Amit Mishra Retirement: ಏಷ್ಯಾಕಪ್​ಗೂ ಮುನ್ನ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಭಾರತದ ಅನುಭವಿ ಸ್ಪಿನ್ನರ್ ವಿದಾಯ! | ಕ್ರೀಡೆ

Amit Mishra Retirement: ಏಷ್ಯಾಕಪ್​ಗೂ ಮುನ್ನ ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಭಾರತದ ಅನುಭವಿ ಸ್ಪಿನ್ನರ್ ವಿದಾಯ! | ಕ್ರೀಡೆ

Last Updated:


‘ನನ್ನ 25 ವರ್ಷಗಳ ಕ್ರಿಕೆಟ್ ವೃತ್ತಿಜೀವನ ಸ್ಮರಣೀಯವಾಗಿದೆ. ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್ ​​ಅಧಿಕಾರಿಗಳು, ಸಹಾಯಕ ಸಿಬ್ಬಂದಿ, ನನ್ನ ತಂಡದ ಸದಸ್ಯರು ಮತ್ತು ಕುಟುಂಬ ಸದಸ್ಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸ್ಪಿನ್ ಲೆಜೆಂಡ್ ತಿಳಿಸಿದ್ದಾರೆ.

ಅಮಿತ್  ಮಿಶ್ರಾಅಮಿತ್  ಮಿಶ್ರಾ
ಅಮಿತ್ ಮಿಶ್ರಾ

ಟೀಮ್ ಇಂಡಿಯಾದ ಅನುಭವಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (Amit Mishra) ಎಲ್ಲಾ ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ (Retirement) ಘೋಷಿಸಿದರು. ಗುರುವಾರ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದರು. 42 ವರ್ಷದ ಅಮಿತ್ ಮಿಶ್ರಾ ತಮ್ಮ 25 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು ಭಾರತಕ್ಕಾಗಿ ಕೇವಲ 22 ಟೆಸ್ಟ್, 36 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ, ಕ್ರಮವಾಗಿ 76, 64 ಮತ್ತು 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶಗಳನ್ನು ಒದಗಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎಂದು ಅವರು ಹೇಳಿದರು.

ಲೆಕ್ಕವಿಲ್ಲದಷ್ಟು ನೆನಪುಗಳೊಂದಿಗೆ ವಿದಾಯ

‘ನನ್ನ 25 ವರ್ಷಗಳ ಕ್ರಿಕೆಟ್ ವೃತ್ತಿಜೀವನ ಸ್ಮರಣೀಯವಾಗಿದೆ. ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್ ​​ಅಧಿಕಾರಿಗಳು, ಸಹಾಯಕ ಸಿಬ್ಬಂದಿ, ನನ್ನ ತಂಡದ ಸದಸ್ಯರು ಮತ್ತು ಕುಟುಂಬ ಸದಸ್ಯರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಎಲ್ಲಿ ಮತ್ತು ಯಾವಾಗ ಆಡಿದರೂ ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಯನ್ನು ತೋರಿಸಿದ ಅಭಿಮಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ನನ್ನ ಕ್ರಿಕೆಟ್ ಪ್ರಯಾಣವನ್ನು ಇನ್ನಷ್ಟು ಸ್ಮರಣೀಯವಾಗಿಸಿದ್ದಾರೆ. ಕ್ರಿಕೆಟ್ ನನಗೆ ಲೆಕ್ಕವಿಲ್ಲದಷ್ಟು ಪ್ರೀತಿಯ ನೆನಪುಗಳು ಮತ್ತು ಅಮೂಲ್ಯ ಪಾಠಗಳನ್ನು ನೀಡಿದೆ. ನಾನು ಮೈದಾನದಲ್ಲಿ ಕಳೆದ ಪ್ರತಿ ಕ್ಷಣವೂ ನನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವ ಒಂದು ಅಚ್ಚುಮೆಚ್ಚಿನ ನೆನಪಾಗಿರಲಿದೆ ಎಂದು ಅಮಿತ್ ಮಿಶ್ರಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

2003ರಲ್ಲಿ ಪಾದಾರ್ಪಣೆ

ಅಮಿತ್ ಮಿಶ್ರಾ 2003 ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ತ್ರಿಕೋನ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2008 ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಅಮಿತ್ ಮಿಶ್ರಾ, 2010ರಲ್ಲಿ ಜಿಂಬಾಬ್ವೆ ವಿರುದ್ಧದ ತಮ್ಮ ಮೊದಲ ಟಿ 20 ಪಂದ್ಯವನ್ನು ಆಡಿದರು. ಅಮಿತ್ ಮಿಶ್ರಾ 2013ರಲ್ಲಿ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಜಾವಗಲ್ ಶ್ರೀನಾಥ್ ಅವರ 18 ವಿಕೆಟ್‌ಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಮಿಶ್ರಾ 2014 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದರು. ಭಾರತ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆಗಿ ಮುಗಿಸಿತ್ತು.

2017ರಲ್ಲಿ ಕೊನೆಯ ಪಂದ್ಯ

ಮಿಶ್ರಾ 2017 ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಮಿಶ್ರಾ, ತಮ್ಮ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದರು. ಅವರು 2024 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಈ ವರ್ಷ ಅವರು ಟೂರ್ನಮೆಂಟ್ ಮಿಸ್ ಮಾಡಿಕೊಂಡಿದ್ದರು. ಐಪಿಎಲ್‌ನಲ್ಲಿ 162 ಪಂದ್ಯಗಳನ್ನು ಆಡಿದ ಮಿಶ್ರಾ, 23.82 ಸರಾಸರಿ ಮತ್ತು 7.37 ರ ಎಕಾನಮಿಯಲ್ಲಿ 174 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅವರು ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಮೂರು ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಎಂಬ ದಾಖಲೆ ಕೂಡ ಮಿಶ್ರಾ ಅವರ ಹೆಸರಿನಲ್ಲಿದೆ.

ಕೋಚ್, ಕಾಮೆಂಟೇಟರ್ ಆಗಿ ಸಕ್ರಿಯ

2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಮೊದಲ ಹ್ಯಾಟ್ರಿಕ್ ಪಡೆದ ಅಮಿತ್ ಮಿಶ್ರಾ, 2011 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮತ್ತು 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಹ್ಯಾಟ್ರಿಕ್ ಪಡೆದರು. ಅಮಿತ್ ಮಿಶ್ರಾ ಕೋಚ್ ಮತ್ತು ಕಾಮೆಂಟೇಟರ್ ಆಗಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ಆಶಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರೊಂದಿಗೆ ಸಂಪರ್ಕದಲ್ಲಿರಲು ಅವರು ನಿರ್ಧರಿಸಿದ್ದಾರೆ.