ಕಳೆದ ಗುಂಪು ಹಂತದ ಪಂದ್ಯದಲ್ಲಿ ನಡೆದ ಹಸ್ತಲಾಘವ ವಿವಾದದ ನಂತರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಂಡಿ ಪೈಕ್ರಾಫ್ಟ್ ಅವರನ್ನು ತಂಡದಿಂದ ತೆಗೆದುಹಾಕುವಂತೆ ಪದೇ ಪದೇ ವಿನಂತಿಸಿದರೂ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಸೂಪರ್ 4 ಪಂದ್ಯಕ್ಕೆ ಮತ್ತೊಮ್ಮೆ ಅವರನ್ನು ಎಲೈಟ್ ಪ್ಯಾನಲ್ ರೆಫರಿಯಾಗಿ ಹೆಸರಿಸಿದೆ. ಇದು ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಮ್ಮೆ ಪಾಕ್ಗೆ ಮುಖಭಂಗವನ್ನುಂಟು ಮಾಡಿದೆ. ಐಸಿಸಿ ರೆಫ್ರಿ ಪೈಕ್ರಾಫ್ಟ್ ಅವರ ಬೆಂಬಲಕ್ಕೆ ನಿಂತಿದೆ.
ಈ ಸೂಪರ್ 4 ಪಂದ್ಯವು ಕಳೆದ ವಿವಾದ ನಡೆದ ಅದೇ ದುಬೈ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ-ಪಾಕ್ ನಡುವಿನ ಈ ಹೋರಾಟ ಏಷ್ಯಾ ಕಪ್ನಲ್ಲಿ ಎಲ್ಲರ ಗಮನ ಸೆಳೆದಿದೆ. ಕಳೆದ ಪಂದ್ಯದಲ್ಲಿ ಭಾರತ ಸುಲಭ ಗೆಲುವು ಸಾಧಿಸಿತ್ತು, ಆದರೆ ಹಸ್ತಲಾಘವ ವಿಷಯವು ಇನ್ನೂ ಚರ್ಚೆಯಲ್ಲಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ಆಟದ ಮೂಲಕ ಉತ್ತರ ನೀಡುವ ಸಾಧ್ಯತೆ ಇದೆ.
ಎರಡೂ ತಂಡಗಳು ಟಿ20 ಕ್ರಿಕೆಟ್ನಲ್ಲಿ ಇದುವರೆದ್ದು 14 ಪಂದ್ಯಗಳು ನಡೆದಿದ್ದು, ಭಾರತ 11 ಗೆಲುವುಗಳೊಂದಿಗೆ ಮುಂದಿದೆ. ಪಾಕಿಸ್ತಾನ ಕೇವಲ 3ರಲ್ಲಿ ಗೆಲುವು ಪಡೆದಿದೆ. ಅವುಗಳಲ್ಲಿ 2022 ಏಷ್ಯಾ ಕಪ್ನಲ್ಲಿ ಒಂದಾಗಿದೆ. ಕಳೆದ 5 ವರ್ಷಗಳಲ್ಲಿ (2020-2025) 6 ಪಂದ್ಯಗಳಲ್ಲಿ ಭಾರತ 4-2ರಿಂದ ಮುಂದಿದೆ.
ಒಮಾನ್ ವಿರುದ್ಧದ ಕಳೆದ ಪಂದ್ಯದಲ್ಲಿ ಭಾರತ ತಂಡವು ತನ್ನ ಪ್ರಮುಖ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಿತ್ತು. ಆದರೆ, ಈ ಪಂದ್ಯಕ್ಕೆ ಇಬ್ಬರೂ ಆಟಗಾರರು ಲಭ್ಯರಿರುವುದು ಖಚಿತವಾಗಿದೆ. ಆದರೆ, ಫೀಲ್ಡಿಂಗ್ ವೇಳೆ ತಲೆಗೆ ಗಾಯಗೊಂಡ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಆಡುವುದು ಅನುಮಾನಾಸ್ಪದವಾಗಿದೆ. ಆದ್ದರಿಂದ, ಅವರ ಸ್ಥಾನಕ್ಕೆ ಅರ್ಶದೀಪ್ ಸಿಂಗ್ ಆಡುವ ಸಾಧ್ಯತೆ ಇದೆ. ತಂಡದ ಉಳಿದ ಆಟಗಾರರಲ್ಲಿ ಯಾವುದೇ ಬದಲಾವಣೆ ಇರುವ ಸಾಧ್ಯತೆ ಇಲ್ಲ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್.
ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಹಸನ್ ನವಾಜ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಖುಷ್ದಿಲ್ ಶಾ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್, ಸುಫಿಯಾನ್ ಮುಖೀಮ್, ಮೊಹಮ್ಮದ್ ಮುಖೀಮ್, ಸಲ್ಮಾನ್ ಅಹ್ಮದ್.
September 21, 2025 4:43 PM IST