ ಯುವಕ ಮಂಡಲ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ ಹಾಗೂ ಪ್ರಗತಿಪರ ಕೃಷಿಕ ಅವಿಲ್ ಮಿನೇಜಸ್ ಮತ್ತು ಶ್ರೀದೇವಿ ಪ್ರಸಾದ್ ಪೂಂಜ ಚಾಲನೆ ನೀಡಿದರು. ಸಜೀಪಮೂಡ ಶಾಲೆಯ ಮಕ್ಕಳೂ ಕೂಡ ಈ ಸಂದರ್ಭ ಕಾರ್ಯಕ್ರಮದಲ್ಲಿ ಗದ್ದೆಗಿಳಿದು ನೇಜಿ ನಾಟಿ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದಾರೆ.
Dakshina Kannada,Karnataka
December 11, 2025 10:52 AM IST