Last Updated:
ಭಾರತ ಮತ್ತು ಪಾಕಿಸ್ತಾನದ ನಡುವೆ ಸೂಪರ್ 4 ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರರು ಆಕ್ಷೇಪಾರ್ಹ ಪದ ಹಾಗೂ ಸನ್ನೆಗಳನ್ನ ಬಳಸಿದ್ದಕ್ಕೆ ಪಾಕಿಸ್ತಾನ ಆಟಗಾರರಿಗೆ ಹಾಗೂ ಕ್ರಿಕೆಟ್ ಆಟದಲ್ಲಿ ರಾಜಕೀಯ ತಂದಿದ್ದಕ್ಕೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ಗೆ ಐಸಿಸಿ ದಂಡವನ್ನ ವಿಧಿಸಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ರಾಜಕೀಯ ಸಂಬಂಧಿತ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ. ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ (Richy Richerdson) ನಡೆಸಿದ ವಿಚಾರಣೆಯಲ್ಲಿ ಸೂರ್ಯಕುಮಾರ್ ರಾಜಕೀಯ ಹೇಳಿಕೆ ನೀಡಿರುವುದರಿಂದ ಅವರ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಆರೋಪ ನಿಜವಾಗಿದೆ. ಭಾರತದ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡವಾಗಿ ವಿಧಿಸಿದೆ. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ಗೂ ಕೂಡ ಶೇ.30 ರಷ್ಟು ದಂಡವನ್ನ ವಿಧಿಲಾಗಿದೆ. ಆದರೆ ಫರ್ಹಾನ್ ದಂಡದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಅವರಿಗೆ ಆ ರೀತಿಯ ಸಂಭ್ರಮಾಚರಣೆಯನ್ನ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ.
ಸೆಪ್ಟೆಂಬರ್ 14ರಂದು ಏಷ್ಯಾ ಕಪ್ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯ ನಂತರದ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಸೂರ್ಯಕುಮಾರ್ ಯಾದವ್ ತಂಡದ ಗೆಲುವನ್ನು “ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸುತ್ತೇನೆ” ಎಂದು ಹೇಳಿದರು. ಅವರು “ಆಪರೇಷನ್ ಸಿಂಧೂರ್” ಎಂಬ ಪದವನ್ನು ಬಳಸಿದ್ದರು.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಸಿಬಿ) ಈ ಹೇಳಿಕೆಯನ್ನು “ರಾಜಕೀಯ ಸಂಬಂಧಿತ” ಎಂದು ಆರೋಪಿಸಿ, ಐಸಿಸಿಗೆ ಅಧಿಕೃತ ದೂರು ದಾಖಲಿಸಿತು. ಪಿಸಿಸಿಬಿಯ ಹಿರಿಯ ಅಧಿಕಾರಿಗಳು ಕಳೆದ ವಾರ ಲಾಹೋರ್ ಸುದ್ದಿಗೋಷ್ಠಿಯಲ್ಲಿ ಈ ದೂರನ್ನು ಪುನರಾವರ್ತಿಸಿದರು. “ಆಪರೇಷನ್ ಸಿಂಧೂರ್” ಎಂಬ ಪದ ಇದು ಭಾರತ-ಪಾಕ್ ಸೈನ್ಯ ಸಂಘರ್ಷದ ಸಂದರ್ಭದಲ್ಲಿ ಬಳಸಲ್ಪಟ್ಟಿದ್ದು, ಕ್ರಿಕೆಟ್ ಮೈದಾನಕ್ಕೆ ರಾಜಕೀಯವನ್ನು ತರಲು ಪ್ರಯತ್ನ ಮಾಡಿದ್ದಾರೆಂದು ಸೂರ್ಯಕುಮಾರ್ ವಿರುದ್ಧ ದೂರಿದ್ದರು.
ದುಬೈಯಲ್ಲಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನಡೆಸಿದ ವಿಚಾರಣೆಯಲ್ಲಿ ಸೂರ್ಯಕುಮಾರ್ ಯಾದವ್ ಹಾಜರಾದರು. ಬಿಸಿಸಿಐ ಸಿಇಒ ಹೇಮಂಗ್ ಅಮಿನ್ ಮತ್ತು ಕ್ರಿಕೆಟ್ ಆಪರೇಷನ್ಸ್ ಮ್ಯಾನೇಜರ್ ಸುಮೀತ್ ಮಲ್ಲಪುರ್ಕರ್ ಸಹ ಜೊತೆಗಿದ್ದರು.
ವಿಚಾರಣೆ ವೇಳೆ ಸೂರ್ಯಕುಮಾರ್ ತಾವೂ ತಪ್ಪಿತಸ್ಥರಲ್ಲ ಎಂದು ವಾದಿಸಿದರು. ಅವರ ಹೇಳಿಕೆಗಳು ಒಗ್ಗಟ್ಟು ಮತ್ತು ಸಹಾನುಭೂತಿಯ ಸಂದೇಶವಾಗಿದ್ದವು, ರಾಜಕೀಯವಲ್ಲ ಎಂದು ಹೇಳಿದ್ದರು. ಆದರೆ ಐಸಿಸಿ ಇದನ್ನು ಲೆವೆಲ್ 1 ಉಲ್ಲಂಘನೆ ಎಂದು ಕರೆದು, ಸೂರ್ಯಕುಮಾರ್ ಅವರಿಗೆ ಔಪಚಾರಿಕ ಎಚ್ಚರಿಕೆ ನೀಡಿ, ಪಂದ್ಯದ ಸಂಭಾವನೆಯ ಶೇ. 30 ರಷ್ಟು ದಂಡವಾಗಿ ವಿಧಿಸಲಾಗಿದೆ. ಜೊತೆಗೆ ಭವಿಷ್ಯದಲ್ಲಿ ರಾಜಕೀಯ ಸಂಬಂಧಿತ ಹೇಳಿಕೆಗಳನ್ನು ತಪ್ಪಿಸಿ ಎಂದು ಸೂಚಿಸಲಾಗಿದೆ. ಇದು ಏಷ್ಯಾ ಕಪ್‌ನ ಉಳಿದ ಸಮಯದಲ್ಲಿ ಅನ್ವಯವಾಗುತ್ತದೆ.
ಭಾರತ ಕ್ರಿಕೆಟ್ ಮಂಡಳಿ ಕೂಡ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ರೌಫ್ ವಿರುದ್ಧ ದೂರು ದಾಖಲಿಸಿತ್ತು. ಅರ್ಧಶತಕ ತಲುಪಿದ ನಂತರ ಫರ್ಹಾನ್ AK-47 ರೈಫಲ್ ಫೈರಿಂಗ್ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಯಿತು. ಹ್ಯಾರಿಸ್ ರೌಫ್ ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗಿದಾಗ, ವಿಮಾನ ಬೀಳುವಂತೆ ಸನ್ನೆ ಮಾಡಿದರು (ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ). ಬಿಸಿಸಿಐ ಇದನ್ನು “ಭಾರತೀಯ ಸೇನೆಯನ್ನು ನಿಂದಿಸುವುದು” ಎಂದು ಕರೆದು ದೂರು ದಾಖಲಿಸಿತ್ತು.
ಇವರಬ್ಬರನ್ನೂ ವಿಚಾರಣೆ ನಡೆಸಿದ ಮ್ಯಾಚ್ ರೆಫ್ರಿ, ರೌಫ್ಗೆ ಪಂದ್ಯ ಸಂಭಾವನೆಯ ಶೇ.30 ರಷ್ಟು ದಂಡವನ್ನ ವಿಧಿಸಿ, ಮತ್ತೊಮ್ಮೆ ಈ ರೀತಿಯ ವರ್ತನೆ ಮಾಡದಿರಲು ಸೂಚಿಸಿದೆ. ಫರ್ಹಾನ್ ತಮ್ಮ ಸಂಭ್ರಮಾಚರಣೆ ತಮ್ಮ ಬುಡಕಟ್ಟು ಸಮುದಾಯದ ಸಂಭ್ರಮ, ಅಲ್ಲದೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಈ ಹಿಂದೆ ಇದೇ ರೀತಿಯ ಸಂಭ್ರಮಾಚರಣೆ ಮಾಡಿದ್ದಾರೆಂದು ವಾದಿಸಿ ದಂಡದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಐಸಿಸಿ ಅವರಿಗೂ ಈ ರೀತಿಯ ಸಂಭ್ರಮಾಚಾರಣೆ ಮಾಡದಂತೆ ಸೂಚಿಸಿ ಎಚ್ಚರಿಕೆ ನೀಡಿದೆ.
ವಿಚಾರಣೆ ಅಂತ್ಯವಾಗಿ, ಶಿಕ್ಷೆಯೂ ಪ್ರಕಟವಾಗಿದ್ದು, ಇದೀಗ ಭಾನುವಾರ ನಡೆಯುವ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಈ ಘಟನೆಗಳು ಮತ್ತಷ್ಟು ರೋಚಕತೆಯನ್ನ ತರಲಿವೆ.
September 26, 2025 7:18 PM IST