Last Updated:
ಅಜಿತಪ್ರಸಾದ್ ರೈ ಪುತ್ತೂರಿನ ದಾರಂದಕುಕ್ಕು ಪ್ರದೇಶದಲ್ಲಿ 20 ಎಕರೆ ಕೃಷಿಭೂಮಿಯಲ್ಲಿ ಅಡಿಕೆ ಜೊತೆಗೆ ರೊಬಸ್ಟಾ ಮತ್ತು ಅರೆಬಿಕಾ ಕಾಫಿ ಬೆಳೆಯುತ್ತಿದ್ದಾರೆ. ಕಾಫಿಗೆ ಉತ್ತಮ ಇಳುವರಿ ನಿರೀಕ್ಷೆ.
ದಕ್ಷಿಣ ಕನ್ನಡ: ಕರಾವಳಿ (Coastal) ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದೆಡೆ ಹವಾಮಾನ ವೈಪರೀತ್ಯದಿಂದ ಕುಸಿಯುತ್ತಿರುವ ಇಳುವರಿ, ಇನ್ನೊಂದೆಡೆ ಮಾರುಕಟ್ಟೆ ಅಸ್ಥಿರತೆ ಅಡಿಕೆ ಬೆಳೆಯ (Crop) ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿಸುವಂತೆ ಮಾಡಿದೆ.
ಅಡಿಕೆಯೊಂದನ್ನೇ ನೆಚ್ಚಿಕೊಂಡು ಜೀವನ ಸಾಗಿಸಲು ಸಾಧ್ಯವಿಲ್ಲ ಎಂದು ಕಂಡುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಅಡಿಕೆಯೊಂದಿಗೆ ಇತರ ಉಪಬೆಳೆಗಳ ಬಗ್ಗೆಯೂ ಗಮನ ಕೇಂದ್ರೀಕರಿಸಿದ್ದಾರೆ. ಪುತ್ತೂರಿನ ದಾರಂದಕುಕ್ಕು ಎನ್ನುವ ಪ್ರದೇಶದ ಅಜಿತಪ್ರಸಾದ್ ರೈ ಎನ್ನುವ ಕೃಷಿಕ ಕಾಫಿ ಬೆಳೆಯನ್ನು ತಮ್ಮ ಕೃಷಿ ತೋಟದಲ್ಲಿ ಬೆಳೆಯುವ ಮೂಲಕ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಪ್ರಗತಿಪರ ಕೃಷಿಕರಾಗಿರುವ ಅಜಿತಪ್ರಸಾದ್ ರೈಗೆ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಿದ್ದು, ಕೃಷಿಯಲ್ಲೇ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸುಮಾರು 20 ಎಕರೆ ಕೃಷಿಭೂಮಿಯನ್ನು ಹೊಂದಿರುವ ಇವರಿಗೆ ಅಡಿಕೆಯೇ ಪ್ರಮುಖ ವಾಣಿಜ್ಯ ಬೆಳೆ. ಆದರೆ ಅಡಿಕೆಯೊಂದನ್ನೇ ನಂಬಿ ಬದುಕೋದು ಕಷ್ಟ ಎಂದು ಅರಿತುಕೊಂಡಿದ್ದ ಅಜಿತಪ್ರಸಾದ್ ಕಳೆದ ಮೂರು ವರ್ಷದ ಹಿಂದೆ ಕಾಫಿ ಬೆಳೆಯನ್ನು ತನ್ನ ತೋಟಕ್ಕೆ ಪರಿಚಯಿಸಿದ್ದಾರೆ.
ಕೊಡಗು ಮತ್ತು ಚಿಕ್ಕಮಗಳೂರಿನಂತಹ ತಂಪು ವಾತಾವರಣದ ಪ್ರದೇಶದಲ್ಲಿ ಬೆಳೆಯುವ ಕಾಫಿ, 47 ಸೆಲ್ಸಿಯಸ್ ಗೂ ಮಿಕ್ಕಿದ ಉಷ್ಣಾಂಶ ದಾಖಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಎಷ್ಟು ಸೂಕ್ತ ಎನ್ನುವ ಜಿಜ್ಞಾಸೆಯ ನಡುವೆಯೂ, ಕಾಫಿ ಬೆಳೆಯ ಬಗ್ಗೆ ಬೇಕಾದಷ್ಟು ಅಧ್ಯಯನ ನಡೆಸಿ ಕೊನೆಗೆ ಕಾಫಿಯ ಗಿಡಗಳನ್ನು ತೋಟದಲ್ಲಿ ನಾಟಿ ಮಾಡಿದ್ದಾರೆ. ಮೊದಲಿಗೆ ಕೊಂಚ ಸಮಸ್ಯೆಯಾದರೂ, ಆ ಬಳಿಕ ಹಾಕಿದ ಕಾಫಿ ಗಿಡಗಳು ಇಂದು ಹುಲುಸಾಗಿ ಬೆಳೆದು ನಿಂತಿವೆ. ಎರಡು ವರ್ಷದ ಹಿಂದೆ ನೆಟ್ಟ ಕಾಫಿ ಸಸಿಗಳಲ್ಲಿ ಹೂ ಬಿಟ್ಟು ಕಾಫಿ ಬೀಜಗಳೂ ಮೊಳಕೆಯೊಡೆಯಲಾರಂಭಿಸಿವೆ.
ಸುಮಾರು 3 ಸಾವಿರದಷ್ಟು ಕಾಫಿ ಗಿಡಗಳನ್ನು ಬೆಳೆಯುತ್ತಿರುವ ಅಜಿತಪ್ರಸಾದ್ ಗಿಡಕ್ಕೆ ಬೇಕಾದ ಎಲ್ಲಾ ಗೊಬ್ಬರ ಮತ್ತು ನೀರನ್ನು ಕಾಲಕಾಲಕ್ಕೆ ಕೊಡುತ್ತಿದ್ದಾರೆ. ದಕ್ಷಿಣ ಕನ್ನಡದಂತಹ ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಫಿ ಬೆಳೆಗೆ ನಿರಂತರ ನೀರು ಉಣಿಸಿದರಷ್ಟೇ ಕಾಫಿ ಇಳುವರಿಯನ್ನು ಪಡೆಯಲು ಸಾಧ್ಯ ಎನ್ನುವುದನ್ನು ಮನಗಂಡಿದ್ದಾರೆ.
ಕೊಡಗು, ಚಿಕ್ಕಮಗಳೂರಿನಲ್ಲಿ ಬೆಳೆಯುವ ಕಾಫಿಯಷ್ಟೇ ಉತ್ಕೃಷ್ಟ ಗುಣಮಟ್ಟದ ಕಾಫಿಯನ್ನು ಜಿಲ್ಲೆಯಲ್ಲೂ ಬೆಳೆಯಬಹುದು ಅನ್ನೋದನ್ನ ಅಜಿತಪ್ರಸಾದ್ ತೋರಿಸಿಕೊಟ್ಟಿದ್ದಾರೆ. ರೊಬಸ್ಟಾ ಮತ್ತು ಅರೆಬಿಕಾ ಎನ್ನುವ ಎರಡು ವೆರೈಟಿಯ ಕಾಫಿಗಳನ್ನು ಇವರು ತಮ್ಮ ಕೃಷಿ ತೋಟದಲ್ಲಿ ಬೆಳೆಯುತ್ತಿದ್ದಾರೆ. ನಾಟಿ ಮಾಡಿದ ಎರಡೇ ವರ್ಷದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಮುಂದಿನ ವರ್ಷದಲ್ಲಿ ಕಾಫಿಯ ಬೀಜಗಳನ್ನು ಕೊಯ್ಲು ಮಾಡುವ ನಿರೀಕ್ಷೆಯಲ್ಲೂ ಇದ್ದಾರೆ. ಕಳೆದ ಬಾರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಾಫಿ ಹೂಗಳು ಉದುರಿದ ಹಿನ್ನೆಲೆಯಲ್ಲಿ ಆ ವರ್ಷ ಬೆಳೆ ಹಾಳಾಗಿದ್ದು, ಈ ಬಾರಿ ಇಳುವರಿ ಬರುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ.
ಅಜಿತಪ್ರಸಾದರ ಹಿರಿಯರ ಕಾಲದಿಂದಲೂ ಕಾಫಿ ಗಿಡಗಳು ಬೆಳೆಯುತ್ತಿರುವುದನ್ನು ಕಂಡ ಹಿನ್ನೆಲೆಯಲ್ಲಿ ಇವರು ತಮ್ಮ ತೋಟದಲ್ಲಿ ಕಾಫಿ ಗಿಡ ನಾಟಿ ಮಾಡಿದ್ದಾರೆ. ಎರಡು ಕಾಫಿ ಗಿಡಗಳನ್ನು ಮನೆಯ ಎದುರುಗಡೆಯೇ ನೆಟ್ಟಿದ್ದು, ಜಿಲ್ಲೆಯಲ್ಲಿಯೂ ಕಾಫಿ ಉತ್ತಮ ರೀತಿಯಲ್ಲಿ ಫಸಲು ನೀಡಬಲ್ಲದು ಎನ್ನುವ ಪ್ರಾತ್ಯಕ್ಷಿಕವಾಗಿಯೂ ಈ ಗಿಡಗಳಿವೆ.
ನಾಲ್ಕು ಲಕ್ಷ ರೂಪಾಯಿ ಖರ್ಚು
ಕಾಫಿ ಗಿಡ ಒಂದಕ್ಕೆ 7 ರೂಪಾಯಿಗೆ ಸಿಗುತ್ತಿದ್ದು ಸುಮಾರು 4 ಲಕ್ಷ ರೂಪಾಯಿ ಖರ್ಚಾಗಿದೆ. ಭಾರಿ ಉಷ್ಣಾಂಶ ಇದ್ದರೆ ಮಾತ್ರ ಕಾಫಿ ಗಿಡಕ್ಕೆ ತೊಂದರೆ. ನೀರನ್ನು ಸರಿಯಾದ ಪ್ರಮಾಣದಲ್ಲಿ ಹಾಕಿದಲ್ಲಿ ಯಾವುದೇ ತೊಂದರೆಗಳಿಲ್ಲ. ಅಡಿಕೆ ಗಿಡ ಹಾಕಿ ಫಸಲಿಗೆ ಕನಿಷ್ಠ 4 ವರ್ಷ ಕಾಯಬೇಕು. ಆದರೆ ಕಾಫಿ ಗಿಡದಿಂದ ನಾಟಿ ಮಾಡಿದ 2 ವರ್ಷದಲ್ಲೇ ಬೆಳೆ ತೆಗೆಯಲು ಸಾಧ್ಯ. ಮತ್ತು ಕಾಫಿ ಬೋರ್ಡ್ ಕಾಫಿ ಬೆಲೆಯನ್ನು ಮಾರುಕಟ್ಟೆಯಲ್ಲಿ ಸ್ಥಿರ ಇರುವಂತೆ ಮಾಡುವುದರಿಂದ ಭದ್ರತೆಯ ದೃಷ್ಟಿಯಿಂದಲೂ ಉತ್ತಮ ಅಣ್ಣೆಯೋದು ಕೃಷಿಕರ ಅಭಿಪ್ರಾಯ.
Dakshina Kannada,Karnataka
December 14, 2025 6:18 PM IST