Asia Cup: ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ಕಾರಣವೇನು? ಸ್ಪಷ್ಟನೆ ಕೊಟ್ಟ ಬಿಸಿಸಿಐ | BCCI Hits Back at Mohsin Naqvi Threatens Action Over Asia Cup Trophy Fiasco | ಕ್ರೀಡೆ

Asia Cup: ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ಕಾರಣವೇನು? ಸ್ಪಷ್ಟನೆ ಕೊಟ್ಟ ಬಿಸಿಸಿಐ | BCCI Hits Back at Mohsin Naqvi Threatens Action Over Asia Cup Trophy Fiasco | ಕ್ರೀಡೆ

Last Updated:

ಏಷ್ಯಾಕಪ್​ ಫೈನಲ್ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡವು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ (Mohsin Naqvi) ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಎಸಿಸಿ ಸಂಘಟಕರು ಟ್ರೋಫಿ ಮತ್ತು ವಿಜೇತರ ಪದಕಗಳನ್ನು ಭಾರತಕ್ಕೆ ನೀಡದೆ ವಾಪಸ್ ತೆಗೆದುಕೊಂಡು ಹೋದರು.

ಭಾರತ ತಂಡಭಾರತ ತಂಡ
ಭಾರತ ತಂಡ

ಏಷ್ಯಾ ಕಪ್ 2025ರ (Asia Cup Final) ಫೈನಲ್‌ನಲ್ಲಿ ಭಾರತ ತಂಡವು (Team India) ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿ ಒಂಬತ್ತನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ, ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡವು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ (Mohsin Naqvi) ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಎಸಿಸಿ ಸಂಘಟಕರು ಟ್ರೋಫಿ ಮತ್ತು ವಿಜೇತರ ಪದಕಗಳನ್ನು ಭಾರತಕ್ಕೆ ನೀಡದೆ ವಾಪಸ್ ತೆಗೆದುಕೊಂಡು ಹೋದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಧಿಗ್ಭ್ರಮೆಗೊಳಿಸಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.

ಬಿಸಿಸಿಐನ ಸ್ಪಷ್ಟನೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಭಾರತ ತಂಡದ ಈ ನಿರ್ಧಾರ ಉದ್ದೇಶಪೂರ್ವಕವಾಗಿತ್ತು ಎಂದು ಅವರು ಹೇಳಿದ್ದಾರೆ. “ಮೊಹ್ಸಿನ್ ನಖ್ವಿ ಕೇವಲ ಎಸಿಸಿ ಅಧ್ಯಕ್ಷರಷ್ಟೇ ಅಲ್ಲ, ಅವರು ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ. ಭಾರತದ ವಿರುದ್ಧ ವಿರೋಧಿ ಹೇಳಿಕೆಗಳನ್ನು ನೀಡಿರುವ ದೇಶದ ಪ್ರತಿನಿಧಿಯಿಂದ ಟ್ರೋಫಿಯನ್ನು ಸ್ವೀಕರಿಸುವುದು ನಮಗೆ ಸಾಧ್ಯವಿಲ್ಲ,” ಎಂದು ಸೈಕಿಯಾ ನೆಟ್‌ವರ್ಕ್ 18ಗೆ ತಿಳಿಸಿದ್ದಾರೆ.

ತಟಸ್ಥ ಎಸಿಸಿ ಅಧಿಕಾರಿಯಿಂದ ಸ್ವೀಕರಿಸಲು ಸಿದ್ಧ

ಭಾರತ ತಂಡವು ತಟಸ್ಥ ಎಸಿಸಿ ಅಧಿಕಾರಿಯಿಂದ ಟ್ರೋಫಿಯನ್ನು ಸ್ವೀಕರಿಸಲು ಸಿದ್ಧವಿತ್ತು. ಆದರೆ, ನಖ್ವಿಯೇ ಟ್ರೋಫಿಯನ್ನು ನೀಡಬೇಕೆಂದು ಒತ್ತಾಯಿಸಿದಾಗ, ತಂಡವು ಒಮ್ಮತದಿಂದ ತಿರಸ್ಕರಿಸುವ ನಿರ್ಧಾರ ಕೈಗೊಂಡಿತು. “ಇದೇನು ಆಕಸ್ಮಿಕ ನಿರ್ಧಾರವಲ್ಲ, ತಂಡದ ಎಲ್ಲಾ ಆಟಗಾರರೂ ಒಟ್ಟಾಗಿ ತೆಗೆದುಕೊಂಡ ನಿರ್ಧಾರವಾಗಿದೆ ” ಎಂದು ಸೈಕಿಯಾ ಹೇಳಿದರು.

ನಖ್ವಿಯ ವರ್ತನೆಗೆ ಆಕ್ಷೇಪ

ಪ್ರಶಸ್ತಿ ಪ್ರದಾನದ ಸಮಾರಂಭದಲ್ಲಿ, ನಖ್ವಿ ಟ್ರೋಫಿ ಮತ್ತು ಆಟಗಾರರಿಗೆ ನೀಡಬೇಕಿದ್ದ ಪದಕಗಳನ್ನು ತೆಗೆದುಕೊಂಡು ಹೋದರು ಎಂದು ಸೈಕಿಯಾ ಆರೋಪಿಸಿದ್ದಾರೆ. “ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಮತ್ತು ಎಸಿಸಿ ನಿಯಮಗಳಿಗೆ ಒಗ್ಗದ ವರ್ತನೆಯಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಶೀಘ್ರದಲ್ಲಿ ನಮಗೆ ಹಸ್ತಾಂತರಿಸಲಾಗುವುದೆಂದು ಭಾವಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ಬಿಸಿಸಿಐನಿಂದ ದೂರು

ಬಿಸಿಸಿಐ ಈ ವಿಷಯದ ಬಗ್ಗೆ ಎಸಿಸಿ ಮತ್ತು ಐಸಿಸಿಯಲ್ಲಿ ಔಪಚಾರಿಕ ದೂರು ದಾಖಲಿಸಲಿದೆ. “ಇಂತಹ ವರ್ತನೆಗೆ ಅವಕಾಶ ನೀಡಲಾಗದು. ಕ್ರಿಕೆಟ್ ಎಂದರೆ ನ್ಯಾಯಯುತ ಆಟ, ಆದರೆ ಇದು ಸಂಪೂರ್ಣವಾಗಿ ಅನ್ಯಾಯವಾದ ಕೃತ್ಯ,” ಎಂದು ಸೈಕಿಯಾ ತಿಳಿಸಿದರು. ಅಲ್ಲದೆ, ಗಡಿಯಲ್ಲಿ ನಡೆದ ‘ಆಪರೇಷನ್ ಸಿಂದೂರ್’ನಂತೆ, ಕ್ರೀಡಾಂಗಣದಲ್ಲೂ ಭಾರತವು ಪಾಕಿಸ್ತಾನವನ್ನು ಮಣಿಸಿದೆ ಎಂದು ಅವರು ಹೇಳಿದರು. “ಗಡಿಯಲ್ಲಿ ಆಪರೇಷನ್ ಸಿಂದೂರ್, ದುಬೈನಲ್ಲಿ ಆಪರೇಷನ್ ತಿಲಕ – ಭಾರತವು ಎಲ್ಲೆಡೆ ಗೆಲುವು ಸಾಧಿಸುತ್ತದೆ,” ಎಂದು ಸೈಕಿಯಾ ಹೇಳಿದ್ದಾರೆ.

ಈ ಘಟನೆಯು ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ಮತ್ತು ಎಸಿಸಿ ಈ ವಿವಾದಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.