Last Updated:
ಮೊಹಮ್ಮದ್ ನಬಿ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 169ರನ್ಗಳ ಸವಾಲಿನ ಮೊತ್ತ ದಾಖಲಿಸಿದೆ. ಇದು ಈ ಆವೃತ್ತಿಯ ಏಷ್ಯಾಕಪ್ನಲ್ಲೇ ಗರಿಷ್ಠ ಮೊತ್ತವಾಗಿದೆ.
2025 ರ ಏಷ್ಯಾ ಕಪ್‌ನ ಗ್ರೂಪ್ ಬಿ ಯ ಅಂತಿಮ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 170 ರನ್ಗಳ ಸವಾಲಿನ ಗುರಿ ನೀಡಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್ ನಿರ್ಧಾರಕ್ಕೆ ತಕ್ಕಂತೆ ಬ್ಯಾಟ್ ಮಾಡಲು ವಿಫಲವಾಯಿತು. ಆದರೆ ಕೊನೆಯಲ್ಲಿ ಅಬ್ಬರಿಸಿದ ಅನುಭವಿ ಮೊಹಮ್ಮದ್ ನಬಿ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ಗಳಿಸಿತು. ನಬಿ ಕೊನೆಯ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಇದು ಈ ಏಷ್ಯಾಕಪ್ ಆವೃತ್ತಿಯಲ್ಲಿ ದಾಖಲಾದ ದೊಡ್ಡ ಮೊತ್ತವಾಗಿದೆ.
ಅಫ್ಘಾನ್ ತಂಡ 40 ರನ್ಗಳಾಗುವಷ್ಟರಲ್ಲಿ ರಹ್ಮಾನುಲ್ಲಾ ಗುರ್ಬಜ್ (14) ಕರಿಮ್ ಜನತ್ (1), ಸೆದಿಕುಲ್ಲಾ ಅಟಲ್ (18) ವಿಕೆಟ್ ಕಳೆದುಕೊಂಡಿತು. ಆ ನಂತರ ಜೊತೆಯಾದ ಇಬ್ರಾಹಿಂ ಜದ್ರಾನ್ ಹಾಗೂ ದರ್ವೀಸ್ ರಸೂಲಿ ರನ್ಗಳಿಸಲು ಎಣಗಾಡಿದರು. ಇವರಿಬ್ಬರು 34 ಎಸೆತಗಳಲ್ಲಿ ಕೇವಲ24 ರನ್ಗಳಿಸಿದರು. ರಸೂಲಿ 16 ಎಸೆತಗಳಲ್ಲಿ 9 ರನ್ಗಳಿಸಿ ಚಮೀರಾ ಬೌಲಿಂಗ್ನಲ್ಲಿ ಕುಸಾಲ್ ಪೆರೆರಾ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರೆ, ಇಬ್ರಾಹಿಂ ಜದ್ರಾನ್ ವೆಲ್ಲಲಗೆ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಚಮೀರಾಗೆ ಕ್ಯಾಚ್ ನೀಡಿ ಔಟ್ ಆದರು. ಜದ್ರಾನ್ 27 ಎಸೆತಗಳನ್ನಾಡಿ ಕೇವಲ 1 ಸಿಕ್ಸರ್ ಸಹಿತ 24 ರನ್ಗಳಿಸಿದರು. ಆ ನಂತರ 6ನೇ ಕ್ರಮಾಂಕದಲ್ಲಿ ಬಂದ ಒಮರ್ಝಾಯ್ 4 ಎಸೆತಗಳಲ್ಲಿ 6 ರನ್ ಸಿಡಿಸಿ ಔಟ್ ಆದರು.
ಅಫ್ಘಾನ್ ಒಂದು ಹಂತದಲ್ಲಿ 79ಕ್ಕೆ 6 ವಿಕೆಟ್ ಕಳೆದುಕೊಂಡು ನಿರೀಕ್ಷೆಗೂ ಮೀರಿ ಅಲ್ಪಮೊತ್ತಕ್ಕೆ ಆಲೌಟ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕ್ಯಾಪ್ಟನ್ ರಶೀದ್ ಖಾನ್ 23 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24, ಹಾಗೂ ಮೊಹಮ್ಮದ್ ನಬಿ 22 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಅಜೇಯ 60 ರನ್ಗಳಿಸಿ ತಂಡದ ಮೊತ್ತವನ್ನ 169ಕ್ಕೆ ಏರಿಸಿದರು. ಕೊನೆಯ ಓವರ್ನಲ್ಲಿ ವೆಲ್ಲಲಗೆ ಬೌಲಿಂಗ್ನಲ್ಲಿ ನಬಿ 5 ಸಿಕ್ಸರ್ಗಳ ಸಹಿತ 32 ರನ್ ಸೂರೆಗೈದರು.
ಶ್ರೀಲಂಕಾ ಪರ ನುವಾನ್ ತುಷಾರ 18ಕ್ಕೆ 4, ದುಷ್ಮಂತ ಚಮೀರಾ 50ಕ್ಕೆ1, ವೆಲ್ಲಲಗೆ 49ಕ್ಕೆ1, ದಾಸುನ್ ಶನಕ 29ಕ್ಕೆ1 ವಿಕೆಟ ಪಡೆದರು.
ಅಫ್ಘಾನಿಸ್ತಾನ: ಸೇದಿಕುಲ್ಲಾ ಅಟಲ್, ರಹಮಾನುಲ್ಲಾ ಗುರ್ಬಾಜ್ (ವಾಕ್), ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ದರ್ವಿಶ್ ರಸೂಲಿ, ಅಜ್ಮತುಲ್ಲಾ ಉಮರ್ಜಾಯ್, ಕರೀಂ ಜನತ್, ರಶೀದ್ ಖಾನ್ (ಸಿ), ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್ ಮತ್ತು ಫಜಲ್ಹಕ್ ಫಾರೂಕಿ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (WK), ಕಮಿಲ್ ಮಿಶ್ರಾ, ಕುಸಲ್ ಪೆರೆರಾ, ಚರಿತ್ ಅಸಲಂಕಾ (c), ದಸುನ್ ಶನಕ, ಕಮಿಂದು ಮೆಂಡಿಸ್, ವನಿಂದು ಹಸರಂಗ, ದುನಿತ್ ವೆಲಲಾಗೆ, ದುಷ್ಮಂತ ಚಮೀರ ಮತ್ತು ನುವಾನ್ ತುಷಾರ
September 18, 2025 9:54 PM IST