Asia Cup: ಅಫ್ಘಾನಿಸ್ತಾನಕ್ಕೆ ಆಘಾತ ನೀಡಿದ ಶ್ರೀಲಂಕಾ! ತಮ್ಮ ಜೊತೆಗೆ ಬಾಂಗ್ಲಾದೇಶವನ್ನು ಸೂಪರ್​ 4ಗೆ ಕರೆದೊಯ್ದ ಸಿಂಹಳೀಯರು | ಕ್ರೀಡೆ

Asia Cup: ಅಫ್ಘಾನಿಸ್ತಾನಕ್ಕೆ ಆಘಾತ ನೀಡಿದ ಶ್ರೀಲಂಕಾ! ತಮ್ಮ ಜೊತೆಗೆ ಬಾಂಗ್ಲಾದೇಶವನ್ನು ಸೂಪರ್​ 4ಗೆ ಕರೆದೊಯ್ದ ಸಿಂಹಳೀಯರು | ಕ್ರೀಡೆ

Last Updated:

ಅಫ್ಘಾನಿಸ್ತಾನ ನೀಡಿದ್ದ 170 ರನ್​ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಇನ್ನು 8 ಎಸೆತಗಳಿರುವಂತೆ ಗುರಿ ತಲುಪಿತು. ಈ ಮೂಲಕ ಅಗ್ರ ತಂಡವಾಗಿ ಸೂಪರ್ 4 ಹಂತಕ್ಕೆ ತೇರ್ಗಡೆಯಾಯಿತು.

ಶ್ರೀಲಂಕಾ ತಂಡಶ್ರೀಲಂಕಾ ತಂಡ
ಶ್ರೀಲಂಕಾ ತಂಡ

ಕುಸಾಲ್ ಮೆಂಡಿಸ್ (Kusal Mendis)​ ಸಿಡಿಸಿದ ಅರ್ಧಶತಕದ ನೆರವಿನಿಂದ ಶ್ರೀಲಂಕಾ (Sri Lanka) ತಂಡ 2025ರ ಏಷ್ಯಾಕಪ್​​ನಲ್ಲಿ ಗರಿಷ್ಠ ಮೊತ್ತವನ್ನ ಯಶಸ್ವಿಯಾಗಿ ಚೇಸ್ ಮಾಡಿ ಸೂಪರ್​ 4ಗೆ ಅಜೇಯವಾಗಿ ಅರ್ಹತೆ ಪಡೆದುಕೊಂಡಿದೆ. ಅಫ್ಘಾನಿಸ್ತಾನ ನೀಡಿದ್ದ 170 ರನ್​ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಇನ್ನು 8 ಎಸೆತಗಳಿರುವಂತೆ ಗುರಿ ತಲುಪಿತು.

ಅಫ್ಘಾನಿಸ್ತಾನ ನೀಡಿದ್ದ 170ರನ್​ಗಳ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 22 ರನ್​ಗಳಾಗುವಷ್ಟರಲ್ಲಿ ಇನ್​ಫಾರ್ಮ್​ ಬ್ಯಾಟರ್​ ಪಾತುಮ್ ನಿಸ್ಸಾಂಕ(6) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಕಮಿಲ್ ಮಿಶಾರ 10 ಎಸೆತಗಳಲ್ಲಿ ಕೇವಲ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ 3ನೇ ವಿಕೆಟ್​ಗೆ ಜೊತೆಯಾದ ಕುಸಾಲ್ ಮೆಂಡಿಸ್ ಹಾಗೂ ಕುಸಾಲ್ ಪೆರೆರಾ 46 ರನ್​ಗಳ ಜೊತೆಯಾಟ ನಡೆಸಿ ಶ್ರೀಲಂಕಾ ತಂಡ ಪಂದ್ಯಕ್ಕೆ ಕಮ್​ಬ್ಯಾಕ್ ಮಾಡುವಂತೆ ಮಾಡಿದರು. ಕುಸಾಲ್ ಪರೆರಾ 20 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್​ಗಳಿಸಿ ಮುಜೀಬ್​​ ಉರ್ ರೆಹಮಾನ್​ ಬೌಲಿಂಗ್​​ನಲ್ಲಿ ಔಟ್ ಆದರು.

ನಂತರ ಬಂದ ನಾಯಕ ಅಸಲಂಕಾ ಕುಸಾಲ್ ಮೆಂಡಿಸ್​ ಜೊತೆಗೂಡಿ 4ನೇ ವಿಕೆಟ್ ಜೊತೆಯಾಟದಲ್ಲಿ 27 ರನ್​ ಸೇರಿಸಿದರು. ಅಸಲಂಕಾ 12 ಎಸೆತಗಳಲ್ಲಿ 17 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. 5ನೇ ವಿಕೆಟ್​ಗೆ ಕುಸಾಲ್​ ಮೆಂಡಿಸ್​ ಜೊತೆಯಾದ ಕಮಿಂದು ಮೆಂಡಿಸ್ ಕೇವಲ 23 ಎಸೆತಗಳಲ್ಲಿ 52 ರನ್​ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಕುಸಾಲ್ 52 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ ಅಜೇಯ 74 ರನ್​ಗಳಿಸಿದರೆ, ಕಮಿಂದು ಮೆಂಡಿಸ್​ 13 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 26 ರನ್​ಗಳಿಸಿ ಗೆಲುವಿನ ರೂವಾರಿಯಾದರು.​

ಈ ಗೆಲುವಿನೊಂದಿಗೆ ಶ್ರೀಲಂಕಾ ಗುಂಪು ಹಂತದಲ್ಲಿ ಎಲ್ಲಾ 3 ಪಂದ್ಯಗಳನ್ನ ಗೆದ್ದು ಸೂಪರ್​ 4 ಹಂತಕ್ಕೆ ಪ್ರವೇಶಿಸಿದರೆ, ಅಫ್ಘಾನಿಸ್ತಾನ 3ರಲ್ಲಿ ಕೇವಲ 1 ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿತು.

ಅಫ್ಘಾನಿಸ್ತಾನದ ಪರ ನೂರ್ ಅಹ್ಮದ್ 37ಕ್ಕೆ1, ಮುಜೀಬ್ 42ಕ್ಕೆ1, ಮೊಹಮ್ಮದ್ ನಬಿ 20ಕ್ಕೆ1 ವಿಕೆಟ್ ಪಡೆದರು. ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನ್ ಬೌಲರ್​ಗಳು ಉತ್ತಮ ಬೌಲಿಂಗ್ ಪ್ರದರ್ಶನ ತೋರಲಿಲ್ಲ. ರಶೀದ್ 4 ಓವರ್​ಗಳಲ್ಲಿ ಕೇವಲ 23 ರನ್​ ನೀಡಿದರಾದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್ ನಿರ್ಧಾರಕ್ಕೆ ತಕ್ಕಂತೆ ಬ್ಯಾಟ್ ಮಾಡಲು ವಿಫಲವಾಯಿತು. ಮೊದಲ 2 ಓವರ್​ಗೆ 26 ರನ್​ ಸಿಡಿಸಿದ ಅಫ್ಘಾನ್ ಆ ನಂತರ ಲಂಕಾ ಬೌಲರ್​ಗಳ ದಾಳಿಗೆ ಸಿಲುಕಿ ಪವರ್​ ಪ್ಲೇ ಒಳಗೆ 3 ವಿಕೆಟ್ ಕಳೆದುಕೊಂಡಿತು. ರಹ್ಮಾನುಲ್ಲಾ ಗುರ್ಬಜ್ (14) ಕರಿಮ್ ಜನತ್ (1), ಸೆದಿಕುಲ್ಲಾ ಅಟಲ್ (18) ವಿಕೆಟ್ ಕಳೆದುಕೊಂಡಿತು. ಆ

ನಂತರ ಜೊತೆಯಾದ ಇಬ್ರಾಹಿಂ ಜದ್ರಾನ್ ಹಾಗೂ ದರ್ವೀಸ್ ರಸೂಲಿ ರನ್​ಗಳಿಸಲು ಎಣಗಾಡಿದರು. ಇವರಿಬ್ಬರು 34 ಎಸೆತಗಳಲ್ಲಿ ಕೇವಲ24 ರನ್​ಗಳಿಸಿದರು. ರಸೂಲಿ 16 ಎಸೆತಗಳಲ್ಲಿ 9 ರನ್​ಗಳಿಸಿ ಚಮೀರಾ ಬೌಲಿಂಗ್​​ನಲ್ಲಿ ಕುಸಾಲ್ ಪೆರೆರಾ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರೆ, ಇಬ್ರಾಹಿಂ ಜದ್ರಾನ್ ವೆಲ್ಲಲಗೆ ಬೌಲಿಂಗ್​​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಚಮೀರಾಗೆ ಕ್ಯಾಚ್ ನೀಡಿ ಔಟ್ ಆದರು. ಜದ್ರಾನ್ 27 ಎಸೆತಗಳನ್ನಾಡಿ ಕೇವಲ 1 ಸಿಕ್ಸರ್ ಸಹಿತ 24 ರನ್​ಗಳಿಸಿದರು. ಆ ನಂತರ 6ನೇ ಕ್ರಮಾಂಕದಲ್ಲಿ ಬಂದ ಒಮರ್ಝಾಯ್ 4 ಎಸೆತಗಳಲ್ಲಿ 6 ರನ್​ ಸಿಡಿಸಿ ಔಟ್ ಆದರು.

ಅಫ್ಘಾನ್ ಒಂದು ಹಂತದಲ್ಲಿ 79ಕ್ಕೆ 6 ವಿಕೆಟ್ ಕಳೆದುಕೊಂಡು ನಿರೀಕ್ಷೆಗೂ ಮೀರಿ ಅಲ್ಪಮೊತ್ತಕ್ಕೆ ಆಲೌಟ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕ್ಯಾಪ್ಟನ್ ರಶೀದ್ ಖಾನ್ 23 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24, ಹಾಗೂ ಮೊಹಮ್ಮದ್ ನಬಿ 22 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 3 ಬೌಂಡರಿಗಳ ನೆರವಿನಿಂದ ಅಜೇಯ 60 ರನ್​ಗಳಿಸಿ ತಂಡದ ಮೊತ್ತವನ್ನ 169ಕ್ಕೆ ಏರಿಸಿದರು. ಕೊನೆಯ ಓವರ್​ನಲ್ಲಿ ವೆಲ್ಲಲಗೆ ಬೌಲಿಂಗ್​​ನಲ್ಲಿ ನಬಿ 5 ಸಿಕ್ಸರ್​ಗಳ ಸಹಿತ 32 ರನ್​ ಸೂರೆಗೈದರು.

ಶ್ರೀಲಂಕಾ ಪರ ನುವಾನ್ ತುಷಾರ 18ಕ್ಕೆ 4, ದುಷ್ಮಂತ ಚಮೀರಾ 50ಕ್ಕೆ1, ವೆಲ್ಲಲಗೆ 49ಕ್ಕೆ1, ದಾಸುನ್ ಶನಕ 29ಕ್ಕೆ1 ವಿಕೆಟ ಪಡೆದರು.