Last Updated:
ಆಲ್ರೌಂಡ್ ಪ್ರದರ್ಶನದಿಂದ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸುಲಭ ಜಯ ಸಾಧಿಸಿ ಸೂಪರ್ಗೆ ಎಂಟ್ರಿಕೊಟ್ಟಿದೆ.
ಪಾಕಿಸ್ತಾನದ ವಿರುದ್ಧ ಭಾರತ (India vs Pakistan) ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿ ಏಷ್ಯಾಕಪ್ನಲ್ಲಿ (Asia Cup) ಸತತ 2ನೇ ಜಯ ಸಾಧಿಸಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್ಗಳ ಪ್ರಾಬಲ್ಯಯುತ ಜಯ ಸಾಧಿಸಿದ ಟೀಮ್ ಇಂಡಿಯಾ ಸೂಪರ್ 4 ಖಚಿತಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 127 ರನ್ಗಳಿಸಿತ್ತು. 128 ರನ್ಗಳ ಸಾಧಾರಣ ಗುರಿಯನ್ನ ಭಾರತ ತಂಡ ಕೇವಲ 15.5 ಓವರ್ರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
128 ರನ್ಗಳ ಗುರಿಯನ್ನ ಬೆನ್ನಟ್ಟಿ ಭಾರತ ತಂಡಕ್ಕೆ 2ನೇ ಓವರ್ನಲ್ಲಿ ಆಘಾತ ಎದುರಾಯಿತು. ತಂಡ 22 ರನ್ಗಳಿಸುವಷ್ಟರಲ್ಲಿ ಉಪನಾಯಕ ಶುಭ್ಮನ್ ಗಿಲ್ ಕೇವಲ 10 (7 ಎಸೆತ) ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸೈಮ್ ಅಯೂಬ್ ಬೌಲಿಂಗ್ನಲ್ಲಿ ಸತತ 2 ಬೌಂಡರಿ ಸಿಡಿಸಿ ಸ್ಟಂಪ್ ಆದರು. ನಂತರ ಅಭಿಷೇಕ್ ಶರ್ಮಾ ಕೂಡ 4ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನೆದುರಿಸಿದ ಶರ್ಮಾ 4 ಬೌಂಡರಿ, 2 ಸಿಕ್ಸರ್ಗಳ ಸಹಿತ 31 ರನ್ಗಳಿಸಿ ಔಟ್ ಆದರು. ಇಬ್ಬರು ಸೈಮ್ ಅಯೂಬ್ಗೆ ವಿಕೆಟ್ ಒಪ್ಪಿಸಿದರು.
ನಂತರ 3ನೇ ವಿಕೆಟ್ಗೆ ಒಂದಾದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ವಿಕೆಟ್ ಉಳಿಸಲು ನಿಧಾನಗತಿ ಬ್ಯಾಟಿಂಗ್ ಮಾಡಿದರು. ಇವರಿಬ್ಬರು 3ನೇ ವಿಕೆಟ್ಗೆ 52 ಎಸೆತಗಳಲ್ಲಿ 56 ರನ್ಗಳ ಜೊತೆಯಾಟ ನಡೆಸಿದರು. ತಿಲಕ್ ವರ್ಮಾ 31 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 31 ರನ್ಗಳಿಸಿ ಸೈಮ್ ಅಯೂಬ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
5ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ನಾಯಕ ಸೂರ್ಯಕುಮಾರ್ ಯಾದವ್ ಜೊತೆ ಸೇರಿ 5ನೇ ವಿಕೆಟ್ಗೆ ಮುರಿಯದ 34 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಇನ್ನು 25 ಎಸೆತಗಳಿರುವಂತೆ ಗೆಲುವಿನ ಗಡಿ ದಾಟಿಸಿದರು. ಸೂರ್ಯಕುಮಾರ್ 37 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 47 ರನ್ಗಳಿಸಿದರೆ, ಶಿವಂ ದುಬೆ 7 ಎಸೆತಗಳಲ್ಲಿ ಅಜೇಯ 11 ರನ್ಗಳಿಸಿದರು.
ಪಾಕಿಸ್ತಾನದ ಪರ ಪಾರ್ಟ್ ಟೈಮ್ ಸ್ಪಿನ್ನರ್ ಸೈಮ್ ಅಯೂಬ್ 3 ವಿಕೆಟ್ ಪಡೆದು ಮಿಂಚಿದರು. ಇದು ಏಷ್ಯಾಕಪ್ ಟಿ20ಯಲ್ಲಿ ಭಾರತಕ್ಕೆ ಪಾಕಿಸ್ತಾನದ ವಿರುದ್ಧ ಸಿಕ್ಕಂತಹ 4ನೇ ಜಯವಾಗಿದೆ. 5 ಪಂದ್ಯಗಳ ಮುಖಾಮುಖಿಯಲ್ಲಿ ಪಾಕ್ ಕೇವಲ 1 ರಲ್ಲಿ ಮಾತ್ರ ಜಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಪರ ಕೇವಲ ಇಬ್ಬರು ಮಾತ್ರ 20ಕ್ಕೂ ಹೆಚ್ಚು ರನ್ಗಳಿಸಿದರು ಆರಂಭಿಕ ಬ್ಯಾಟರ್ ಫರ್ಹಾನ್ ಶಾಹಿಬ್ಜಾದಾ 40 ರನ್ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ಗಳ ಸಹಿತ 40 ರನ್ಗಳಿಸಿದರೆ, 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಶಾಹೀನ್ 16 ಎಸೆತಗಳಲ್ಲಿ 4 ಸಿಕ್ಸರ್ಗಗಳ ನೆರವಿನಿಂದ ಅಜೇಯತ 33 ರನ್ಗಳಿಸಿದರು. ಇವರನ್ನ ಹೊರೆತುಪಡಿಸಿದರೆ, ಫಖರ್ ಜಮಾನ್ 17, ಫಹೀಮ್ ಅಶ್ರಫ್ 11, ಸುಫಿಯಾನ್ ಮುಖೀಮ್ 10 ರನ್ಗಳಿಸಿದರು. ಉಳಿದವರೆಲ್ಲಾ ಒಂದಂಕಿ ಮೊತ್ತ ದಾಖಲಿಸಿದರು.
ಭಾರತದ ಪರ ಕುಲ್ದೀಪ್ ಯಾದವ್ 18ಕ್ಕೆ 3 ವಿಕೆಟ್, ಅಕ್ಷರ್ ಪಟೆಲ್ 18ಕ್ಕೆ 2 ವಿಕೆಟ್, ಜಸ್ಪ್ರೀತ್ ಬುಮ್ರಾ 28ಕ್ಕೆ2 ವಿಕೆಟ್ ಪಡೆದು ಮಿಂಚಿದರೆ, ಹಾರ್ದಿಕ್ ಪಾಂಡ್ಯ 34ಕ್ಕೆ1, ವರುಣ್ ಚಕ್ರವರ್ತಿ 24ಕ್ಕೆ1 ವಿಕೆಟ್ ಪಡೆದರು.
September 14, 2025 11:20 PM IST